– ಎಚ್.ಆರ್. ನವೀನ್‌ಕುಮಾರ್, ಹಾಸನ
ಬದುಕಿನಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಹೊತ್ತು, ತಮ್ಮ ಗುರುತುಗಳನ್ನು ಬಹಿರಂಗಗೊಳಿಸಿಕೊಳ್ಳಲಾಗದ, ಕೇರಿಗಳನ್ನು ತೊರೆದು ನಗರಗಳಲ್ಲಿ ಬದುಕಿನ ಬಂಡಿ ಸಾಗಿಸಲು, ಬಾಡಿಗೆಯನ್ನು ಉಳಿಸುವ ಸಲುವಾಗಿ ಒಂದೇ ಮನೆಯಲ್ಲಿ ಶೇರಿಂಗ್‌ನಲ್ಲಿ ವಾಸವಾಗಿರುವ ಹೊಸತಲೆಮಾರಿನ ಮೂವರ ಬದುಕಿನ ಪೂರ್ವಗಳನ್ನು ಒಂದೊಂದಾಗಿ ರಂಗದ ಮೇಲೆ ತರೆದಿಡುವ ನಾಟಕವೇ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ. ಗುರುತು
ರಂಗಭೂಮಿ ಕ್ಷೇತ್ರದಲ್ಲಿ ಬಹಳ ಚರ್ಚೆಯಾದ ‘ದಕ್ಲ ಕಥಾ ದೇವಿ’ ನಾಟಕಗಳನ್ನು ನಿರ್ದೇಶಿಸಿದ ಯುವ ನಿರ್ದೇಶಕ ಕೆ.ಪಿ. ಲಕ್ಷ್ಮಣ್ ಅವರು ರಚಿಸಿ ನಿರ್ದೇಶಿಸಿರುವ ಈ ನಾಟಕವನ್ನು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಯಿತು. ಈಗಾಗಲೇ ನಾಡಿನಾದ್ಯಂತ ಯಶಸ್ವೀ ಪ್ರದರ್ಶನಗಳನ್ನು ಕಾಣುತ್ತಿರುವ ಈ ನಾಟಕವನ್ನು ಜಂಗಮ ಕಲೆಕ್ಟೀವ್ ತಂಡ ಪ್ರಸ್ತುತ ಪಡಿಸಿದೆ. ನಾಟಕದಲ್ಲಿ ಚಂದ್ರಶೇಖರ್ ಕೆ, ಶ್ವೇತ ರಾಣಿ ಎಚ್.ಕೆ ಮತ್ತು ಭರತ್ ಡಿಂಗ್ರಿಯವರ ನುರಿತ ಮತ್ತು ಶ್ರದ್ಧೆಯ ನಟನೆ ಪಾತ್ರಗಳು ನಮ್ಮ ನಡುವೆಯೇ ಜೀವಿಸುವಂತೆ ಮಾಡಿತು.
ನಾಟಕದ ಪ್ರಮುಖ ಮೂರು ಪಾತ್ರಗಳಲ್ಲಿ ಒಬ್ಬ ತಾನು ಜಮೈಕಾದಲ್ಲಿ ಸ್ಲಂನಲ್ಲಿ ಹುಟ್ಟಿ ಜಗತ್ ಪ್ರಸಿದ್ದನಾದ ಪಾಪ್ ಸಿಂಗರ್ ಬಾಬ್ ಮಾರ್ಲಿಯಂತೆ ಒಬ್ಬ ದೊಡ್ಡ ಹಾಡುಗಾರನಾಗಬೇಕೆಂಬ ಕನಸಿನ ಜೊತೆಗೆ ತನ್ನ ಗುರುತನ್ನು ಬಚ್ಚಿಟ್ಟು ಊರಿನ ಹೆಸರಿನ ಭಾರವನ್ನು ಹೊತ್ತು ಪಟ್ಟಣ ಸೇರಿರುತ್ತಾನೆ. ಹಾಡಿಗೆ ಯಾವ ಜಾತಿ, ಧರ್ಮದ ಹಂಗಿಲ್ಲ. ಈ ಹಾಡು ಎಲ್ಲರನ್ನು ಒಂದುಗೂಡಿಸುತ್ತದೆ ಎಂಬ ಸಂದೇಶವನ್ನ ಬಲವಾಗಿ ನಂಬಿ ಎಲ್ಲವನ್ನು ಅನುಭವಿಸಬೇಕು, ಒಳಗೆ ಎಷ್ಟೇ ನೋವಿದ್ದರೂ ಸದಾ ನಗುನಗುತ್ತಾ ಇರಬೇಕು ಎಂದುಕೊಂಡು ಬದುಕುವವನು ಇವನು.
