ಬ್ರ್ಯಾಂಡ್ ಬೆಂಗಳೂರು: ಮಾಜಿ ಸಿಎಂ ಬೊಮ್ಮಾಯಿ ಭೇಟಿಯಾಗಿ ಸಲಹೆ ಪಡೆದ ಡಿ.ಕೆ. ಶಿವಕುಮಾರ್

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಮುಂದಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಮಾತುಕತೆ ನಡೆಸಿದರು. ಬೊಮ್ಮಾಯಿ ಅವರ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ರೇಸ್‌ವ್ಯೂ ಕಾಟೇಜ್​ಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರನ್ನು ಹೂಗುಚ್ಛ ನೀಡಿ ಬೊಮ್ಮಾಯಿ ಅವರು ಸ್ವಾಗತ ಕೋರಿದರು. ಇದಕ್ಕೆ ಪ್ರತಿಯಾಗಿ ಬೊಮ್ಮಾಯಿ ಅವರಿಗೂ ಶಾಲು ಹೊದಿಸಿ, ಹೂಗುಚ್ಛ ನೀಡಿದ ಡಿಕೆ.ಶಿವಕುಮಾರ್ ಅವರು ಧನ್ಯವಾದ ತಿಳಿಸಿದರು.

ಇದನ್ನೂ ಓದಿ:ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಣ!

ಬಳಿಕ ಉಭಯ ನಾಯಕರು ಕೆಲಕಾಲ ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದರು. ಬಳಿಕ ಬ್ರ್ಯಾಂಡ್ ಬೆಂಗಳೂರು ಸಂಬಂಧ ಉಭಯ ನಾಯಕರು ಮಾತುಕತೆ ನಡೆಸಿದರು. ಮಾತುಕತೆ ವೇಳೆ ಬೆಂಗಳೂರು ಅಭಿವೃದ್ಧಿ ಕುರಿತು ಯಾವ ರೀತಿಯ ಯೋಜನೆ ಜಾರಿಗೆ ತರಬಹುದು ಎನ್ನುವುದು ಸೇರಿದಂತೆ ನಗರದ ಅಭಿವೃದ್ಧಿಗೆ ಪೂರಕವಾಗಿ ಅಗತ್ಯ ಸಲಹೆಗಳನ್ನು ಡಿಕೆ.ಶಿವಕುಮಾರ್ ಅವರು ಪಡೆದುಕೊಂಡರು. ಈ ಹಿಂದೆ ಸಿಎಂ ಆಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಬಸವರಾಜ ಬೊಮ್ಮಾಯಿ ಕೆಲಸ ನಿರ್ವಹಿಸಿದ್ದರು. ಈಗ ತಾವು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕಾರಣ ಬೊಮ್ಮಾಯಿ ಅವರಿಂದ ಬ್ರ್ಯಾಂಡ್ ಬೆಂಗಳೂರು ಸಂಬಂಧ ಸಮಾಲೋಚನೆ ನಡೆಸಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಮಾತುಕತೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು 2 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ, ಬೆಂಗಳೂರಿನ ಅಭಿವೃದ್ಧಿಗೆ ಕೆಲವು ಉತ್ತಮ ಯೋಜನೆ ಹಾಕಿಕೊಂಡಿದ್ದರು. ಆ ಯೋಜನೆಗಳು ಇನ್ನೂ ಜಾರಿಯಾಗಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಅವರ ಸಲಹೆ, ಅಭಿಪ್ರಾಯ ಪಡೆದಿದ್ದೇನೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿಯಾದ ಬಳಿಕ ಮಾಜಿ ಮುಖ್ಯಮಂತ್ರಿಗಳಾಗಿ ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ಯೋಜನೆಗಳನ್ನು ಹಾಕಿಕೊಂಡಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಎಸ್‌.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದೇನೆ. ಬೆಂಗಳೂರು ಅಭಿವೃದ್ಧಿ ಕುರಿತು ಚರ್ಚಿಸಿ ಸಲಹೆ ಪಡೆದುಕೊಂಡಿದ್ದೇನೆ. ಆದರೆ ಕುಮಾರಸ್ವಾಮಿ ಅವರು ಇರಲಿಲ್ಲ. ಸಾಧ್ಯವಾದರೆ ಅವರನ್ನೂ ಭೇಟಿ ಮಾಡುತ್ತೇನೆ. ಎಲ್ಲರ ಅನುಭವ ಅವರ ವಿಚಾರಧಾರೆ ಕೇಳಿ ಪಡೆಯುತ್ತೇನೆ. ಬ್ರ್ಯಾಂಡ್ ಬೆಂಗಳೂರು ಮಾಡುವುದು ನನ್ನ ಗುರಿ. ಹಾಗಾಗಿ ಎಲ್ಲ ಪಕ್ಷಗಳ ನಾಯಕರ ಭೇಟಿ ಮಾಡಿ ಸಲಹೆ ಪಡೆದುಕೊಳ್ಳಲಿದ್ದೇನೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *