ಬೆಂಗಳೂರು : “ಧರ್ಮ ಎಂದಿಗೂ ಮನುಷ್ಯನ ಶೋಷಣೆಯ ಅಸ್ತ್ರವಾಗಬಾರದು, ಒಬ್ಬ ಧರ್ಮನಿರಪೇಕ್ಷ ಆಗದಿದ್ದರೆ ಇಸ್ಲಾಂ ಆಗಲು ಸಾಧ್ಯವಿಲ್ಲ. ಲಾಭಾಂಶ ಹಾಗೂ ಬಡ್ಡಿ ಹೆಚ್ಚಳ ಬಂಡವಾಳಶಾಹಿ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕಾರ್ಲ್ ಮಾರ್ಕ್ಸ ಹೇಳಿದ್ದಾರೆ. ಇದನ್ನೇ ಇಸ್ಲಾಂ ಕೂಡಾ ಹೇಳುತ್ತದೆ. ನಾವು ಯಾವುದೇ ವಿಚಾರವನ್ನು ಅಧ್ಯಯನದ ದೃಷ್ಟಿಯಿಂದ ನೋಡಬೇಕು. ರಾಜಕೀಯ ದೃಷ್ಟಿಯಿಂದ ನೋಡಬಾರದು,” ಎಂದು ಹಿರಿಯ ಪತ್ರಕರ್ತರು ಬಿಎಮ್ ಹನೀಫ್ ರವರು ಸಿಪಿಐಎಂ ಆಯೋಜಿಸಿದ್ದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ನಡೆದ “ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ” ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಮಾತನಾಡುತ್ತಾ ಹೇಳಿದರು.
ಮುಸ್ಲಿಮರ ನೋವು ಇನ್ನೊಬ್ಬರ ನೋವು ಕೂಡಾ ಹೌದು. ಹಲವಾರು ಮಂದಿ ಮುಸ್ಲಿಮರೆಲ್ಲರೂ ಒಂದೇ ರೀತಿ, ಅವರ ಸಂಸ್ಕೃತಿ ಒಂದೇ ಅಂದು ಕೊಳ್ಳುತ್ತಾರೆ. ಆದರೆ ನೈಜವಾಗಿ ಆ ರೀತಿ ಇಲ್ಲ. ಮುಸ್ಲಿಮರಲ್ಲೂ ಹಲವಾರು ವ್ಯತ್ಯಾಸಗಳು ಇದೆ. ಮುಸ್ಲಿಮರ ಸಂಸ್ಕೃತಿ, ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇದೆ. ಕರ್ನಾಟಕದಲ್ಲಿ ಹೇಗೆ ಬೇರೆ ಬೇರೆ ಸಂಸ್ಕೃತಿ ಇದೆಯೋ ಹಾಗೆಯೇ ಮುಸ್ಲಿಮರಲ್ಲಿದೆ. ಯಾವುದೆ ಧರ್ಮಕ್ಕೆ ಒಂದೇ ಸಂಸ್ಕೃತಿ ಇಲ್ಲ. ಸಂಸ್ಕೃತಿ ಎನ್ನುವುದು ಪ್ರಾದೇಶಿಕವಾದುದು. ಧರ್ಮ ಎಂಬುವುದು ಮನುಷ್ಯ ಹಾಗೂ ದೇವರ ನಡುವಿನ ಸಂವಾದ. ಈ ವ್ಯತ್ಯಾಸಗಳು ಗೊತ್ತಾದರೆ ಮಾತ್ರ ಸರಿಯಾದ ಉತ್ತರ ನೀಡಲು ಸಾಧ್ಯವಾಗುತ್ತದೆ. ಸಂಸ್ಕೃತಿ ಬದಲಾದಂತೆ ಮನುಷ್ಯ, ಮನುಷ್ಯನ ನಡುವೆ ಬಿರುಕು ಸೃಷ್ಟಿಯಾಗುತ್ತದೆ,” ಎಂದು ತಿಳಿಸಿದರು.
“ಕರ್ನಾಟಕದಲ್ಲಿ ಧರ್ಮ ರಕ್ಷಣೆ ಮಾಡುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ತಾವು ನಿಜವಾಗಿ ಮಾಡಬೇಕಾದ ಕೆಲಸವನ್ನು ಮರೆತಿದ್ದಾರೆ. ಮಠಾಧೀಶರು ರಾಜಕೀಯ ಮಾತನಾಡುತ್ತಿದ್ದಾರೆ. ಪರಿಸ್ಥಿತಿಯು ಉಲ್ಟಾ ಆಗಿದೆ. ಇದು ಸಹಜ ಎಂಬಂತೆ ಬಿಂಬಿತವಾಗುತ್ತಿದೆ. ನೀವು ನಿಮ್ಮ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಮಾತನಾಡಲು ಸಾಧ್ಯವಾಗದಂತಹ ಸ್ಥಿತಿಯನ್ನು ಸರ್ಕಾರ ತಂದಿದೆ. ರಾಜ್ಯದಲ್ಲಿ ಕಾನೂನು ಸಂಪೂರ್ಣವಾಗಿ ಹದಗೆಟ್ಟಿದೆ, ದರಿದ್ರವಾಗಿದೆ,” ಎಂದು ಹೇಳಿದರು.
