ಬೆಂಗಳೂರು: ಸರ್ಕಾರಿ ಶಾಲೆಗಳ ಜಾಗದ ಮೇಲೆ ರಿಯಲ್ ಎಸ್ಟೇಟ್, ಭೂಮಾಫಿಯಾದವರ ಕಣ್ಣು ಬಿದ್ದಿದ್ದು, ಕಬಳಿಸುವ ಹುನ್ನಾರ ನಡೆಯುತ್ತಿವೆ. ಹೀಗಾಗಿ, ಈ ಜಾಗಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಆಸ್ತಿ ಸಂರಕ್ಷಣಾ ಅಭಿಯಾನ ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು(ಸೆಪ್ಟಂಬರ್ 05) ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ದೂರುಗಳನ್ನು ಸ್ವೀಕರಿಸಲು ಹಾಗೂ ತನಿಖೆ ನಡೆಸಲು ಪ್ರತ್ಯೇಕ ಆಯೋಗ ರಚಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ರೂಪುರೇಷೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಖಾಸಗಿ ಶಾಲೆಗಳಿಗೆ ನೀಡಲಾದ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರಗಳ(ಎನ್‌ಒಸಿ) ವಿರುದ್ಧ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು. ಭ್ರಷ್ಟಾಚಾರದಲ್ಲಿ ತೊಡಗಿರುವ ಶಿಕ್ಷಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳು ನಕಲಿ ಎನ್‌ಒಸಿ ಪಡೆದ ಹಲವಾರು ನಿದರ್ಶನಗಳಿವೆ. ಇಲಾಖೆಯಲ್ಲಿ ಕೆಳಹಂತದ ಅಧಿಕಾರಿಗಳ ಮೂಲಕ ಶಾಲೆಗಳು ಪರವಾನಗಿ ಪಡೆಯುತ್ತಿವೆ. ಇದರೊಂದಿಗೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಶಿಕ್ಷಣಾಧಿಕಾರಿಗಳ ವಿರುದ್ಧವೂ ಆರೋಪಗಳು ಇವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಆರೋಪಗಳನ್ನು ಪರಿಶೀಲಿಸಲು ಆಯೋಗವನ್ನು ರಚಿಸುತ್ತದೆ ಮತ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ’ ಎಂದು ಸಚಿವ ನಾಗೇಶ್ ಹೇಳಿದರು.
ಸರ್ಕಾರಿ ಶಾಲೆಗಳ ಜಾಗಗಳನ್ನು ಕಬಳಿಸಲು ಹೊಂಚು ಹಾಕುತ್ತಿರುವುದು ನಡೆಯುತ್ತಲೇ ಇವೆ. ಈಗಾಗಲೇ ನಾಲ್ಕು ಸಾವಿರ ಶಾಲೆಗಳ ದಾಖಲೆಗಳನ್ನು ಕ್ರಮಬದ್ಧಗೊಳಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ವ್ಯವಸ್ಥಿತ ದಾಖಲೀಕರಣ ಕಳೆದ ಮೂರು ತಿಂಗಳಿಂದ ಪ್ರಗತಿಯಲ್ಲಿದೆ. ಈಗಾಗಲೇ ಮೂರ್ನಾಲ್ಕು ಸಾವಿರ ಶಾಲೆಗಳ ದಾಖಲೀಕರಣ ಮುಗಿದಿದೆ. ಇನ್ನೂ ಏಳು ಸಾವಿರ ಶಾಲೆಗಳ ದಾಖಲೆಗಳ ಕ್ರೋಢೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಶಿಕ್ಷಕರಿಗೆ ಪ್ರಶಸ್ತಿ ನೀಡುವ ವ್ಯವಸ್ಥೆ ಪಾರದರ್ಶಕವಾಗಿದ್ದು, ಯಾರ ಪ್ರಭಾವಕ್ಕೆ, ಒತ್ತಡಕ್ಕೆ ಒಳಗಾಗಿಲ್ಲ. ಮುಖ್ಯಮಂತ್ರಿ ಕಚೇರಿಯಿಂದಲೂ ಹಸ್ತಕ್ಷೇಪ ನಡೆದಿಲ್ಲ ಎಂದು ತಿಳಿಸಿದ ಸಚಿವರು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಶಿಕ್ಷಕರನ್ನು ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಹಲವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
ದೇಶದ ನೈಜ ಇತಿಹಾಸ, ಸ್ವಾತಂತ್ರ್ಯ ಹೋರಾಟ, ಸಂಸ್ಕೃತಿ, ಪರಂಪರೆ, ವೇದೋಪನಿಷತ್ ಬಗ್ಗೆ ಮಿಥ್ಯ ಮಾಹಿತಿಯುಳ್ಳ ಪಠ್ಯ ಪರಿಷ್ಕರಿಸಲಾಗಿದೆ ಎಂದು ಬಿ.ಸಿ.ನಾಗೇಶ್ ಸಮರ್ಥಿಸಿಕೊಂಡರು.