ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರಲ್ಲಿ ಶುಕ್ರವಾರ ಬಾಂಬ್ ಸ್ಫೋಟಿಸುವ ಬಗ್ಗೆ ಇಮೇಲ್ ಬಂದಿದ್ದು, ಪೊಲೀಸರು ಮತ್ತು ಶಾಲಾ ಅಧಿಕಾರಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಬಸವೇಶ್ವರನಗರದಲ್ಲಿರುವ ಶಾಲೆಗೆ ಬಾಂಬ್ ಇಟ್ಟಿರುವ ಬಗ್ಗೆ ಇಮೇಲ್ ಬಂದಿತ್ತು. ಶಾಲೆ ಆವರಣದಲ್ಲಿ 4 ಜಿಲೆಟಿನ್ ಕಡ್ಡಿ ಇಟ್ಟಿರುವುದಾಗಿ ಮೇಲ್ ನಲ್ಲಿ ಬರೆಯಲಾಗಿತ್ತು. ಶುಕ್ರವಾರ ಬೆಳಗ್ಗೆ 11.30 ಮೇಲ್ ನೋಡಿದ ಶಾಲೆ ಸಿಬ್ಬಂದಿ, ತಕ್ಷಣ ಬಸವೇಶ್ವರನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಸವೇಶ್ವರನಗರ, ರಾಜಾಜಿನಗರ ಠಾಣೆ ಪೊಲೀಸರ ಭೇಟಿ ನೀಡಿದ್ದಾರೆ. ಅಲ್ಲದೇ ಬಾಂಬ್ ಪತ್ತೆ ದಳ, ಶ್ವಾನ ದಳದಿಂದ ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ನಂತರ ಹುಸಿ ಬೆದರಿಕೆ ಇ-ಮೇಲ್ ಎಂಬುದು ದೃಢವಾಗಿದ್ದು, ಪ್ರಕರಣ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪಶ್ಚಿಮ ವಿಭಾಗ ಪೊಲೀಸರುತನಿಖೆ ಮುಂದುವರಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯೆ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ, ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾತ್ರಿ 8:30 ಸುಮಾರಿಗೆ ಮೇಲ್ ಬಂದಿದೆ. ಜಿಲೇಟಿನ್ ಕಡ್ಡಿ ಇಟ್ಟು ಬ್ಲಾಸ್ಟ್ ಮಾಡೋದಾಗಿ ಮೇಲ್ ಬಂದಿದೆ. ಬೆಳಿಗ್ಗೆ ಮೇಲ್ ಚೆಕ್ ಮಾಡಿಕೊಂಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ನಾವು ಬೆಳಿಗ್ಗೆ ಬಂದು ಎಲ್ಲಾ ಚೆಕ್ ಮಾಡಿದ್ದೀವಿ. ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದೇವೆ. ಇದೊಂದು ಹುಸಿ ಬಾಂಬ್ ಬೆದರಿಕೆ ಇ ಮೇಲ್ ಆಗಿದ್ದು, ಇದೀಗ ಎಲ್ಲಾ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಖಾತೆಗೆ 15 ಲಕ್ಷ ರೂ ಬೀಳುವ ಬದಲು, 1.40 ಲಕ್ಷ ರೂ ಸಾಲದ ಹೊರೆ ಬಿತ್ತು!!
ವಿಧಾನಸೌಧ ಪೊಲೀಸ್ ಠಾಣೆಗೆ ಕರೆ : ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುನೀಲ್ ಕುಮಾರ್ ಎಂಬಾತ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ‘ಬಾಂಬ್ನಿಂದ ಬೆಂಗಳೂರು ಬ್ಲಾಸ್ಟ್ ಮಾಡ್ತಾನೆ. ಆತ ಪಾಕಿಸ್ತಾನಿ ಟೆರರಿಸ್ಟ್ ಆಗಿದ್ದು, ನನ್ನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದಾನೆ.