ಇದನ್ನೂ ಓದಿ: ತಂದೆಯ ಚಿತೆಗೆ ಬೆಂಕಿ ಇಡಲು ಹಣ ಕೇಳಿದ ಮಗ – ಕೊನೆಗೆ ತಾನೇ ಚಿತೆಗೆ ಬೆಂಕಿ ಇರಿಸಿದ ಪತ್ನಿ
ಮತ್ತೊಬ್ಬ ತಾನು ದೊಡ್ಡ ಕಲಾವಿದನಾಗಬೇಕೆಂಬ ಕನಸಿನೊಂದಿಗೆ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಾ, ತನ್ನೂರಿನಲ್ಲಿ ತನ್ನ ಸುತ್ತ ಎಳೆದ ಗುರುತಿನ ವೃತ್ತಗಳನ್ನು ಅಳಿಸುತ್ತಾ ಆ ವೃತ್ತದಿಂದಾಚೆಗೆ ಬಂದು, ತಾನು ಅನುಭವಿಸಿದ ಎಲ್ಲಾ ನೋವುಗಳನ್ನು ಮರೆಯಲು ಪ್ರಯತ್ನಿಸುತ್ತಿರುತ್ತಾನೆ. ಮೊತ್ತೊಬ್ಬಾಕೆ ದೇವದಾಸಿಯ ಮಗಳಾಗಿ ತಾನಿದ್ದ ಹಳ್ಳಿಯಲ್ಲಿನ ಅವಮಾನ, ದೌರ್ಜನ್ಯಗಳನ್ನು ಸಹಿಸದೇ, ಬಿಡುಗಡೆಯ ಶಿಕ್ಷಣವನ್ನು ಪಡೆದು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಸಾಹಿತ್ಯ, ಕವಿತೆಗಳನ್ನು ಓದುತ್ತಾ ಹಳೆಯ ನೆನಪುಗಳಿದ್ದರೂ ಅವುಗಳನ್ನು ಮೀರುತ್ತಾ ಬದುಕಲು ಪ್ರಯತ್ನಿಸುತ್ತಿರುತ್ತಾಳೆ.
ಗುರುತು ಮುಚ್ಚಿಟ್ಟು ಬಾಡಿಗೆ ಮನೆಗೆ ಬಂದು ಸೇರಿಕೊಂಡಿದ್ದರಿAದ ದನದ ಮಾಂಸವನ್ನು ಕದ್ದು ಮುಚ್ಚಿ ತರುವುದು, ಕಿಟಕಿ ಬಾಗಿಲುಗಳನ್ನು ಮುಚ್ಚಿ ಭೂಗತವಾಗಿ ತಿನ್ನುವುದು, ತಿಂದ ಮೂಳೆಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ದೂರ ಸಾಗಿಸುವುದು, ಹೀಗೆ ಒಮ್ಮೆ ಯಾರಿಗೂ ಅನುಮಾನ ಮೂಡದಂತೆ ‘ಶ್ರೀರಾಮ ಸ್ವೀಟ್ಸ್’ ಬಾಕ್ಸ್ನಲ್ಲಿ ಕಬಾಬನ್ನು ಪಾರ್ಸಲ್ ತಂದು ತಿನ್ನುವ ದೃಶ್ಯವಂತು ನಗರದಲ್ಲಿ ಬಾಡಿಗೆ ಮನೆ ಮಾಡಿ ಬದುಕುತ್ತಿರುವ, ಬಾಡುತಿನ್ನುವವರ ಪರದಾಟ ಒಂದು ಕ್ಷಣ ನಮ್ಮನ್ನೆಲ್ಲಾ ತೀವ್ರ ಆಲೋಚನೆಗೆ ಹಚ್ಚಿದ್ದು ಸುಳ್ಳಲ್ಲ, ನೋಡುಗರ ಮನಸ್ಸುಗಳನ್ನು ಕಲಕಿತು.
