ಬೆಂಗಳೂರು: ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅನೇಕ ಯೋಜನೆಗಳು ಜಾರಿಯಾಗುತ್ತಿವೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗುತ್ತದೆ. ಇಂತಹುದೇ ಒಂದು ಘಟನೆ ನಡೆದಿದ್ದು, ಬೆಂಗಳೂರಿನ ಮೇಲ್ಸೇತುವೆ ಯೋಜನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೇಲ್ಸೇತುವೆ ನಿರ್ಮಾಣ ನಿಲ್ಲಿಸಬೇಕೆಂದು ಶಾಲಾ ವಿದ್ಯಾರ್ಥಿಗಳೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಉದ್ದೇಶಿತ ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರಟಿದೆ. ಇದಕ್ಕಾಗಿ ಸುಮಾರು 50-60 ಮರಗಳ ಮಾರಣವಾಗುತ್ತದೆ ಎನ್ನಲಾಗ್ತಿದೆ. ಮರಗಳನ್ನು ಕಡಿಯುವುದರಿಂದ ಕೆರೆ ದಂಡೆಗೆ ಸಮಸ್ಯೆಯಾಗಿ ಮಣ್ಣು ಸಡಿಲಗೊಳ್ಳುತ್ತೆ. ಸಂಚಾರಿ ದಟ್ಟಣೆ ಸಮಸ್ಯೆಗೆ ಮೇಲ್ಸೇತುವೆ ನಿರ್ಮಾಣ ಪರಿಹಾರ ಅಲ್ಲ ಎಂದು ಆಗ್ರಹಿಸಲಾಗುತ್ತಿದೆ.
ಸ್ಯಾಂಕಿ ಕೆರೆ ಉಳಿವಿಗಾಗಿ ಪರಿಸರವಾದಿಗಳು, ಸ್ಥಳೀಯರ ಜೊತೆ ಈಗ ಶಾಲಾ ಮಕ್ಕಳು ಸಹ ಸಾಥ್ ನೀಡಿದ್ದಾರೆ. ನಗರದ ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಉದ್ದೇಶಿತ ಸ್ಯಾಂಕಿ ರಸ್ತೆ ಮೇಲ್ಸೇತುವೆ ಕಾಮಗಾರಿ ಕೆಲಸ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
`ಆತ್ಮೀಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ರಕ್ಷಿಸಿ. ನಾವು ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಕಲಿಯಲು ಮತ್ತು ಒಟ್ಟಿಗೆ ಆಡಲು ಬಯಸುತ್ತೇವೆ’ ಎಂದು ಬರೆದು ಮನವಿ ಮಾಡಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