ಅವನ ಮೇಲೆ ಈಗಾಗಲೇ ದೆಹಲಿ, ಬೆಂಗಳೂರು, ಕೊಯಮತ್ತೂರುನಲ್ಲಿ ಕೇಸ್ ಇದೆ ಎಂದು ಸುನೀಲ್ ಕುಮಾರ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ.
ಕರೆ ಮಾಡಿದ ವೇಳೆ ಆ ವ್ಯಕ್ತಿಯ ಹೆಸರನ್ನೂ ಬಹಿರಂಗಪಡಿಸಿದ್ದಾನೆ. ಆ ಉಗ್ರನ ಹೆಸರು ಪ್ರಶಾಂತ್ ಎಂ ಬಾಲಕೃಷ್ಣ ಎಂದಾಗಿದೆ. ಈತ ಬೆಂಗಳೂರನ್ನು ನನ್ನ ಬಳಿ ಬ್ಲಾಸ್ಟ್ ಮಾಡ್ತೀನಿ ಎಂದಿದ್ದಾನೆ ಅಂತಾ ಸುನೀಲ್ ಕುಮಾರ್ ಹೇಳಿದ್ದಾನೆ ಎನ್ನಲಾಗಿದೆ.
ಕೂಡಲೇ ಅಲರ್ಟ್ ಆದ ಪೊಲೀಸು, ಮತ್ತೆ ಆ ನಂಬರ್ಗೆ ಕರೆ ಮಾಡಿದ್ದಾರೆ. ಆದರೆ ಆ ನಂಬರ್ ಸ್ವಿಚ್ ಆಫ್ ಬಂದಿದೆ. ಈ ಹಿನ್ನೆಲೆಯಲ್ಲಿ ಈತ ಯಾವ ಕಾರಣಕ್ಕಾಗಿ ಕರೆ ಮಾಡಿದ್ದ? ಈತನ ಉದ್ದೇಶ ಏನು ಎಂಬುವುದರ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸುಮೋಟೊ ದೂರು ದಾಖಲಾಗಿದೆ.
ಬಸವೇಶ್ವರ ಶಾಲೆಗೆ ಮೇಲ್ ಮಾಡಿದ ವ್ಯಕ್ತಿ ಹಾಗೂ ವಿಧಾನಸೌಧ ಠಾಣೆಗೆ ದೂರವಾಣಿ ಮಾಡಿದ್ದ ವ್ಯಕ್ತಿ ಒಬ್ಬನೇನಾ? ಅಥವಾ ಬೇರೆಯವನಾ? ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.
ಬೆಂಗಳೂರಿನಲ್ಲಿ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವುದು ಇದು ಮೊದಲಲ್ಲ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಾಲೀಕತ್ವದ ಬೆಂಗಳೂರಿನ ಆರ್‌ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ ಪೊಲೀಸರ ತನಿಖೆ ವೇಳೆ ಅದೇ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿ ಬೆದರಿಕೆ ಮೇಲ್ ಕಳುಹಿಸಿದ್ದ ಎಂಬುದು ಗೊತ್ತಾಗಿತ್ತು.
10ನೇ ತರಗತಿಯ ಮೊದಲ ಸೆಮಿಸ್ಟರ್ ಪರೀಕ್ಷೆ ಮುಂದೂಡಲು ವಿದ್ಯಾರ್ಥಿ ಪ್ಲ್ಯಾನ್ ಮಾಡಿ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಎನ್ನುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿತ್ತು.
ಈಗಲೂ ಇದು ಇಂತಹದ್ದೆ ಇರಬಹುದಾ? ಎಂಬ ಅನುಮಾನ ಒಂದು ಕಡೆ, ಮತ್ತೊಂದು ಕಡೆಯಿಂದ ಚುನಾವಣೆಗಳು ಹತ್ತೀರ ಬರುತ್ತಿರುವ ಕಾರಣ ಇಂತಹ ಹುಸಿ ಕರೆಗಳು ಬರುತ್ತಿರಬಹುದು ಎಂಬ ಚರ್ಚೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