ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಆರು ತಿಂಗಳು: ಆರು ಪ್ರಶ್ನೆ ಕೇಳಿದ ಕಾಂಗ್ರೆಸ್

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆರು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಆರು ಪ್ರಶ್ನೆಗಳನ್ನು ಕೇಳಿದೆ.

ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷವು ನೋಟ್ ಬ್ಯಾನ್ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್ ಗಳಿಂದಾಗಿ ಶುರುವಾದ ನಿರುದ್ಯೋಗ ಸಮಸ್ಯೆ ಲಾಕ್‌ಡೌನ್ ನಂತರ ಉತ್ತುಂಗಕ್ಕೇರಿದೆ. ಮುಖ್ಯಮಂತ್ರಿ ಆಗಿ ಅರ್ಧ ವರ್ಷ ಅಧಿಕಾರ ಪೂರೈಸಿದ ಬಸವರಾಜ ಬೊಮ್ಮಾಯಿ ಅವರೇ, ಉದ್ಯೋಗ ಸೃಷ್ಟಿಗೆ ತಾವು ಕೈಗೊಂಡ ಕ್ರಮಗಳೇನು? ರೂಪಿಸಿದ ಯೋಜನೆಗಳೇನು? ಎಷ್ಟು ಉದ್ಯೋಗ ಸೃಷ್ಠಿಯಾಗಿದೆ ಎಂದು ಮೊದಲ ಪ್ರಶ್ನೆ ಕೇಳಿದೆ.

ಮುಖ್ಯಮಂತ್ರಿಯಾಗಿ ಹಣಕಾಸು ಖಾತೆ ನಿಭಾಯಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರೇ ತಮ್ಮ ಅಧಿಕಾರದ ಆರು ತಿಂಗಳಲ್ಲಿ ಹಾಗೂ ನಿಮ್ಮ ಡಬಲ್ ಇಂಜಿನ್ ಸರ್ಕಾರದಲ್ಲಿ ಕೇಂದ್ರದಿಂದ ಯಾವ್ಯಾವ ಯೋಜನೆಗೆ ಎಷ್ಟು ಅನುದಾನ ತಂದಿದ್ದೀರಿ? ಜಿಎಸ್‌ಟಿ ಬಾಕಿ, ನೆರೆ ಪರಿಹಾರ ಸೇರಿದಂತೆ ಎಷ್ಟು ನೆರವನ್ನು ತಂದಿದ್ದೀರಿ? ಎಂದು ಎರಡನೇ ಪ್ರಶ್ನೆಯಲ್ಲಿ ಕೇಳಲಾಗಿದೆ.

ಬಿಬಿಎಂಪಿಯಲ್ಲಿ ಭ್ರಷ್ಟಾಚಾರ, ಬಿಡಿಎಯಲ್ಲಿ ಭ್ರಷ್ಟಾಚಾರ, ನೇಮಕಾತಿಯಲ್ಲಿ ಭ್ರಷ್ಟಾಚಾರ, ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಗುತ್ತಿಗೆಯಲ್ಲಿ 40% ಕಮಿಷನ್ ಭ್ರಷ್ಟಾಚಾರ. ಈ ಸರ್ಕಾರದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ. ಬಸವರಾಜ ಬೊಮ್ಮಾಯಿ ಅವರೇ, ಈ 6 ತಿಂಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಂಡ ಕ್ರಮಗಳೇನು? ಎಂದು ಮೂರನೇ ಪ್ರಶ್ನೆ ಕೇಳಿದೆ.

ಬೊಮ್ಮಾಯಿ ಅವರೇ ಆರು ತಿಂಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಂಡ  ಕ್ರಮಗಳೇನು? ಎಂದು ಮೂರನೇ ಪ್ರಶ್ನೆ ಕೇಳಲಾಗಿದೆ. ಇನ್ನೂ ಜನರ ಸಮಸ್ಯೆ ಹಲವಾರಿದ್ದರೂ ಒಂದೇ ಒಂದು ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲವೇಕೆ? ಉಪಯೋಗವಿಲ್ಲದ ದೆಹಲಿ ದರ್ಶನಕ್ಕೆ ಹೋಗುವ ತಮಗೆ ಜನತಾದರ್ಶನಕ್ಕೆ ಸಮಯವಿರಲಿಲ್ಲವೇ ಎಂದು ನಾಲ್ಕನೇ ಪ್ರಶ್ನೆ ಕೇಳಲಾಗಿದೆ.

ಹಣಕಾಸು ಖಾತೆಯನ್ನು ಹೊಂದಿರುವ ನೀವು ಆರ್ಥಿಕ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು? ಆರ್ಥಿಕ ಶಿಸ್ತು ಕಾಪಾಡಲು ರೂಪಿಸಿದ ಯೋಜನೆಗಳೇನು?ಎಂದು ಐದನೇ ಪ್ರಶ್ನೆ ಕೇಳಲಾಗಿದೆ.

ನಿಮ್ಮ ಸಚಿವರ ಕೆಲಸಗಳ ಬಗ್ಗೆ ನಿಮಗೆ ತೃಪ್ತಿ ಇದೆಯೇ? ಅಸಮಾಧಾನದಿಂದ ಒಲ್ಲದ ಖಾತೆ ನಿಭಾಯಿಸುತ್ತಿರುವವರು, ಉಸ್ತುವಾರಿಗಾಗಿ ಕಿತ್ತಾಡುವವರು, ತಮ್ಮದೇ ಶಾಸಕರೊಂದಿಗೆ ಮುನಿಸಿಕೊಂಡ ಸಚಿವರುಗಳು ನಿಮ್ಮಲ್ಲಿದ್ದಾರೆ. ಅವರ ಕೆಲಸಗಳ ಬಗ್ಗೆ ಸಮಾಧಾನವಿದೆಯೇ? ಎಂದು ಆರನೇ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷವು ಕೇಳಿದೆ.

Donate Janashakthi Media

Leave a Reply

Your email address will not be published. Required fields are marked *