ಬೆಂಗಳೂರು: ಬಿಜೆಪಿ ಆಡಳಿತದ ವಿರುದ್ಧ ಹೋರಾಟ ಮಾಡುವುದು ಬೇಡವೇ? ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ನಮ್ಮ ಕಾರ್ಯಕರ್ತರನ್ನು ಬಂಧಿಸಿರುವುದು ಸರಿಯಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದುವರೆಗೂ ಐವರು ಕೆಪಿಸಿಸಿ ಸಾಮಾಜಿಕ ಜಾಲತಾಣದ ಸದಸ್ಯರನ್ನು ಬಂಧಿಸಿದೆ. ನಾಳೆ ನಾನೇ ಪೇಸಿಎಂ ಭಿತ್ತಿಚಿತ್ರವನ್ನು ಅಂಟಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಅಧಿವೇಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವು ಸರ್ಕಾರದ 40% ಕಮಿಷನ್ ವಿರುದ್ಧ ಆಂದೋಲನವನ್ನು ಹಮ್ಮಿಕೊಂಡಿದೆ. ನಾನು, ಡಿ ಕೆ ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ. ಅದರ ಅಂಗವಾಗಿಯೇ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ. ಬಿಜೆಪಿಯೂ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ನಮ್ಮ ವಿರುದ್ಧವೂ ಅವರು ಭಿತ್ತಿಚಿತ್ರಗಳನ್ನು ಅಂಟಿಸಿದ್ದಾರೆ ಅಲ್ವಾ? ಅವರನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಸಾಮಾಜಿಕ ಜಾಲತಾಣ ವಿಭಾಗದ ಬಿ.ಆರ್ ನಾಯ್ಡು ಅವರನ್ನು ಬಂಧಿಸಿದ್ದಾರೆ. ಅವರೇನು ಕಳ್ಳತನ ಮಾಡಿದ್ರಾ? ನಾವು ಸರ್ಕಾರದ ವಿರುದ್ಧ ಹೋರಾಟ ಮಾಡಬಾರದಾ? ನಮಗೂ ರಿ-ಡೂ ಸಿದ್ದರಾಮಯ್ಯ ಅಂತಿದ್ದಾರೆ. ಕೆಂಪಣ್ಣ ಪತ್ರ ಬರೆದು ಎಷ್ಟು ದಿನ ಆಯ್ತು? ಯಾಕೆ ತನಿಖೆ ಮಾಡಿಸಲಿಲ್ಲ. ಯಡಿಯೂರಪ್ಪ ಆಪ್ತನ ಮೇಲೆ ದಾಳಿಯಾಗಿತ್ತಲ್ವೇ? ಆವಾಗ ದಾಖಲೆ ಸಿಕ್ಕಿತ್ತು, ತನಿಖೆ ಮಾಡಿಸಬೇಕಿತ್ತಲ್ವಾ? ಸರ್ಕಾರ ಇವೆಲ್ಲವನ್ನೂ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಒಂದು ಪ್ರಧಾನಿ ಮೋದಿ ಭಾಷಣ ಮಾಡ್ತಾರೆ, ಭ್ರಷ್ಟಾಚಾರ ಮಟ್ಟ ಹಾಕುತ್ತೇವೆ ಎಂದು, ನಾಖಾವುಂಗಾ, ನಾ ಖಾನೆ ದೂಂಗಾ ಅಂತಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಬಂಧನ ಖಂಡಿಸಿ ನಾಳೆ ನಾವೇ ಪ್ರತಿಭಟನೆ ಮಾಡುತ್ತೇವೆ. ಭಿತ್ತಿಚಿತ್ರಗಳನ್ನು ಹಿಡಿದು ಪ್ರತಿಭಟನೆ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.