ಕೊಪ್ಪಳ: ತಮ್ಮ ಖುಷಿಗಾಗಿ ಮುಗ್ಧ ಬಾಲಕನನ್ನು ಬೆತ್ತಲೆ ಪೂಜೆ ಮಾಡುವಂತೆ ಪುಸಲಾಯಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬೆತ್ತಲೆ ಪೂಜೆ ಮಾಡಿದರೆ ಬಡತನ ನಿವಾರಣೆ ಆಗುತ್ತದೆ, ತಂದೆಯ ಸಾಲ ತೀರುತ್ತದೆ ಮತ್ತು ಹಣ ಕೈಸೇರುತ್ತದೆ ಎಂದು ನಂಬಿಸಿ ಹುಡುಗನಿಗೆ ಬೆತ್ತಲೆ ಪೂಜೆ ಮಾಡುವಂತೆ ಮಾಡಿದ್ದಾರೆ. ನಂತರ ಅದರ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ಬಾಲಕನ ಪೋಷಕರು ಕೊಪ್ಪಳದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಅಕ್ಟೋಬರ್ 2 ರಂದು ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ಅನ್ವಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಹಾಸಗಲ್ ಗ್ರಾಮದ ಶರಣಪ್ಪ ತಳವಾರ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ವಿರುಪನಗೌಡ ಸಿದ್ದನಗೌಡ್ರ ಹಾಗೂ ಶರಣಪ್ಪ ಓಜನಹಳ್ಳಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿದಿದೆ.
ಪ್ರಕರಣ ಏನು? ಶರಣಪ್ಪ, ಮರಿಗೌಡ, ಶರಣಪ್ಪ ತಳವಾರ್ ಎಂಬ ವ್ಯಕ್ತಿಗಳು ಕೆಲಸಕ್ಕೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ, ಬೆತ್ತಲೆ ಪೂಜೆ ಮಾಡಿದರೆ ನಿಮ್ಮ ತಂದೆಯ ಸಾಲ ತೀರುತ್ತದೆ ಎಂದು ಬಾಲಕನಿಗೆ ಪುಸಲಾಯಿಸಿದ್ದರು. ಇದನ್ನು ನಂಬಿದ ಬಾಲಕ ಬೆತ್ತಲೆ ಆಗಿ ನಿಂತಿದ್ದು ಆತನಿಗೆ ಮೈಯಲ್ಲ ವಿಭೂತಿ, ಕುಂಕಮ ಹಚ್ಚಿ ಹೂವಿನ ಹಾರ ಹಾಕಿ, ನಿಂಬೆಹಣ್ಣಿನಿಂದ ಶರಣಪ್ಪ ತಳವಾರ ಎಂಬಾತ ದೃಷ್ಟಿ ತೆಗೆದು ಅದನ್ನು ಕಟ್ ಮಾಡಿ ತಲೆಯ ಮೇಲೆ ರಸವನ್ನು ಹಿಂಡಿದ್ದಾನೆ. ಅಷ್ಟೇ ಅಲ್ಲದೆ ಅವನ ಮೈಕೈ ಮುಟ್ಟಿ ವಿಡಿಯೊ ಮಾಡಿಕೊಂಡಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿದ್ದರು. ವಿಡಿಯೊ ವಿಷಯ ಬಾಲಕನ ಕುಟುಂಬದವರಿಗೆ ತಡವಾಗಿ ತಿಳಿದು ಬಂದಿದ್ದು, ಕೂಡಲೇ ಬಾಲಕನೊಟ್ಟಿಗೆ ಕೊಪ್ಪಳದ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು.