ಮಂಜುನಾಥ ದಾಸನಪುರ
ಕರ್ನಾಟಕ ರಾಜ್ಯ ಚುನಾವಣೆಯ ಹೊಸ್ತಿನಲ್ಲಿ ನಿಂತಿದೆ. ಕೇಂದ್ರ ಚುನಾವಣಾ ಆಯೋಗ ಚುನಾವಣಾ ಅಧಿಸೂಚನೆ ಹೊರಡಿಸಿದ್ದು, ಮೇ 10ಕ್ಕೆ ಮತದಾನ, ಮೇ13ಕ್ಕೆ ಮತ ಎಣಿಕೆಗೆ ದಿನಾಂಕ ನಿಗದಿ ಪಡಿಸಿದೆ. ಈ ಹಿನ್ನೆಲೆಯಲ್ಲಿ ಇವತ್ತಿನಿಂದಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.
ಈಗ ಚುನಾವಣೆ ಮುಗಿಯುವವರೆಗೆ ಮತದಾರರೇ ಪ್ರಭುಗಳಾಗಿದ್ದು, ವಿವಿಧ ಪಕ್ಷಗಳು, ಜನಪ್ರತಿನಿಧಿಗಳು ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳುವ ನಿಟ್ಟಿನಲ್ಲಿ ಆಸೆ, ಆಮಿಷಗಳಿಗೆ ಒಡ್ಡುವಂತಹ ಪ್ರಕ್ರಿಯೆಗೆ ಕಳೆದ ಎರಡು ಮೂರು ತಿಂಗಳ ಹಿಂದೆಯೇ ಚಾಲನೆ ಕೊಟ್ಟಿದ್ದಾರೆ. ಇಡೀ ಪ್ರಪಂಚದ ಜ್ಞಾನವನ್ನು ತನ್ನ ಅಂಗೈನಲ್ಲಿ ನೋಡಬಹುದಾದಂತಹ ತಂತ್ರಜ್ಞಾನದ ಕಾಲದಲ್ಲಿಯೂ ಜನಪ್ರತಿನಿಧಿಗಳು ಮತದಾರರನ್ನು ಮರಳು ಮಾಡಲು ನಿರತರಾಗಿರುವುದು ಸೋಜಿಗವೇ ಸರಿ.
ತಂತ್ರಜ್ಞಾನ ಇಲ್ಲದ ದಿನಗಳಲ್ಲಿ ಪತ್ರಿಕೆಗಳ ಸುದ್ದಿ ಹಾಗೂ ಗಾಳಿ ಸುದ್ದಿಗಳನ್ನೆ ನಂಬಿಕೊಂಡು ಬಹುತೇಕ ಮತದಾರರು ತಾವು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ಕೈಯಲ್ಲೇ ಇಡೀ ವಿಶ್ವವನ್ನು ನೋಡುವಂತಹ ಅಂಗೈ ಅಗಲದ ಮೊಬೈಲ್ ಎಂಬ ಮಾಯಾ ಜಾಲವಿದೆ. ಇದರಲ್ಲಿ ಆ ಕ್ಷಣದ ಆಗುಹೋಗುಗಳನ್ನು ಆ ಕ್ಷಣವೇ ತಾವು ಕುಳಿತಿರುವ ಕುಗ್ರಾಮಗಳಲ್ಲೇ ನೋಡುವಂತಹ ವ್ಯವಸ್ಥೆ ಇದೆ. ಹಾಗಿದ್ದರೂ ಚುನಾವಣೆಯಲ್ಲಿ ಬಹುತೇಕ ಭ್ರಷ್ಟಾಚಾರಿ, ಕೋಮುವಾದಿಗಳೇ ಆಯ್ಕೆ ಆಗುತ್ತಿರುವುದರ ಕುರಿತು ಪ್ರತಿಯೊಬ್ಬ ಮತದಾರ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಇದು ಸಕಾಲ ಎಂದೆನಿಸುತ್ತದೆ.
ಅಂಗೈ ಹುಣ್ಣಿಗೆ ಸಾಕ್ಷಿ ಬೇಕೆ
ಮಡಿಕೆಯಲ್ಲಿ ಬೇಯಿಸಲು ಇಟ್ಟಿರುವ ಅಕ್ಕಿ ಬೆಂದಿದೆಯೇ ಇಲ್ಲವೇ ಎಂದು ನೋಡಲು ಒಂದು ಅಗಳನ್ನು ನೋಡಿದರೆ ಸಾಕು ತಿಳಿಯುತ್ತದೆ. ಇದಕ್ಕೆ ಹೆಚ್ಚಿನ ಜ್ಞಾನ ಬೇಕಿಲ್ಲ. ಹಾಗೆಯೇ ನಮ್ಮನ್ನಾಳುವ ಪಕ್ಷಗಳು ಜನಪರವಾಗಿ ಇದಿಯೇ ಇಲ್ಲವೇ ಎಂದು ನೋಡಲು ಆ ಸರ್ಕಾರ ಜಾರಿ ಮಾಡುವ ಯಾವುದಾದ್ರು ಒಂದು ಕಾರ್ಯಕ್ರಮವನ್ನು ಕೂಲಂಕುಶವಾಗಿ ಪರೀಕ್ಷಿಸಿದರೆ ಸಾಕು ಆ ಸರ್ಕಾರದ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ಕಣ್ಣಿಗೆ ರಾಚುತ್ತವೆ. ಅತಿ ಮುಖ್ಯವಾಗಿ ಅಡುಗೆ ಎಣ್ಣೆಯಿಂದ ಹಿಡಿದು ಎಲ್ಲ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಕೊಳ್ಳುವ ಶಕ್ತಿಯನ್ನೆ ಕಸಿದುಕೊಂಡಿದೆ. ಆ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡದಂತಹ ದುಸ್ಥಿತಿಗೆ ತಳ್ಳಿದೆ.
ಹಾಗೆಯೇ 60ರೂ. ಆಸುಪಾಸಿನಲ್ಲಿದ್ದ ಪೆಟ್ರೋಲ್ ದರವನ್ನು ನೂರರ ಗಡಿ ದಾಟಿಸಲಾಗಿದೆ. 400 ರೂ ಆಸುಪಾಸಿನಲ್ಲಿದ್ದ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು 1000 ರೂ.ಗಳ ಗಡಿ ದಾಟಿಸಿದ್ದಾರೆ. ಪೆಟ್ರೋಲ್ ಹಾಗೂ ಗ್ಯಾಸ್ ದರದ ಏರಿಕೆಯಿಂದಾಗಿ ಎಲ್ಲ ವಸ್ತುಗಳ ಬೆಲೆ ತಾನಾಗಿಯೇ ಏರಿಕೆ ಆಗುವಂತೆ ಮಾಡಲಾಗಿದೆ.
ಬೆಲೆ ಏರಿಕೆಯಿಂದ ನಮಗೆ ಕಷ್ಟ ಆಗುತ್ತಿದೆಯೆಂದು ಜನತೆ ಸಚಿವರುಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರೆ, ಟಿಪ್ಪು ದೇಶದ್ರೋಹಿಯೆಂದು, ಮುಸ್ಲಿಮರು ನಿಮ್ಮ ಶತ್ರುಗಳೆಂದು ಜನರ ಮಧ್ಯೆ ದ್ವೇಷ ಭಿತ್ತುವಂತಹ ಅಪಾಯಕಾರಿ ಹೇಳಿಕೆಗಳನ್ನು ಯಾವುದೇ ನಾಚಿಕೆಯಿಲ್ಲದೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಾರೆ.
ಬಿಜೆಪಿಯ ಸಾಧನೆ ಬೆಲೆ ಏರಿಕೆ ಒಂದೇ ಅಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿಲ್ಲ. 10-15 ವರ್ಷ ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ ರೂ. ಸಾಲ ಸೋಲ ಮಾಡಿ ವಿದ್ಯಾಭ್ಯಾಸ ಮಾಡಿದವರು, ತಮ್ಮ ಓದಿಗೆ ಸೂಕ್ತ ಉದ್ಯೋಗ ಸಿಗದೆ ಯುವ ಜನತೆಯನ್ನು ಮಾನಸಿಕ ಖಿನ್ನತೆಗೆ ದೂಡಲಾಗುತ್ತಿದೆ. ಇನ್ನು ಕಾರ್ಮಿಕರ, ರೈತರಪರ ಕಾನೂನುಗಳನ್ನು ದುರ್ಬಲ ಗೊಳಿಸಿ ಬಂಡವಾಳಶಾಹಿ ಪರವಾದ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಇದರಿಂದ ಜನತೆಗೆ ಹುಟ್ಟಿದ ಕಾರಣಕ್ಕಾಗಿ ಬದುಕಬೇಕಲ್ಲ ಎಂಬ ಸ್ಥಿತಿಗೆ ಬರುವಂತೆ ಮಾಡಿರುವುದು ಬಿಜೆಪಿ ಸರ್ಕಾರದ ದೊಡ್ಡ ಸಾಧನೆಯಾಗಿದೆ.
ಇಷ್ಟೆಲ್ಲ ಜನವಿರೋಧಿ ನೀತಿಗಳನ್ನು ಜಾರಿ ಮಾಡಿದ ನಂತರವೂ ಜನಪ್ರತಿನಿಧಿಗಳು, ಯಾವ ಧೈರ್ಯ, ಭರವಸೆ ಮೇಲೆ ಜನರ ಬಳಿಗೆ ಮತ ಕೇಳಲು ಹೋಗುತ್ತಾರೆ. ಜನತೆ ಭ್ರಷ್ಟ, ಕೋಮುವಾದಿ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕದ ಹೊರತು ಅವರು ಬುದ್ಧಿ ಕಲಿಯುವವರಲ್ಲ. ಆ ನಿಟ್ಟಿನಲ್ಲಿ ಮತದಾರರು ಈ ಬಾರಿ ಚುನಾವಣೆಯಲ್ಲಿ ಪ್ರಜ್ಞಾವಂತಿಕೆ ಹಾಗೂ ಛಲಗಾರಿಕೆಯನ್ನು ಮೆರೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