ತಿರುವನಂತಪುರಂ: 2021ರ ಎಪ್ರಿಲ್ ನಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಫರ್ಧಿ ಮಾಡಲು ಆದಿವಾಸಿ ನಾಯಕಿಗೆ ಲಂಚ ನೀಡಿದ ಆರೋಪದ ಮೇಲೆ ಕೇರಳ ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ದಿನಗಳ ಹಿಂದೆ ಮತ್ತೊಂದು ಪ್ರಕರಣ ದಾಖಲಾಗಿದ್ದವು.
ಸುರೇಂದ್ರನ್ ಅವರು ಸ್ಥಳಿಯ ಬುಡಕಟ್ಟು ಜನಾಂಗದ ಮುಖಂಡರಾದ ಸಿ ಕೆ ಜಾನು ಅವರಿಗೆ ಬಿಜೆಪಿ ಪರವಾಗಿ ಚುನವಣೆಯಲ್ಲಿ ಸ್ಪರ್ಧಿಸಲು ರೂ. ಹತ್ತು ಲಕ್ಷದಷ್ಟು ಮೊತ್ತವನ್ನು ಲಂಚವಾಗಿ ನೀಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನು ಓದಿ: ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ
ಜೆಆರ್‌ಎಸ್ ರಾಜ್ಯ ಖಜಾಂಚಿ ಪ್ರಸೀತಾ ಅಝಿಕ್ಕೋಡ್ ಅವರು “ಚುನಾವಣೆಗೆ ಮುನ್ನ ಎನ್‌ಡಿಎಗೆ ಮರಳಲು ಆದಿವಾಸಿ ನಾಯಕಿ ಸಿ.ಕೆ ಜಾನು ಸುರೇಂದ್ರನ್ ರಿಂದ 10 ಕೋಟಿ ರೂ.ಗಳ ಬೇಡಿಕೆಯಿಟ್ಟಿದ್ದರು. ಕೊನೆಗೆ 10 ಲಕ್ಷ ರೂ.ಗಳನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದರು. ಬಳಿಕ ಜಾನು ವಯನಾಡ್ ನ ಸುಲ್ತಾನ್ ಬತ್ತೇರಿಯಿಂದ ಸ್ಫರ್ಧಿಸಿದ್ದು, ಅಲ್ಲಿ ಅವರು ಸೋಲು ಕಂಡಿದ್ದರುʼʼ ಎಂದು ಹೇಳಿದ್ದಾರೆ.
ಈ ಒಪ್ಪಂದ ಕೆ. ಸುರೇಂದ್ರನ್ ಮತ್ತು ಜೆಆರ್‌ಪಿ ನಾಯಕಿ ಪ್ರಸೀತಾ ಅಝಿಕೋಡ್ ಅವರದ್ದು ಎಂಬ ಮಾತುಕತೆಯ ಆಡಿಯೋವೊಂದು ಬಿಡುಗಡೆಯಾಗಿದೆ. ಈ ಆಡಿಯೋ ಸಾಕಷ್ಟು ವೈರಲ್ ಆಗಿದೆ.
ಈ ಕುರಿತಾಗಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿ ಒಕ್ಕೂಟದ ನಾಯಕರಾಗಿರುವ ಪಿ ಕೆ ನವಾಜ್ ಅವರು ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ್ದರು. ಆಡಿಯೋ ಕ್ಲಿಪ್ ಗಳ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲು ಕೋರ್ಟ್ ಸಮ್ಮತಿಯನ್ನು ಸೂಚಿಸಿದೆ. 171 ಇ (ಲಂಚ) ಮತ್ತು 171 ಎಫ್ (ಚುನಾವಣೆಯಲ್ಲಿ ವ್ಯಕ್ತಿ ಮೇಲೆ ಪ್ರಭಾವ ಬೀರುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕೆ. ಸುರೇಂದ್ರನ್ ಅವರು ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿ ಎಸ್ ಪಿ ಮುಖಂಡ ಕೆ ಸುಂದರ ಅವರು ನಾಮ ಪತ್ರ ಹಿಂಪಡೆಯಲು ಎರಡೂವರೆ ಲಕ್ಷ ಲಂಚ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ವಿಜಯರಾಘವನ್ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಕೆಲಸ ಮಾಡಬೇಕಿದೆ. ಆದರೆ, ಅವರ ಅಕ್ರಮಗಳು ಕೇರಳ ಜನರ ಮುಂದೆ ಜಗಜ್ಜಾಹೀರಾಗಿದೆ, ಎಂದು ಹೇಳಿದ್ದಾರೆ.