ಈ ಮೂವರು ಯಾವ ಗುರುತುಗಳನ್ನು ಬಚ್ಚಿಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೊ, ಅದೇ ಜಾತಿಯ ಗುರುತುಗಳನ್ನು ಅವರ ಆಹಾರದಿಂದ ಪತ್ತೆಹಚ್ಚಿ ಮನೆಯ ಮಾಲಿಕ ಬಾಡಿಗೆ ಮನೆಯಿಂದ ಇವರನ್ನು ಖಾಲಿ ಮಾಡಿಸಲು ತೀರ್ಮಾನಿಸುತ್ತಾನೆ. ‘ಎರಡನೇ ಮಹಡಿಯ ನಾಯಿ, ಮೊದಲ ಮಹಡಿಯ ಮನೆಯ ಮುಂದೆ ಮೂಳೆ ಕಚ್ಚಿಕೊಂಡು ಹೋಗಿದ್ದನ್ನ ಗ್ರೌಂಡ್ ಫ್ಲೋರ್‌ನ ಓನರ್‌ವರೆಗೆ ದೂರು ತಲುಪಿದೆ’. ಪ್ರಸ್ತುತ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ‘ನಾಗರೀಕ’ ಸಮಾಜದಲ್ಲಿ ಜಾತಿಯ ಕಾರಣಕ್ಕಾಗಿ ಮನೆ ಬಾಡಿಗೆ ಕೊಡುವುದನ್ನು ನಿರಾಕರಿಸುವುದು ಮತ್ತು ಪ್ರತಿಯೊಬ್ಬರ ಆಹಾರದ ಹಕ್ಕನ್ನು ಗೌರವಿಸುವ ಬದಲಿಗೆ ಮಾಂಸಹಾರಿಗಳನ್ನ ಅದರಲ್ಲೂ ಬೀ**ಫ್ ತಿನ್ನುವವರನ್ನು ಅತ್ಯಂತ ಕೀಳಾಗಿ ನೋಡುವ ಇಂದಿನ ಸಮಾಜಕ್ಕೆ ನಾಟಕದ ಈ ದೃಶ್ಯಗಳು ಕನ್ನಡಿ ಹಿಡಿದಂತಿವೆ.
ದಲಿತನಾದ ಕಾರಣಕ್ಕೆ ತನ್ನ ತಂದೆ ಮಾಡುತ್ತಿದ್ದ ಕುಳವಾಡಿಕೆಯ ಕೆಲಸವನ್ನು ತಾನೂ ಮಾಡಬೇಕಾದ ಸಂದರ್ಭ ಒದಗಿ ಬಂದಾಗ ಅದನ್ನು ನಿರಾಕರಿಸುವ, ಶಿಕ್ಷಣಕ್ಕಾಗಿ ಹಂಬಲಿಸುವ ವಿಚಾರ ಇಂದಿಗೂ ಪ್ರಸ್ತುತವಾಗಿದೆ. ತನ್ನ ಬದುಕಿನ ಈ ಬವಣೆಯನ್ನು ಹೇಳಿಕೊಳ್ಳಲು ತನ್ನ ಶಾಲಾ ದಿನಗಳಲ್ಲಿ ನಡೆದ ಒಂದು ಘಟನೆಯನ್ನು ಪಾತ್ರದಾರಿಗಳಾಗಿ ಅಭಿನಯಿಸಲು ಮುಂದಾಗುವ ಈ ಮೂವರು ಆ ಪಾತ್ರಗಳನ್ನು ನಿಭಾಯಿಸಲಾಗದೆ, ಪಾತ್ರದಲ್ಲಿಯೂ ನಾನು ಶೋಷಕನಾಗುವುದಿಲ್ಲ, ಪಾತ್ರದಲ್ಲಿಯೂ ನಾನು ಒಂದು ಮಗುವನ್ನು ಜಾತಿಯ ಕ್ರೂರ ದೌರ್ಜನ್ಯಕ್ಕೆ ತಳ್ಳುವುದನ್ನು ಸಹಿಸುವುದಿಲ್ಲವೆಂದು ಪಾತ್ರಗಳೇ ನಿರಾಕರಿಸುತ್ತವೆ. ಪಾತ್ರಗಳು ನಿರಾಕರಿಸುವುದನ್ನು ನಿಜಜೀವನದಲ್ಲಿ ಮನುಷ್ಯರು ನಿರಾಕರಿಸಬೇಕಿದೆ.
