ಭ್ರಷ್ಟಾಚಾರ ನಡೆಸುವುದು ಬಿಜೆಪಿಗೆ ಕಾನೂನು ಬಾಹಿರವಲ್ಲ; ಬಿ.ಕೆ. ಹರಿಪ್ರಸಾದ್‌

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಭ್ರಷ್ಟಾಚಾರ, ಲಂಚ ತೆಗೆದುಕೊಳ್ಳುವುದು ಕಾರ್ಯಕ್ರಮವಾಗಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವರುಗಳು ನೇರವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ನಡೆಸುವುದು ಬಿಜೆಪಿಗೆ ಕಾನೂನು ಬಾಹಿರ ಅಂಶವೇ ಅಲ್ಲ. 40% ಕಮಿಷನ್ ತಗೆದುಕೊಂಡು ಭ್ರಷ್ಟಾಚಾರ ನಡೆಸುವವರು ಬಿಜೆಪಿಯವರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್‌,  ಅಧಿಕಾರಿಗಳು ಸಚಿವರುಗಳಿಗೆ ಲಂಚ ನೀಡಬೇಕೆಂದು ಗಂಭೀರವಾಗಿ ಆರೋಪ ಮಾಡಿರುವ ಆಡಿಯೋಗಳು ವೈರಲ್ ಆಗುತ್ತಿದೆ. 15 ಲಕ್ಷ ಸಚಿವ ಭೈರತಿ ಬಸವರಾಜ್ ಅವರಿಗೆ ನೀಡಬೇಕೆಂದು ಅಧಿಕಾರಿಗಳು ಹೇಳಿರುವುದು ಹೊಸ ವಿಚಾರವೇನಲ್ಲ. ಪಿಎಸ್‌ಐ ನೇಮಕಾತಿಯಲ್ಲಿ ಭ್ರಷ್ಟಾಚಾರ, ವರ್ಗವಣೆಯಲ್ಲಿ ಲಂಚ ಹೀಗೆ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ಸತೀಶ್‌ ಮೌಡ್ಯಾಚರಣೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ

ಸತೀಶ್‌ ಜಾರಕಿಹೊಳಿ ಅವರ ಹಿಂದೂ ಪದದ ಹೇಳಿಕೆ ಅವರ ವಯಕ್ತಿಕ ವಿಷಯ. ಪ್ರಜಾಪ್ರಭುತ್ವದಲ್ಲಿ ವಯಕ್ತಿಕವಾಗಿ ಮಾತನಾಡುವ ಎಲ್ಲಾ ಹಕ್ಕಿದೆ. ಸತೀಶ್ ಜಾರಕಿಹೊಳಿ ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳಿಂದ ರಾಜಕೀಯ ಪ್ರಾರಂಭ ಮಾಡಿದವರು. ಮಾನವ ಬಂಧುತ್ವ ವೇದಿಕೆಯ ಮೂಲಕ ಮೌಡ್ಯಾಚರಣೆ ವಿರುದ್ಧ ಜಾಗೃತಿ ನಡೆಸುತ್ತಿದ್ದಾರೆ. ವೈಚಾರಿಕ ವಿಷಯಗಳನ್ನ ಜನರಿಗೆ ತಲುಪಿಸುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಸತೀಶ್ ಜಾರಕಿಹೊಳಿಯವರ ರಾಜಕೀಯ ಹಿನ್ನಲೆ ಗೊತ್ತಿದೆ. ಅಲ್ಲಿನ ಜನರಿಗೆ ಅದು ವಿವಾದವೆಂದು ಭಾವಿಸುವುದಿಲ್ಲ. ಹೇಳಿಕೆಯಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸತೀಶ್ ಜಾರಕಿಹೊಳಿ ಕೂಡ ಒಬ್ಬ ಹಿಂದೂ. ಹಿಂದೂ ಧರ್ಮದ ಒಳಗೆ ಇರುವ ಅಸಮಾನತೆಗಳ ಬಗ್ಗೆ ಅವರು ಮಾನವ ಬಂಧುತ್ವ ವೇದಿಕೆಯಲ್ಲಿ ಮಾತನಾಡಿದ್ದಾರೆ. ಅದನ್ನ ಅನಗತ್ಯ ವಿವಾದ ಮಾಡಬಾರದು ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ನಾನು ಸ್ವಾಭಿಮಾನಿ ಹಿಂದು ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಿರಬಹುದು. ಆದರೆ ಬಿಜೆಪಿಯ ಹಿಂದುತ್ವವಾದಿಗಳಿಗೂ ಹಿಂದೂ ಧರ್ಮಕ್ಕೂ ಸಂಬಂಧವೇ ಇಲ್ಲ. ಸಾವರ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧವೇ ಇಲ್ಲವೆಂದು. ಬಿಜೆಪಿ ನಾಯಕಿ ದಿವಂಗತ ಸುಶ್ಮಾ ಸ್ವರಾಜ್ ಅವರೇ ಹೇಳಿದ್ದಾರೆ ಚುನಾವಣಾ ಭಾಷಣದಲ್ಲಿ, ರಾಮಮಂದಿರ ಚುನಾವಣಾ ವಿಷಯವೇ ಹೊರತು ಹಿಂದೂ ಧರ್ಮದ್ದಲ್ಲ ಎಂದು. ಹಿಂದೂ ಧರ್ಮ ಬಿಜೆಪಿಯ ಗುತ್ತಿಗೆಯಲ್ಲ, ಬಿಜೆಪಿಯವರು ಹಿಂದೂ ಧರ್ಮದ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮಲ್ಲಿ ಯಾವ ಪವರ್‌ ಪಾಯಿಂಟ್‌ ಇಲ್ಲ

