ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ ‘ಅತಿ ಬಡವ’ ಮುಖ್ಯಮಂತ್ರಿ: ಎಡಿಆರ್ ವರದಿ

ಹೊಸದಿಲ್ಲಿ:  ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಎಲ್ಲ ಮುಖ್ಯಮಂತ್ರಿಗಳಲ್ಲಿಯೇ ಅತ್ಯಂತ ಬಡ ಸಿಎಂ ಎನಿಸಿದ್ದಾರೆ. ಅವರು ಚುನಾವಣಾ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದ ನಿವ್ವಳ ಆಸ್ತಿ ಮೌಲ್ಯ ಕೇವಲ 15 ಲಕ್ಷ ರೂ. ಅವರ ಬಳಿ ಒಂದೇ ಒಂದು ಸ್ಥಿರ ಆಸ್ತಿ ಇಲ್ಲ. ಹಾಗೆಯೇ 1 ಕೋಟಿ ರೂ,ಗಿಂತ ಕಡಿಮೆ ಸಂಪತ್ತು ಹೊಂದಿರುವ ದೇಶದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಕೇವಲ 1 ಕೋಟಿ ರೂ ಆಸ್ತಿ ಘೋಷಣೆ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ‘ಅತಿ ಬಡವ’ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಹರ್ಯಾಣ ಸಿಎಂ ಮನೋಹರ ಲಾಲ್ ಖಟ್ಟರ್, ಮಣಿಪುರ ಸಿಎಂ ಎನ್ ಬೈರನ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕೂಡ ಸುಮಾರು 1 ಕೋಟಿ ರೂ ಆಸ್ತಿ ಹೊಂದಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೀಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿರುವ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ.

ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಭಾರತದ ಅತ್ಯಂತ ಸಿರಿವಂತ ಮುಖ್ಯಮಂತ್ರಿ ಎನಿಸಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ‘ಅತ್ಯಂತ ಬಡ ಮುಖ್ಯಮಂತ್ರಿ’ಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಎಡಿಆರ್ ವರದಿ ಪ್ರಕಾರ ದೇಶದ 29 ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಅವರ ಸರಾಸರಿ ಆಸ್ತಿ 33.96 ಕೋಟಿ ರೂ ಇದೆ.

ತೆಲಂಗಾಣ ಸಿಎಂ ಹಾಗೂ ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಅತ್ಯಧಿಕ ಘೋಷಿತ ಸಾಲ ಇರುವ ಮುಖ್ಯಮಂತ್ರಿಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟಾರೆ ಆಸ್ತಿ ಮೌಲ್ಯ 23.5 ಕೋಟಿ ರೂ ಇದ್ದರೆ, 8.8 ಕೋಟಿ ರೂ ಸಾಲ ಹೊಂದಿದ್ದಾರೆ. ದೇಶದ ಅತಿ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ ಅವರು 13ನೇ ಸ್ಥಾನದಲ್ಲಿದ್ದಾರೆ.   ಅತಿ ಹೆಚ್ಚು ಸಾಲ ಹೊಂದಿರುವವರ  ಸ್ಥಾನದಲ್ಲಿ ಇರುವವರು ಕರ್ನಾಟಕದ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ. ಅವರ ಆಸ್ತಿ ಮೌಲ್ಯ 8.92 ಕೋಟಿ ರೂ ಇದೆ. ಜತೆಗೆ 4.9 ಕೋಟಿ ರೂ ಸಾಲ ಹೊಂದಿದ್ದಾರೆ. ಅತ್ಯಧಿಕ ಸಾಲ ಇರುವ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಬೊಮ್ಮಾಯಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಏಕನಾಥ್ ಶಿಂಧೆ ಅವರು 3.75 ಕೋಟಿ ರೂ ಸಾಲ ಹೊಂದಿದ್ದು, ಅವರ ಆಸ್ತಿ ಮೌಲ್ಯ 11.6 ಕೋಟಿ ರೂ.

ಭಾರತದ ಎಲ್ಲ ಮುಖ್ಯಮಂತ್ರಿಗಳ ಚುನಾವಣಾ ಅಫಿಡವಿಟ್‌ಗಳನ್ನು ವಿಶ್ಲೇಷಣೆ ನಡೆಸಿದ ಬಳಿಕ ಈ ವರದಿ ಪ್ರಕಟಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ಅವರು ಸುಮಾರು 510 ಕೋಟಿ ರೂ ಮೌಲ್ಯದ ಸ್ಥಿರ ಹಾಗೂ ಚರ ಆಸ್ತಿಗಳನ್ನು ಹೊಂದಿದ್ದಾರೆ. ದೇಶದ ಉಳಿದ ಎಲ್ಲ ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು ಸೇರಿಸಿದರೂ ಅವುಗಳ ಒಟ್ಟು ಮೌಲ್ಯಕ್ಕಿಂತಲೂ ಹೆಚ್ಚು ಸಂಪತ್ತನ್ನು ಜಗನ್ ಹೊಂದಿದ್ದಾರೆ.

ಜಗನ್ ರೆಡ್ಡಿ ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ ಸಿಎಂ ಪೇಮು ಖಂಡು ಇದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 163 ಕೋಟಿ ರೂ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 63.87 ಕೋಟಿ ರೂ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಾಗಾಲ್ಯಾಂಡ್ ಸಿಎಂ ನೀಫಿಯು ಅವರು 46 ಕೋಟಿ ರೂ ಹಾಗೂ ಪುದುಚೆರಿ ಸಿಎಂ ಎನ್ ರಂಗಸ್ವಾಮಿ ಅವರು 38 ಕೋಟಿ ರೂ ಸಂಪತ್ತು ಹೊಂದಿದ್ದಾರೆ.

ಇದನ್ನೂ ಓದಿ54ರಿಂದ 78ಕ್ಕೇರಿದ ‘ನ್ಯೂಇಂಡಿಯಾ’ದ “ಕನಿಷ್ಟ ಸರಕಾರ”ದ ಸಂಪುಟ!

ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹಾಗೂ ಅವರ ಪಕ್ಕದ ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ ಅವರ ಸ್ವಂತ ಆಸ್ತಿ ಕ್ರಮವಾಗಿ 17 ಕೋಟಿ ರೂ ಹಾಗೂ 14 ಕೋಟಿ ರೂ ಇದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು 3 ಕೋಟಿ ರೂ ಆಸ್ತಿ ಹೊಂದಿದ್ದರೆ, ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಆಸ್ತಿ ಮೌಲ್ಯ 10 ಕೋಟಿ ರೂ ಇದೆ.

ಬಿಹಾರ ಸಿಎಂ ನಿತೀಶ್ ಕುಮಾರ್, ಮಿಜೋರಾಂನ ಜೊರಾಂಥಗ, ಸಿಕ್ಕಿಂನ ಪ್ರೇಮ್ ಸಿಂಗ್ ತಮಂಗ್ ಅವರು 3 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ 4 ಕೋಟಿ ರೂ, ರಾಜಸ್ಥಾನದ ಅಶೋಕ್ ಗೆಹ್ಲೋಟ್ 6 ಕೋಟಿ ರೂ, ಮಧ್ಯಪ್ರದೇಶ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ತಲಾ 7 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಗೋವಾ ಸಿಂಎ ಪ್ರಮೋದ್ ಸಾವಂತ್ 9 ಕೋಟಿ ಸಂಪತ್ತು ಹೊಂದಿದ್ದಾರೆ.

30 ಮುಖ್ಯಮಂತ್ರಿಗಳ ಅಫಿಡವಿಟ್ ವಿಶ್ಲೇಷಣೆಯ ಪ್ರಕಾರ, 13 ಸಿಎಂಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇದರಲ್ಲಿ ಕೊಲೆ, ಕೊಲೆ ಪ್ರಯತ್ನ, ಅಪಹರಣ ಮತ್ತು ಅಪರಾಧ ಬೆದರಿಕೆ ಪ್ರಕರಣಗಳು ಸೇರಿವೆ.

Donate Janashakthi Media

Leave a Reply

Your email address will not be published. Required fields are marked *