ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧ ಮುಂಬೈ ಪೊಲೀಸ್ ಮುಖ್ಯಸ್ಥ ಹುದ್ದೆಯನ್ನು ಕಳೆದುಕೊಂಡಿದ್ದ ಪರಮ್ ಬೀರ್ ಸಿಂಗ್ ಭ್ರಷ್ಟಾಚಾರ ಮತ್ತು ದುರ್ನಡತೆಯ ಬಗ್ಗೆ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವಂತೆ ಬಾಂಬೆ ಹೈಕೋರ್ಟ್ ಇಂದು ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್ ಕುಲಕರ್ಣಿ ನೇತೃತ್ವದ ವಿಭಾಗೀಯ ಪೀಠ ‘ಇದು ಸ್ವತಂತ್ರ ವಿಚಾರಣೆಗೆ ಅಗತ್ಯವಾದ ಅಸಾಧಾರಣ ಮತ್ತು ವಿಶಿಷ್ಟ ಪ್ರಕರಣವಾಗಿದೆʼ ಎಂದಿದ್ದಾರೆ.
ಪ್ರಾಥಮಿಕ ತನಿಖೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸಿ ಮತ್ತು ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಮಾಡಬೇಕೆಂದು ನ್ಯಾಯಾಲಯ ಸಿಬಿಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ನ್ಯಾಯಾಲಯಕ್ಕೆ ಪರಮ್ ಬೀರ್ ಸಿಂಗ್ ಸಲ್ಲಿಸಿದ ಅರ್ಜಿಯೂ ಸೇರಿದಂತೆ, ಮೂರು ಜನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಮುಂಬಯಿ ನಗರದ ವಕೀಲೆ ಜಯಶ್ರೀ ಪಾಟೀಲ್ ಮತ್ತು ಶಿಕ್ಷಕ ಮೋಹನ್ ಭಿಡೆ ಅವರು ವಿವಿಧ ಪರಿಹಾರಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಹಿಂದಿನ ವಿಚಾರಣೆಯ ವೇಳೆ ಹೈಕೋರ್ಟ್, ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧದ ಆರೋಪಕ್ಕೆ ಏಕೆ ಎಫ್ ಐಆರ್ ದಾಖಲಿಸಲಿಲ್ಲ ಎಂದು ಹೈಕೋರ್ಟ್ ಪರಮ್ ಬೀರ್ ಅವರನ್ನು ಪ್ರಶ್ನಿಸಿತ್ತು.
ಪೊಲೀಸ್ ಆಯುಕ್ತಯಾಗಿರುವ ನೀವು ಕಾನೂನನ್ನು ನಿಮಗಾಗಿ ಏಕೆ ಮೀಸಲಿಡಬೇಕು. ಪೊಲೀಸ್ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜಕಾರಿಣಿಗಳು ಕಾನೂನಿಗಿಂತ ಮೇಲಿದ್ದಾರೆಯೇ? ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆ ದತ್ತಾ ಪ್ರಶ್ನಿಸಿದ್ದರು.
ಮುಂಬೈನಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳಿಗೆ ರೂ. 100 ಕೋಟಿ ಸಂಗ್ರಹ ಮಾಡುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ಹಲವು ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ದೇಶಮುಖ್ ಅವರು ಸೂಚಿಸಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ. ಮಾ. 25ರಂದು ನ್ಯಾಯಾಲಯಕ್ಕೆ ಕ್ರಿಮಿನಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ಅನಿಲ್ ದೇಶ್ ಮುಖ್ ವಿರುದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸುಲಿಗೆ ಹಾಗೂ ಅಕ್ರಮ ವರ್ಗಾವಣೆ ನಡೆಸುತ್ತಿದಾರೆ ಎಂದು ಪರಮ್‌ಬೀರ್ ಸಿಂಗ್ ತನಿಖೆ ನಡೆಸುವಂತೆ ಕೋರಿ ದೂರು ಸಲ್ಲಿಸಿದ್ದರು. ನಂತರ ನನ್ನನ್ನೆ ಗುರಿಯಾಗಿಸಿಕೊಂಡಿದ್ದಾರೆ ಪರಮ್‍ಬೀರ್ ಮನವಿಯನ್ನು ಸಲ್ಲಿಸಿದ್ದರು.
ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರ ಆರೋಪದ ಆಧಾರದ ಮೇಲೆ ಪೊಲೀಸ್ ವರ್ಗಾವಣೆ ಹಾಗೂ ಪೋಸ್ಟಿಂಗ್ ಗಳಲ್ಲಿ ಅನಿಲ್ ದೇಶ್ ಮುಖ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪರಮ್‌ಬೀರ್ ಸಿಂಗ್ ಅವರು ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಆಡಳಿತಾರೂಢ ಶಿವಸೇನೆ ಹಾಗೂ ಎನ್ ಸಿಪಿ ಮೈತ್ರಿಕೂಟದಲ್ಲಿ ಬಿರುಕುಂಟು ಮಾಡಿರುವ ಈ ಆರೋಪಗಳನ್ನು ಅನಿಲ್ ದೇಶ್ ಮುಖ್ ನಿರಾಕರಿಸಿದ್ದರು.