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಕೇವಲ ಕರ್ನಾಟಕಕ್ಕೆ ಮಾತ್ರ ಶಕ್ತಿಯಲ್ಲ, ಇಡೀ ದೇಶಕ್ಕೆ ಶಕ್ತಿ. ಎಐಸಿಸಿ ಅಧ್ಯಕ್ಷರಿಗಿರುವ ಶಕ್ತಿಯೇ ಬೇರೆ. ನಮ್ಮಲ್ಲಿ ಯಾವ ಪವರ್ ಪಾಯಿಂಟ್ ಇಲ್ಲ, ಕೇವಲ ಕಾಂಗ್ರೆಸ್ ಪವರ್ ಪಾಯಿಂಟ್ ಮಾತ್ರ ಇದೆ. ಖರ್ಗೆ ಅವರಿಗೆ ಟಿಕೆಟ್ ಕೊಡಿ ಅಂತಾ ಆಕಾಂಕ್ಷಿಗಳು ಹೋಗುವುದರಲ್ಲಿ ತಪ್ಪೇನಿದೆ ಎಂದು ಬಿ.ಕೆ. ಹರಿಪ್ರಸಾದ್‌ ಪ್ರಶ್ನಿಸಿದರು.

ಬಿಜೆಪಿಯಲ್ಲಿ ಕೇಶವ ಕೃಪಕ್ಕೆ ಅರ್ಜಿ ಸಲ್ಲಿಸಬೇಕು, ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ಒಂದು ಸಮಿತಿ ಇದೆ. ಆಂತರಿಕ ಪ್ರಜಾಪ್ರಭುತ್ವ ಇದೆ. ಬಿಜೆಪಿಯಲ್ಲಿ ನಳೀನ್ ಕುಮಾರ್ ಕಟೀಲ್ ಗೆ ಅರ್ಜಿ ಸಲ್ಲಿಸಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳನ್ನ ಚುನಾವಣಾ ಸಮಿತಿ ತೀರ್ಮಾನ ಮಾಡಲಿದೆ. ಎಲ್ಲಾ ಹಂತದಲ್ಲೂ ಸಮಿತಿಗಳಿವೆ. ಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು ಸೇರಿದಂತೆ ಹಿರಿಯ ನಾಯಕರು ಸಮಿತಿಯಲ್ಲಿ ಇರಲಿದ್ದಾರೆ. ವಲಸಿಗರು, ಪ್ರವಾಸಿಗರು ಯಾರೇ ಬಂದರು ಸ್ವಾಗತ ಇದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿರುವವರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಕೇವಲ ರಾಜ್ಯದ ನಾಯಕರು ಅಂತ ಸೀಮಿತ ಮಾಡಬೇಡಿ. ಖರ್ಗೆಯವರ ಭುಜ ಎಷ್ಟು ಅಗಲವಾಗಿದೆಯೋ ಅದಕ್ಕಿಂತ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅದನ್ನ ಅವರು ನಿಭಾಯಿಸುತ್ತಾರೆ. ಸೋನಿಯಾ ಗಾಂಧಿ ಅವರನ್ನ, ರಾಹುಲ್ ಗಾಂಧಿ ಅವರನ್ನ ನಂಬಿ ಯಾರಾದ್ರು ಪಕ್ಷಕ್ಕೆ ಬರಬಹುದು ಎಂದು ಮುಕ್ತವಾಗಿ ಆಹ್ವಾನ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *