ವೀಕೆಂಡ್ ಕರ್ಫ್ಯೂನಲ್ಲಿ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ

ಬೆಂಗಳೂರು: ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲೂ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಬಸ್ ಸಂಚಾರ ನಡೆಸಲಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮೊದಲು, ವೀಕೆಂಡ್‌ ಕರ್ಫ್ಯೂನಲ್ಲಿ ಬಸ್ ಓಡಾಟವಿಲ್ಲ ಎಂದು ಬಿಎಂಟಿಸಿ ಹೇಳಿತ್ತು. ಆದರೆ, ನಾಳೆಯಿಂದ ವೀಕೆಂಡ್‌ ಕರ್ಫ್ಯೂನಲ್ಲೂ ಬಸ್‌ ಸಂಚಾರ ನಡೆಯಲಿದೆ. ಜನರ ಅನುಕೂಲಕ್ಕಾಗಿ ನಾಳೆಯೂ ಬಿಎಂಟಿಸಿ ಬಸ್ ಓಡಾಟ ನಡೆಸಲಾಗುತ್ತದೆ. ವಾರಾಂತ್ಯದ ಕರ್ಫ್ಯೂನಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ಬಸ್ ಓಡಾಟ ಇರಲಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್​ಟಿಸಿ ಈಗಾಗಲೇ ದಿನದ 24 ಗಂಟೆಯೂ ಬಸ್ ಕಾರ್ಯಚರಣೆ ನಡೆಸುತ್ತಿದೆ. ಈಗಾಗಲೇ ವಾರದ 5 ದಿನಗಳು 4 ಸಾವಿರ ಬಸ್ ಕಾರ್ಯಚರಣೆ ಮಾಡಲಾಗುತ್ತಿದೆ. ಇದೀಗ, ವಾರಾಂತ್ಯ ಕರ್ಫ್ಯೂ ವೇಳೆಯಲ್ಲೂ ಬಸ್ ಓಡಾಟ ನಡೆಸಲಾಗುವ ಬಗ್ಗೆ ತಿಳಿದುಬಂದಿದೆ.

ಕರ್ಫ್ಯೂ ವೇಳೆಯಲ್ಲಿ ಅಗತ್ಯ ವಸ್ತುಗಳನ್ನ ಹೊರತು ಪಡಿಸಿ ಎಲ್ಲವೂ ಕ್ಲೋಸ್ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆಸುವ ಬಿಎಂಟಿಸಿ ಬಸ್​ಗಳ ಸಂಖ್ಯೆ ಎಂದಿಗಿಂತ ಕಡಿಮೆ ಇರಲಿದೆ. ನಾಳೆ 1200 ಬಸ್ ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ.

ಬಿಎಂಟಿಸಿ ಕಡೆಯಿಂದ ಪ್ರಯಾಣಿಕರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಜನರು ಕಂಪೆನಿ, ಕಚೇರಿ ಕೆಲಸದ ಮೇಲೆ ಓಡಾಟ ಮಾಡಬೇಕಾಗಿ ಬರಬಹುದು. ಹಾಗಾಗಿ, ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ. ಜನ ಅವರ ಅಗತ್ಯತೆ ಮೇರೆಗೆ ಓಡಾಟ ನಡೆಸಬೇಕು ಎಂದು ತಿಳಿಸಲಾಗಿದೆ. ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಎಂಟಿಸಿಗೆ ನಿನ್ನೆ 1 ಕೋಟಿ 7 ಲಕ್ಷ ಆದಾಯ ಬಂದಿದೆ. 9 ಲಕ್ಷ 31 ಸಾವಿರ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯದ ಅವಧಿಯಲ್ಲೂ ಬಸ್ ಸಂಚಾರ ನಡೆಸಲಾಗುವ ಬಗ್ಗೆ ತಿಳಿಸಲಾಗಿದೆ.

ನಾಳೆ ಮತ್ತು ನಾಡಿದ್ದು ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟನೆಗೆ ಅನುಗುಣವಾಗಿ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಕೆಎಸ್​ಆರ್​ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ. 500 ರಿಂದ 1000 ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಎಂದಿನಂತೆ ಬೆಳಿಗ್ಗೆ ಹಾಗೂ ರಾತ್ರಿ ಬಸ್ಸುಗಳ ಕಾರ್ಯಚರಣೆ ಇರುತ್ತದೆ. ಸದ್ಯ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಬಸ್ಸುಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ವಿರಳವಾಗಿರಬಹುದು. ಹಾಗಾಗಿ ಬಸ್ಸುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *