ಬೆಂಗಳೂರು: ರಾಜ್ಯ ಸರ್ಕಾರದ ಕೈಯಲ್ಲಿ ‘ನಮ್ಮ ಮೆಟ್ರೊ’ ಪ್ರಯಾಣ ದರ ಹೆಚ್ಚಳದ ಅಧಿಕಾರ ಇಲ್ಲ. ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಸ್ಥಾಪಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಪ್ರಯಾಣ ದರ ಹೆಚ್ಚಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಮ್ಮ
‘ಬಿಎಂಆರ್‌ಸಿಎಲ್ ಸ್ವಾಯತ್ತ ಸಂಸ್ಥೆಯಾಗಿದ್ದು ಅದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿ ಇರುತ್ತಿದ್ದರೆ ಬಿಎಂಆರ್‌ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು’ ಎಂದು ‘ನಮ್ಮ ಮೆಟ್ರೊ’ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ, ಪ್ರಶ್ನಿಸಿದ್ದಾರೆ.
‘ಕೇಂದ್ರ ನಗರ ಮತ್ತು ವಸತಿ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಶ್ರೀನಿವಾಸ ಕಟಿಕಿಥಲ ಅವರು ಬಿಎಂಆರ್‌ಸಿಎಲ್ ಅಧ್ಯಕ್ಷರು. ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರ ಸ‍್ಥಾನದಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿದ್ದಾರೆ. 2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಿಸಿಲ್ಲ. ಹೀಗಾಗಿ, ದರ ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಬಿಎಂಆರ್‌ಸಿಎಲ್ ಪತ್ರ ಬರೆದಿತ್ತು’ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಮಹಿಳಾಧಿಕಾರಿಗೆ ಬೆದರಿಕೆ ಹಾಕಿದ್ದು ನಿಜವಾದರೆ ಶಾಸಕನ ಪುತ್ರನ ವಿರುದ್ಧ ಕ್ರಮ: ಜಿ ಪರಮೇಶ್ವರ್
‘ಕೇಂದ್ರ ಸರ್ಕಾರವು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಥರಾನಿ ಅವರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣಾ ಸಮಿತಿ ರಚಿಸಿ, ಮೂರು ತಿಂಗಳ ಒಳಗೆ ಶಿಫಾರಸು ಸಲ್ಲಿಸುವಂತೆ ತಿಳಿಸಿತ್ತು. ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ದೆಹಲಿ ಹಾಗೂ ಚೆನ್ನೈ ಮೆಟ್ರೊ ಸಂಸ್ಥೆಗಳ ಅಧಿಕಾರಿಗಳ ಜೊತೆ ಕಾರ್ಯಾಚರಣೆ ಮತ್ತು ಪ್ರಯಾಣ ದರದ ಬಗ್ಗೆ ಸಮಾಲೋಚನೆ ನಡೆಸಿ ಈ ಸಮಿತಿ 2024ರ ಡಿ. 16ರಂದು ವರದಿ ಸಲ್ಲಿಸಿತ್ತು’ ಎಂದಿದ್ದಾರೆ.
‘ಸದ್ಯ ನಮ್ಮ ಮೆಟ್ರೊ ಪ್ರಯಾಣ ದರ ಕನಿಷ್ಠ ₹10 ಮತ್ತು ಗರಿಷ್ಠ ₹90. ಮುಂಬೈ ಮೆಟ್ರೊ ರೈಲಿನ ಕನಿಷ್ಠ ಪ್ರಯಾಣ ದರ ₹10 ಮತ್ತು ಗರಿಷ್ಠ ಪ್ರಯಾಣ ದರ ₹80 ಆಗಿದೆ. ದೆಹಲಿ ಮೆಟ್ರೊ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮೊದಲ ಹಂತದ ಪ್ರಯಾಣ ದರವನ್ನು ಆಯಾ ರಾಜ್ಯಗಳ ಮೆಟ್ರೊ ನಿಗಮಗಳೇ ನಿಗದಿಪಡಿಸಿತ್ತು. ಈಗ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ನೇಮಿಸುವ ಸಮಿತಿ ನಿಗದಿಪಡಿಸುತ್ತದೆ. ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯ ಸೆಕ್ಷನ್ 37ರ ಪ್ರಕಾರ ಪ್ರಯಾಣ ದರ ನಿಗದಿ ಸಮಿತಿ ನೀಡಿದ ವರದಿಯನ್ನು ಮೆಟ್ರೊ ರೈಲು ನಿಗಮಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: ರೈತ ನಾಯಕ ವಿಜೂ ಕೃಷ್ಣನ್ ಕೇಂದ್ರ ಬಜೆಟ್‌ಗೆ ಸೊನ್ನೆ ಅಂಕ ಕೊಟ್ಟಿದ್ಯಾಕೆ? Janashakthi Media