ಮೇಲ್ಜಾತಿಯವರ ಮನೆಯಲ್ಲಿರುವ ಏಕೈಕ ಟಿವಿಯನ್ನು ನೋಡಲು ಈ ಕೇರಿಯ ಹುಡುಗರೆಲ್ಲಾ ನೂಕು ನುಗ್ಗಲಿನಲ್ಲಿ ಹೋಗಿ, ಕಾಡಿ ಬೇಡಿ ಟಿವಿ ನೋಡಲು ಅವಕಾಶ ಕಲ್ಪಿಸಿಕೊಂಡು ಟಿವಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ತಾವೇ ಆದಂತೆ ಭಾವಿಸಿ ಮೈಮರೆಯುತ್ತಿದ್ದವರು, ಇದ್ದಕ್ಕಿದ್ದಂತೆ ಕರೆಂಟ್ ಹೋಗಿ ಕತ್ತಲಾದಾಗ ಒಮ್ಮೆಲೆ ಮನೆಯ ಒಳಗೆ ಒಂದು ಹೆಜ್ಜೆಯಿಟ್ಟು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ ಭಾವನೆಯಲ್ಲಿ ಹೊರಬರುವ ದೃಶ್ಯಗಳು, ಸಮಾಜ ಶೂದ್ರ ಸಮುದಾಯವನ್ನು ಶತಮಾನಗಳಿಂದ ಹೇಗೆ ನಡೆಸಿಕೊಂಡು ಬರಲಾಗುತ್ತಿದೆ.
ಎಲ್ಲಾ ಅವಕಾಶಗಳಿಂದ ಇವರನ್ನು ವಂಚಿಸಿ ಅವರುಗಳಿಗೆ ಜಾತಿಯ ಗುರುತನ್ನು ಹೊರಿಸಿ ಅದರ ಮೇಲೆ ಸವಾರಿ ಮಾಡಿಕೊಂಡು ಬರಲಾಗುತ್ತಿದೆ. ಒಬ್ಬ ದೇವದಾಸಿ ಹೆಣ್ಣಿನ ಮೇಲೆ ನಡೆಯುವ ಸಾಮಾಜಿಕ ದೌರ್ಜನ್ಯಗಳು ಆಕೆಯನ್ನು ಬಳಕೆ ಮಾಡುವ ವಿಧಾನ, ಇದನ್ನು ಪ್ರತಿಭಟಿಸಿ ತನ್ನ ಮಗಳಿಗೂ ಇದೇ ಗತಿ ಬರಬಾರದೆಂದು ಎಚ್ಚೆತ್ತು ಚಿನ್ನದ ಮೂತಿಯ ರಣ ಹದ್ದನ್ನು ಕೊಂದು ಮಗಳನ್ನು ರಕ್ಷಿಸಿ, ಇಂತಹ ಅನಿಷ್ಟ ಪದ್ದತಿಗೆ ಕೊನೆಯಾಡಬೇಕು ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ರಂಗದ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.
ಈ ಎಲ್ಲಾ ಸಂಕೋಲೆಗಳನ್ನು ಮೀರಲು ತನ್ನ ಜಾತಿಯ ಗುರುತು, ತನ್ನ ಊರಿನ ಗುರುತು, ಧರ್ಮ, ಲಿಂಗ ಎಲ್ಲವನ್ನು ಧಿಕ್ಕರಿಸಿ, ಇವುಗಳ ಗುರುತ್ವ ಬಲದಿಂದ ಆಚೆ ಹೋಗುವ ಆ ಮೂಲಕ ಮನುಷ್ಯನಾಗುವ ವಿಶ್ವಮಾನವ ಅನಿಕೇತನದ ಪ್ರಯತ್ನವನ್ನ ಮಾಡಬೇಕೆನ್ನುವ ಸ್ಪಷ್ಟ ಸಂದೇಶ ಈ ನಾಟಕದಲ್ಲಿ ಅಡಗಿದೆ. ಕೊನೆಯಲ್ಲಿ ‘ಬಾಬ್ ಮಾರ್ಲಿ ಫ್ರಮ್ ಮಿಲ್ಕಿವೇ’ (ಜಾತಿಯಲ್ಲ, ಧರ್ಮವಲ್ಲ, ಕೇರಿಯಲ್ಲ, ಊರಲ್ಲ, ದೇಶ, ಭೂಮಿಯ ಗಡಿಗಳನ್ನು ದಾಟಿ ಸೌರಮಂಡಲದ ಉಗಮ ಸ್ಥಳ ಮಿಲ್ಕಿವೆ. ಎಲ್ಲೆ ಇಲ್ಲದ್ದು.) ಆಗುವ ಪ್ರಯತ್ನ ಸಂಕೋಲೆಗಳಿಂದ ನಮ್ಮನ್ನು ಬಂದ ಮುಕ್ತಗೊಳಿಸಿ ನಿರ್ದಿಗಂತದೆಡೆಗೆ ಕರೆದೊಯ್ಯುತ್ತದೆ.
