ತಿರುವನಂತಪುರ: ಕೇರಳದ ಆಡಳಿತರೂಢ ಎಡರಂಗ ಸರ್ಕಾರದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ನೆನ್ನೆ(ಜೂನ್ 30) ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ಎಸೆದಿದ್ದು, ಕೇರಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ತಿರುವನಂತಪುರ ನಗರದ ಹೃದಯಭಾಗದಲ್ಲಿರುವ ಎಕೆಜಿ ಕೇಂದ್ರದ ಬಳಿ ರಾತ್ರಿ 11.30ರ ಸುಮಾರಿಗೆ ಬೈಕಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ಎಸೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಬೇಟಿ ನೀಡಿದ ಸಿಪಿಐ(ಎಂ) ಮುಖಂಡರು ಇದೊಂದು ಬಾಂಬ್ ದಾಳಿ ಎಂದಿದ್ದಾರೆ. ಎಕೆಜಿ ಕೇಂದ್ರದಲ್ಲಿ ತಂಗಿದ್ದ ಕೆಲ ಸಿಪಿಐ(ಎಂ) ಮುಖಂಡರು ಕಟ್ಟಡದ ಹೊರಗೆ ಭಾರೀ ಸ್ಫೋಟದ ಶಬ್ಧ ಕೇಳಿದ್ದಾಗಿ ಹೇಳಿದ್ದಾರೆ. ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನಾ ಸ್ಥಳ ಮತ್ತು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಸಹ ತಪಾಸಣೆ ನಡೆಸಿದೆ. ದಾಳಿ ನಡೆಸಿದ ಆರೋಪಿಯನ್ನು ಪತ್ತೆ ಮಾಡಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
CCTV footage of a man in a bike throwing the country bomb outside the ground floor of AKG centre in Trivandrum. The incident is reported to have occurred around 11:30 pm. pic.twitter.com/OKmJRbq1nM
— Korah Abraham (@thekorahabraham) June 30, 2022
ಎಕೆಜಿ ಕೇಂದ್ರದ ಅಧಿಕೃತ ಮಾಧ್ಯಮ ಗುಂಪಿನ ಮೂಲಕ ಸಿಪಿಐ(ಎಂ) ಪಕ್ಷ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಗಳಲ್ಲಿ, ವ್ಯಕ್ತಿಯೊಬ್ಬ ಮೋಟಾರ್ ಬೈಕಿನಲ್ಲಿ ಸ್ಥಳಕ್ಕೆ ಆಗಮಿಸಿ ಕಟ್ಟಡದ ಮೇಲೆ ಸ್ಫೋಟಕ ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಸ್ಫೋಟಕ ಎಕೆಜಿ ಕೇಂದ್ರದ ಕಲ್ಲಿನ ಗೋಡೆಗೆ ತಗುಲಿದೆ ಎನ್ನಲಾಗಿದೆ.
ಇದೇ ವೇಳೆ, ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್, ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಸೇರಿದಂತೆ ಕೇರಳದ ಹಲವು ಸಚಿವರು ಸ್ಥಳಕ್ಕೆ ಆಗಮಿಸಿದ್ದಾರೆ.
ಸ್ಪೋಟಕ ಧಾಳಿಯ ಕೃತ್ಯದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿರುವ ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಮತ್ತು ಎಲ್ಡಿಎಫ್ ಸಂಚಾಲಕ ಇ ಪಿ ಜಯರಾಜನ್, ಸಿಪಿಐ(ಎಂ) ಕಾರ್ಯಕರ್ತರು ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಎಲ್ಲಡೆಗೆ ಶಾಂತಿಯುತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕರೆ ನೀಡಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಉದ್ದೇಶಪೂರ್ವಕವಾಗಿ ಪ್ರಚೋದನೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಯುಡಿಎಫ್-ಬಿಜೆಪಿ ಮೈತ್ರಿ ವಿರುದ್ಧ ಜನತೆ ಸಂಘಟಿತರಾಗಿ ಶಾಂತಿಯುತವಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಕಳೆದ ಕೆಲವು ದಿನಗಳಿಂದ ರಾಜ್ಯವನ್ನು ಗಲಭೆ ಪ್ರದೇಶವಾಗಿದೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕೂಗು ಎಬ್ಬಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವೇ ಎಕೆಜಿ ಕೇಂದ್ರದ ಮೇಲಿನ ದಾಳಿಯಾಗಿದೆ ಎಂದರು.
ಎಡಪಕ್ಷಗಳ ವಿರುದ್ಧ ಯುಡಿಎಫ್, ಬಿಜೆಪಿ ಮತ್ತು ಎಲ್ಲಾ ಕೋಮುವಾದಿ ಶಕ್ತಿಗಳು ಒಂದಾಗಿವೆ. ಈಗಾಗಲೇ ದಾಳಿಗೆ ಯೋಜನೆ ರೂಪಿಸಿ ನೆರವು ನೀಡಿದ್ದಲ್ಲದೆ, ಅತಿರೇಕಕ್ಕೆ ಹೋಗುತ್ತಿರುವುದು ಈ ಘಟನೆಗಳು ಸ್ಪಷ್ಟಪಡಿಸುತ್ತಿವೆ. ಇಂತಹ ಗಲಭೆ ರಾಜಕೀಯದ ವಿರುದ್ಧ ಜನರನ್ನು ಸಂಘಟಿಸಲು ಪಕ್ಷದ ಎಲ್ಲಾ ಸಹೋದ್ಯೋಗಿಗಳು ಉನ್ನತ ರಾಜಕೀಯ ಪ್ರಜ್ಞೆಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.
ಸಿಪಿಐ(ಎಂ)ನ ಹಲವು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪತ್ತನಂತಿಟ್ಟ ಮತ್ತು ರಾಜ್ಯದ ಇತರ ಸ್ಥಳಗಳಲ್ಲಿಯೂ ಕಾರ್ಮಿಕರು ಪ್ರತಿಭಟನೆ ನಡೆಸಿದರು.