ಜೈಪುರ: ರಾಜಸ್ಥಾನದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ವೈದ್ಯೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಇದರಿಂದ ಮಾನಸಿಕ ಹಿಂಸೆಗೊಳಗಾಗಿ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ(ಮಾ.29) ನಡೆದಿದೆ.
ರಾಜಸ್ತಾನದ ಜೈಪುರದಲ್ಲಿನ ದೌಸಾ ಎಂಬಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ಡಾ. ಅರ್ಚನಾ ಶರ್ಮಾ (42) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ವೈದ್ಯ ಸಮೂಹದಲ್ಲಿ ಭಾರಿ ಆಕ್ರೋಶ ಮೂಡಿಸಿದೆ. ವೈದ್ಯೆ ಮೇಲೆ ಐಪಿಸಿ ಸೆಕ್ಷನ್ 302ರ ಅಡಿ (ಕೊಲೆ) ಎಫ್‌ಐಆರ್ ದಾಖಲಾಗಿತ್ತು. ಇದರಿಂದ ನೊಂದ ಅವರು ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾನ್ಯ ಪ್ರಕ್ರಿಯೆ ವೇಳೆ ರೋಗಿ ಮೃತಪಟ್ಟಿದ್ದಾಳೆ ಎಂದು ಅವರು ಸಾಯುವ ಮುನ್ನ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಡಾ. ಅರ್ಚನಾ ಶರ್ಮಾ ಅವರು ಗುಜರಾತ್‌ನ ಗಾಂಧಿನಗರದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದರು. ಬಳಿಕ ದೌಸಾದ ಲಾಲ್ಸೋಟ್‌ನಲ್ಲಿ ಪತಿ ಜತೆಗೂಡಿ ಆನಂದ್ ಆಸ್ಪತ್ರೆ ಸ್ಥಾಪಿಸಿದ್ದರು.
22 ವರ್ಷದ ಗರ್ಭಿಣಿಯನ್ನು ಭಾನುವಾರ ಹೆರಿಗೆ ನೋವಿನ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಕೆಯನ್ನು ಕೂಡಲೇ ಹೆರಿಗೆ ಕೊಠಡಿಗೆ ಕರೆದೊಯ್ದರೂ, ವಿಪರೀತ ರಕ್ತಸ್ರಾವದಿಂದ ಆಕೆಯ ದೇಹ ಸ್ಥಿತಿ ವಿಷಮಿಸಿತ್ತು. ಕೊನೆಗೆ ಆಕೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಆಸ್ಪತ್ರೆ ಹೊರಗೆ ಜಮಾಯಿಸಿದರು. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದರು.
ಆತ್ಮಹತ್ಯೆ ಘಟನೆ ವೈದ್ಯಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಜೈಪುರದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಇಂದು ಮುಷ್ಕರಕ್ಕೆ ಕರೆ ನೀಡಿವೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ರಾಜಸ್ಥಾನ ವೈದ್ಯಕೀಯ ಕಾಲೇಜು ಶಿಕ್ಷಕರ ಸಂಘ ಮತ್ತು ಜೈಪುರ ನಿವಾಸಿ ವೈದ್ಯರ ಸಂಘ ಆಗ್ರಹಿಸಿದೆ.
ಬುಧವಾರ ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೌಸಾದ ಲಾಲ್ಸೋಟ್ ಪೊಲೀಸ್ ಠಾಣೆಯ ಅಧಿಕಾರಿ ಅಂಕಿತ್ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ.
ಆತ್ಮಹತ್ಯೆ ಪತ್ರದಲ್ಲಿ ಹೀಗಿತ್ತು…
‘ನಾನು ನನ್ನ ಪತಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಾವಿನ ನಂತರ ಅವರಿಗೆ ಕಿರುಕುಳ ನೀಡಬೇಡಿ, ನಾನು ಯಾವುದೇ ತಪ್ಪು ಮಾಡಿಲ್ಲ. ಯಾರನ್ನೂ ಕೊಲ್ಲಲಿಲ್ಲ. ವೈದ್ಯರಿಗೆ ಇಷ್ಟು ಕಿರುಕುಳ ನೀಡುವುದನ್ನು ನಿಲ್ಲಿಸಿ. ನನ್ನ ಸಾವು ಸಾಬೀತುಪಡಿಸಬಹುದು ಮುಗ್ಧತೆ. ಮುಗ್ಧ ವೈದ್ಯರಿಗೆ ಕಿರುಕುಳ ನೀಡಬೇಡಿ’ ಎಂದು ಜನರಿಗೆ ಮನವಿ ಮಾಡಿದ್ದಾರೆ.
ನ್ಯಾಯಯುತ ತನಿಖೆಗೆ ಆದೇಶ
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಡಾ ಅರ್ಚನಾ ಶರ್ಮಾ ಅವರ ಸಾವಿಗೆ ಸಂತಾಪ ಸೂಚಿಸಿದ್ದು, ವೈದ್ಯೆಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಈ ಬಗ್ಗೆ ಸಭೆಯನ್ನು ಕರೆದಿದ್ದು, ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾನು ಡಿಜಿ ಅವರಿಗೂ ನಿರ್ದೇಶನ ನೀಡಿದ್ದೇನೆ. ಪೊಲೀಸರು ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸುತ್ತಿದ್ದಾರೆ. ಈ ರೀತಿಯ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರಿಗೆ ನಿರ್ದೇಶನ ನೀಡಿದ್ದೇನೆ ಎಂದರು.