ಕೊನೆಯಲ್ಲಿ ಬರುವ ಹಾಡಿ ರೂಪದ ಮಾತುಗಳು “ಎಲ್ಲಿಗಂಟ ಒಬ್ಬ ಶ್ರೇಷ್ಠ, ಮತ್ತೊಬ್ಬ ಕನಿಷ್ಠ ಅಂತ ಇರ್ಥದೋ ಅಲ್ಲಿಗಂಟ, ಘೋಷಣೆ, ಹೋರಾಟ, ಸಂಘರ್ಷ ಇರ್ಥದೆ, ಯುದ್ಧ ಇರ್ಥದೆ… ಸುಮಾರು ಒಂದು ಗಂಟೆ ನಲವತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ಗಟ್ಟಿಯಾಗಿ ಕುರ್ಚಿಗಳ ಮೇಲೆ ಕೂರಿಸುವ ತಂಡದ ಪ್ರಯತ್ನ ಶ್ಲಾಘನೀಯ. ಇಲ್ಲಿ ಕೆಲವೊಮ್ಮೆ ಮಾತುಗಳಿಗಿಂದ ಮೌನವು ಎಚ್ಚು ಪರಿಣಾಮಕಾರಿಯಾಗಿದೆ.
ರಂಗದ ಮೇಲೆ ಮೂವರೇ ಕಲಾವಿದರಿಂದ, ಅತ್ಯಂತ ಕಡಿಮೆ ರಂಗ ಪರಿಕರಗಳನ್ನು ಬಳಸಿ, ಹಳೆಯ ವಿಚಾರವಾದರೂ ಅದನ್ನು ವಿಭಿನ್ನ ರೀತಿಯಲ್ಲಿ ರಂಗದ ಮೇಲೆ ಕತೆಯನ್ನು ನಿರೂಪಿಸುವ ಶೈಲಿ ಅತ್ಯಂತ ಆಪ್ತವಾಗಿದೆ. ಅಗತ್ಯಕ್ಕೆ ತಕ್ಕಂತೆ ಅಂಬೇಡ್ಕರ್ ಅವರ ‘ವೀಸಾಕ್ಕಾಗಿ ಕಾಯುವ ಜನ’ ಮತ್ತು ಅವರ ಕೆಲವು ಭಾಷಣಗಳನ್ನು ಹಾಗೂ ರೋಹಿತ್ ವೆಮುಲಾ ಕೊನೆಯ ಪತ್ರವನ್ನು ಬಳಸಿಕೊಳ್ಳಲಾಗಿದೆ. ಮನವೆಲ್ಲವೂ ಬಯಲಾಗಿದೆ ಹಾಡು ಮತ್ತು ಕೊನೆಯಲ್ಲಿ ಬರುವ ಹಾಡು ಸದಾ ಗುನುಗುವಂತೆ ಮಾಡಿದೆ. ಇದು ನಮ್ಮ ನಡುವೆ ನಡೆದು ಹೋಗಿರುವ, ಈಗಲೂ ನಡೆಯುತ್ತಿರುವ, ನಾವು ಎಚ್ಚರ ತಪ್ಪಿದರೆ ಮುಂದೆಯೂ ನಡೆಯುವ ಕಥನ.
ಇದನ್ನೂ ನೋಡಿ: ಮುಡಾ ಪ್ರಕರಣ | ದ್ವೇಷ ಸಾಧನೆಗೆ ರಾಜಕೀಯ ಕುಟುಂಬದ ಹೆಣ್ಣುಮಕ್ಕಳನ್ನು ಎಳೆದುತರಬೇಡಿ; ಸಿದ್ದರಾಮಯ್ಯ ಪತ್ನಿ ಭಾವುಕ ಪತ್ರ