ಲಖ್ನೋ: ಬಾಬಸಿ ಮಸೀದಿ ಒಡೆದ ಸ್ಥಳದಲ್ಲಿ ನಿರ್ಮಿಸುತ್ತಿರುವ ಅಯೋಧ್ಯೆಯ ರಾಮ ಮಂದಿರ ಕಟ್ಟಡವನ್ನು ಸ್ಪೋಟ ಮಾಡುವುದಾಗಿ ಮುಸ್ಲಿಮರ ಹೆಸರಿನಲ್ಲಿ ಜಿ-ಮೈಲ್ ರಚಿಸಿ ಬೆದರಿಕೆ ಹಾಕಿದ್ದ ಇಬ್ಬರು ದುಷ್ಕರ್ಮಿಗಳನ್ನು ರಾಜ್ಯದ ವಿಶೇಷ ಕಾರ್ಯಪಡೆಯ ತಂಡವು ಬುಧವಾರ ಬಂಧಿಸಿದ್ದಾರೆ. ಆರೋಪಿಗಳನ್ನು ತಹರ್ ಸಿಂಗ್ ಮತ್ತು ಓಂಪ್ರಕಾಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಇಮೇಲ್ ಐಡಿಗಳ ತಾಂತ್ರಿಕ ವಿಶ್ಲೇಷಣೆಯ ನಂತರ, ಆರೋಪಿಗಳಲ್ಲಿ ಒಬ್ಬನಾದ ತಹರ್ ಸಿಂಗ್ ಇಮೇಲ್ ಖಾತೆಗಳನ್ನು ರಚಿಸಿದ್ದು, ಮತ್ತೊಬ್ಬ ಆರೋಪಿ ಓಂಪ್ರಕಾಶ್ ಮಿಶ್ರಾ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಾಂಬ್ ಹಾಕುವುದಾಗಿ ಮತ್ತು ಅಯೋಧ್ಯೆಯ ರಾಮ ಮಂದಿರವನ್ನು ಸ್ಫೋಟಿಸಿ ಧ್ವಂಸ ಮಾಡುವುದಾಗಿ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ರಾಜ್ಯದ ವಿಶೇಷ ಕಾರ್ಯಪಡೆಯ ತಂಡವು ಇಬ್ಬರು ಆರೋಪಿಗಳನ್ನು ಲಕ್ನೋದ ಗೋಮತಿ ನಗರದ ವಿಭೂತಿ ಖಂಡ್ ಪ್ರದೇಶದಿಂದ ಬಂಧಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಜ್ಯದ ತೆರಿಗೆ ಪಾಲು ಕಡಿತ | 16ನೇ ಹಣಕಾಸು ಆಯೋಗದ ಮುಂದೆ ‘ಹಕ್ಕು’ ಮಂಡಿಸಲು ಕಾಂಗ್ರೆಸ್ ಸರ್ಕಾರ ತಯಾರಿ
ಇಬ್ಬರು ಆರೋಪಿಗಳು ನವೆಂಬರ್ ತಿಂಗಳ ವೇಳೆಗೆ ಟ್ವಿಟರ್‌ನಲ್ಲಿ ‘@iDevendraOffice’ ಎಂಬ ಹ್ಯಾಂಡಲ್ ಬಳಸಿ ಆದಿತ್ಯನಾಥ್, ಎಸ್‌ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೆ ಬೆದರಿಕೆ ಹಾಕಿದ್ದರು ಎಂದು ಹೇಳಿಕೆ ತಿಳಿಸಿದೆ. ‘[email protected]’ ಮತ್ತು ‘[email protected]’ ಇಮೇಲ್ ಐಡಿಗಳನ್ನು ಬೆದರಿಕೆ ಪೋಸ್ಟ್‌ಗಳನ್ನು ಕಳುಹಿಸಲು ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯು ಬಹಿರಂಗಪಡಿಸಿದೆ ಎಂದು ಅದು ಹೇಳಿದೆ.
ಆರೋಪಿಗಳಾದ ಸಿಂಗ್ ಮತ್ತು ಮಿಶ್ರಾ ಇಬ್ಬರೂ ಗೊಂಡಾ ನಿವಾಸಿಗಳಾಗಿದ್ದು, ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಎಸ್‌ಟಿಎಫ್ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಅದು ಹೇಳಿದೆ. ಮುಸ್ಲಿಮರ ಹೆಸರನ್ನು ಬಳಸಿ ಕೃತ್ಯಗಳನ್ನು ನಡೆಸುವ ಹಲವಾರು ಪ್ರಕರಣಗಳು ಇತ್ತಿಚೆಗೆ ಹೆಚ್ಚುತ್ತಿವೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಘಪರಿವಾರ ಪ್ರಣೀತ ಬೆಂಬಲಿಗರು ಮುಸ್ಲಿಮರನ್ನು ಅಪರಾಧಿಗಳು ಎಂಬಂತೆ ಬಿಂಬಿಸಲು ಮುಸ್ಲಿಮರ ಹೆಸರಿನಲ್ಲಿ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ದಶಕಗಳಿಂದ ಸಂಘಪರಿವಾರ ಕೂಡಾ ಇದನ್ನೆ ಮಾಡಿಕೊಂಡು ಬಂದಿದೆ ಎಂದು ಅವರ ಆರೋಪಿಸಿದ್ದಾರೆ. ಇದೀಗ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಡಲು ಸಂಘಪರಿವಾರದ ಬೆಂಬಲಿಗರು ಇಂತಹ ಕೃತ್ಯಗಳಲ್ಲಿ ನಿರಂತವಾಗಿ ತೊಡಗಿಕೊಂಡಿದ್ದಾರೆ ಎಂದು ಹಲವಾರು ಜನರು ಅಭಿಪ್ರಾಯ ಪಟ್ಟಿದ್ದಾರೆ.
ವಿಡಿಯೊ ನೋಡಿ: ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