ಮೈಸೂರು: ಜಿಲ್ಲೆಯಲ್ಲಿ ಮಳೆಯ ನಡುವೆ ಹೆರಿಗೆ ನೋವಿನಲ್ಲೂ ಗರ್ಭಿಣಿಯೊಬ್ಬರು 1 ಕಿ.ಮೀ. ನಷ್ಟು ದೂರ ನಡೆದೇ ಹೋಗಿ ಆಂಬ್ಯುಲೆನ್ಸ್ ಏರಿದ ಮನಕಲುಕುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಬೊಮ್ಮಲಾಪುರ ಹಾಡಿಯ ರಂಜಿತ ಎಂಬವರೇ ಆ ಗರ್ಭಿಣಿ ಮಹಿಳೆ.
ಹಾಡಿಗಳಲ್ಲಿನ ಮೂಲ ಸೌಕರ್ಯದ ಕೊರೆತೆಗೆ ಇದು ಕೈಗನ್ನಡಿಯಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಬೊಮ್ಮಲಾಪುರ ಹಾಡಿಗೆ ಸಂಪರ್ಕ ರಸ್ತೆಯೇ ಇಲ್ಲ. ಹೀಗಾಗಿ ಮಹಿಳೆ 1 ಕಿಮೀ ಮಳೆ ನಡುವೆ ನಡೆದೇ ಬರಬೇಕಾಯಿತು. ನಾಗರಹೊಳೆ ವನ್ಯಜೀವಿ ಅರಣ್ಯದಲ್ಲಿರುವ ಹಾಡಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಶಾ ಕಾರ್ಯಕರ್ತೆ ಹಾಗೂ ಹಾಡಿ ಜನ ನೆರವಿಗೆ ಧಾವಿಸಿದ್ದು, ಆಂಬ್ಯಲೆನ್ಸ್ ಏರಲು ಸಹಾಯ ಮಾಡಿದ್ದಾರೆ. ನಂತರ ಮಹಿಳೆಯನ್ನ ಸುರಕ್ಷಿತವಾಗಿ ಸರಗೂರು ತಾಲ್ಲೂಕಿನ ವಿವೇಕಾನಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಂಡು ಮಗುವಿಗೆ ಜನ್ಮನೀಡಿರುವ ಮಹಿಳೆಯೂ ಆರೋಗ್ಯವಾಗಿದ್ದಾರೆ.
ಈ ಘಟನೆಯನ್ನು ಗಮನಿಸಿರುವ ಸಾರ್ವಜನಿಕರು ಹಾಡಿಗಳಿಗೆ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆಯ ತಡೆಯೇ ಕಾರಣ. ಜತೆಗೆ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದ್ದು,ಕೂಡಲೇ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.