ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಆರ್ ಆರ್ ನಗರದಲ್ಲಿರುವ ಈ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. ನಿನ್ನೆ ಸಂಜೆ ವೇಳೆ ಇ ಮೇಲ್ ಬಂದಿದ್ದು, ಇಂದು ಬೆಳಿಗ್ಗೆ ಶಾಲೆಗೆ ಬಂದಾಗ ಸಂಗತಿ ಬಯಲಾಗಿದೆ. ಆರ್ ಆರ್ ನಗರ ಠಾಣೆ ಪೊಲೀಸರು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಬಾಂಬ್ ಬೆದರಿಕೆ ಹಿನ್ನೆಲೆ ಶಾಲೆಯಿಂದ ಮಕ್ಕಳನ್ನ ಶಿಫ್ಟ್ ಮಾಡಲಾಗಿದ್ದು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. ನ್ಯಾಷನಲ್ ಹಿಲ್ ವ್ಯೂವ್ ಸ್ಕೂಲ್ನ ಯೂನಿಟ್ 3ಗೆ ಮೇಲ್ ಬಂದಿದೆ. ಶಾಲಾ ಸಿಬ್ಬಂದಿ ಯೂನಿಟ್ 1, ಯೂನಿಟ್ 2ಗೆ ಒಂದೂವರೆ ಸಾವಿರ ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ. ಬೆದರಿಕೆ ಮೇಲ್ ಬಂದಿರುವುದು ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಯೂನಿಟ್ 1ನಲ್ಲಿದ್ದ ಎಲ್ ಕೆಜಿಯಿಂದ 10 ನೇ ತರಗತಿವರೆಗಿನ ಮಕ್ಕಳನ್ನ ಸಿಬ್ಬಂದಿ ಶಿಫ್ಟ್ ಮಾಡಿದ್ದಾರೆ. ಸದ್ಯ ಪೊಲೀಸರು, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ : ಶಾಲಾ ಶುಲ್ಕ ಕಟ್ಟಿಲ್ಲ ಎಂದು ಮಕ್ಕಳನ್ನು ಬಿಸಿಲನಲ್ಲಿ ನಿಲ್ಲಿಸಿದ ಖಾಸಗಿ ಶಾಲೆ
ಪೋಷಕರು, ಮಕ್ಕಳಲ್ಲಿ ಆತಂಕ : ಬಾಂಬ್ ಇಟ್ಟಿದ್ದಾರಂತೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಸುದ್ದಿ ತಿಳಿದ ಪೋಷಕರು ಆತಂಕದಿಂದಲೇ ಶಾಲೆಗೆ ಓಡೋಡಿ ಬಂದಿದ್ದಾರೆ. ಇನ್ನು ಶಾಲಾ ಸಿಬ್ಬಂದಿ ಯೂನಿಟ್ 1 ನಿಂದ ಯೂನಿಟ್ 2ಕ್ಕೆ ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ. ಇದೀಗ ಶಾಲೆಗೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಶಾಲೆಗೆ ದೌಡಾಯಿಸಿದ ಡಿಕೆಶಿ ಪುತ್ರಿ ಐಶ್ವರ್ಯ : ತಮ್ಮ ಮಾಲೀಕತ್ವದ ಶಾಲೆಯಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಇಮೇಲ್ ವಿಚಾರ ತಿಳಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಕೂಡ ಶಾಲೆಗೆ ದೌಡಾಯಿಸಿದ್ದಾರೆ. ಶಾಲಾ ಸಿಬ್ಬಂದಿಯಿಂದ ಐಶ್ವರ್ಯಾ ಮಾಹಿತಿ ಪಡೆಯುತ್ತಿದ್ದಾರೆ. ಒಂದು ಅರ್ಧ ಗಂಟೆ ಟೈಮ್ ಕೊಡಿ. ಎಲ್ಲವೂ ಸರಿ ಹೋಗುತ್ತೆ.ಯಾರೂ ಭಯ ಪಡೋ ಅವಶ್ಯಕತೆ ಇಲ್ಲ ಎಂದಿದ್ದಾರೆ.ನೀವು ಈ ರೀತಿ ಭಯ ಪಡ್ತಿರೋದ್ರಿಂದ ಮ್ಯಾನೇಜ್ಮೆಂಟ್ ಗೆ ಕಷ್ಟ ಆಗ್ತಿದೆ. ಕಂಟ್ರೋಲ್ ಮಾಡೋಕೆ ನಾವೂ ಎಲ್ಲ ಪ್ರಯತ್ನ ಮಾಡ್ತಿದೀವಿ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆರ್ ಆರ್ ನಗರದ ಖಾಸಗಿ ಕಾಲೇಜ್ ಗೆ ಬಾಂಬ್ ಕರೆ ಬಂದಿದೆ. ಇದರ ಬಗ್ಗೆ ಪೊಲೀಸ್ರು ಕ್ರಮವಹಿಸಿದ್ದಾರೆ. ಬಾಂಬ್ ಸ್ಕ್ವಾಡ್ ಅಲ್ಲಿಗೆ ಹೋಗಿದೆ, ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಯಾವುದೇ ಆತಂಕ ಪಡುವುದು ಅಗತ್ಯವಿಲ್ಲ. ಈ ಹಿಂದೆಯೂ ಶಾಲೆಗಳಿಗೆ ಇಂತಹ ಕರೆ ಬಂದಿತ್ತು, ಆದರೆ ಆ ಬಳಿಕ ಬೆದರಿಕೆ ಕರೆಗಳು ಹುಸಿಯಾಗಿದ್ವು. ಇವತ್ತು ಕೂಡ ಬೆದರಿಕೆ ಕರೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಅಂತ ಹೇಳಿದ್ದಾರೆ.