ಬೆಂಗಳೂರು: ಎರಡನೇ ಹಂತದ ಅನ್’ಲಾಕ್ ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ಸಲುವಾಗಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಲು ಹಾಗೂ ಧಾರ್ಮಿಕ ಕ್ಷೇತ್ರಗಳ ತೆರೆಯಲು ಚಿಂತನೆಗಳು ನಡೆಯುತ್ತಿದ್ದು, ಈ ಕುರಿತು ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರ ಅಭಿಪ್ರಾಯದ ಬಳಿಕ ಸರ್ಕಾರ ನಿರ್ಧಾರ ತೆಗೆದುಕೊಳ್ಲಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಜನ ಸಂಚಾರಕ್ಕೆ ಅನುಕೂಲವಾಗುವಂತೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಿಸುವ ಕುರಿತು ಚರ್ಚೆ ನಡೆದಿದೆ. ಶೀಘ್ರದಲ್ಲೇ ಕೋವಿಡ್ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ನಗರದಲ್ಲಿ ಸಾರಿಗೆ ಆರಂಭಿಸುವಂತೆ ಜನಸಾಮಾನ್ಯರಿಂದ ಒತ್ತಡವೂ ಹೆಚ್ಚುತ್ತಿದೆ. ಆಧ್ದರಿಂದ ಲಾಕ್ಡೌನ್ ಸಡಿಲಿಕೆಯ ಎರಡನೇ ಹಂತದಲ್ಲಿ ಸಾರಿಗೆ ವ್ಯವಸ್ಥೆ ಆರಂಭಿಸುವ ಕುರಿತು ಚರ್ಚೆ ನಡೆದಿದೆ. ನಗರದಲ್ಲಿ ಕೊರೋನಾ ವೈರಸ್ ಹಾವಳಿ ಸಂಪೂರ್ಣವಾಗಿ ನಿಂತಿಲ್ಲ ಈ ಕಾರಣದಿಂದ ಶೇ.100 ಸಾರಿಗೆ ವ್ಯವಸ್ಥೆ ಸದ್ಯಕ್ಕೆ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದೀಗ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಆದರೆ, ಮತ್ತೆ ಸೋಂಕು ಹರಡದಂತೆ ಮಾಡಲು ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಳಿದೆ. ಜೂನ್.21ಕ್ಕೂ ಮುನ್ನ ನಿರ್ಬಂಧಗಳ ಸಡಿಲಿಕೆ ಮಾಡುವುದಿಲ್ಲ. ಹೆಚ್ಚೆಚ್ಚು ಜನರು ಸೇರುವ ಕಾರಣ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡಲಿದೆ. ಹೀಗಾಗಿ ಮಾರುಕಟ್ಟೆಯನ್ನು ಈಗಲೇ ತೆರೆಯುವ ಚಿಂತನೆಗಳಿಲ್ಲ. ಮಾಲ್, ಚಿತ್ರಮಂದಿರ, ಜಿಮ್ ತೆರೆಯುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ, ಧಾರ್ಮಿಕ ಪ್ರದೇಶಗಳಲ್ಲೂ ಹೆಚ್ಚೆಚ್ಚು ಜನರು ಸೇರುವುದರಿಂದ ಸೋಂಕು ಹೆಚ್ಚಾಗಿ ಹರಡಲಿದೆ. ಹೀಗಾಗಿ ಸರ್ಕಾರ ಈ ಕುರಿತು ಚಿಂತನೆ ನಡೆಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.