“ನಾವು ಈವರೆಗೂ ಬಿಜೆಪಿ, ಆರ್‌ಎಸ್‌ಎಸ್ ಟಿಪ್ಪು ಸುಲ್ತಾನನ ವಿರೋಧಿಗಳು ಎಂದು ತಿಳಿದಿದ್ದೆವು. ಆದರೆ ಅವರು ನಾರಾಯಣ ಗುರು, ಕುವೆಂಪು, ಬಸವಣ್ಣನ ವಿರೋಧಿಗಳು ಎಂದು ಪುಸ್ತಕ ಪರಿಷ್ಕರಣೆ ಮಾಡಿದಾಗ ಬಹಿರಂಗವಾಗಿದೆ. ನಿಜಾಂಶ ಈಗ ಹೊರಬರುತ್ತಿದೆ. ಆದರೆ ನಾವು ಈ ಸಂದರ್ಭದಲ್ಲಿ ಎಡವಬಾರದು. ಕೆಟ್ಟ ಮಾತಿಗೆ ಕೆಟ್ಟ ಮಾತು ಉತ್ತರವಲ್ಲ. ಶಿರವಸ್ತ್ರ (ಸ್ಕಾರ್ಪ್) ಧರಿಸದಿದ್ದರೆ ಧರ್ಮವೇನು ಕೊನೆಯಾಗಲ್ಲ. ಹಾಗೆಯೇ ಶಿರವಸ್ತ್ರ ಧರಿಸಿದರೆ ಶಿಕ್ಷಣಕ್ಕೆ ಏನು ತೊಂದರೆಯಾಗಲ್ಲ,” ಎಂದು ಅಭಿಪ್ರಾಯಪಟ್ಟರು.
ಸಾಚಾರ್ ವರದಿಯಲ್ಲಿ ಎಲ್ಲಾ ರಾಜ್ಯಗಳು ಅಲ್ಪಸಂಖ್ಯಾತ ಆಯೋಗವನ್ನು ರದ್ದು ಮಾಡಬೇಕು ಎಂದು ಹೇಳಿದೆ. ಈ ಸಮಿತಿಯು ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿದ್ದು ಈ ವೇಳೆ ಮುಸ್ಲಿಮರ ಸ್ಥಿತಿ ದಲಿತರಿಗಿಂತ ಕೆಳಗಿದೆ ಎಂದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಸ್ಲಿಂ ಆಯೋಗವನ್ನು ರದ್ದು ಮಾಡಿ, ಸಮಾನ ಪ್ರಾತಿನಿಧ್ಯದ ಆಯೋಗ ರಚನೆ ಆಗಬೇಕು ಎಂದು ಈ ವರದಿ ಹೇಳುತ್ತದೆ,” ಎಂದರು.
“ಕನ್ನಡದ ಸಂಸ್ಕೃತಿಯೆಂದರೆ ಬಸವಣ್ಣನ, ಶಿಶುನಾಳ ಷರೀಫರ, ರೆವರೆಂಡ್ ಎಫ್ ಕಿಟ್ಟೆಲ್ ರ ಸಂಸ್ಕೃತಿ. ಕುವೆಂಪು ಕಟ್ಟಿದ ಸಂಸ್ಕೃತಿ, ಸಿನಿಮಾ ಮೂಲಕ ಕಟ್ಟಿದ ಸಂಸ್ಕೃತಿ, ರಾಜಕುಮಾರ್ ಕಟ್ಟಿದ ಸಂಸ್ಕೃತಿ,” ಎಂದು ಹೇಳಿದ ಬಿಎಮ್ ಹನೀಫ್, “ಕಮ್ಯೂನಿಸ್ಟ್ ಪಕ್ಷಗಳು ಕೊಮುವಾದದ ವಿರುದ್ಧ ಸ್ಪಷ್ಟ ಸೈದ್ಧಾಂತಿಕ ಹೋರಾಟ ಮಾಡುತ್ತಿವೆ. ಮುಸ್ಲಿಮರನ್ನು ಪ್ರತ್ಯೇಕವಾಗಿ ನೋಡದೆ ಅವರು ದೇಶದ ಆರ್ಥಿಕತೆಗೆ ನೀಡಿದ ಕೊಡುಗೆಗಳನ್ನು ನಾವು ನೋಡಬೇಕಾಗಿದೆ. ಜೀತಾದಾರಿಕೆಗೂ ಒಂದು ಇತಿಮಿತಿ ಇದೆ. ರಾಜಕೀಯ ಜೀತಾದಾರಿಕೆಯನ್ನು ಬಿಡಬೇಕು,” ಎಂದು ಹೇಳಿದರು.
ಗೋಷ್ಠಿಯಲ್ಲಿ ವಿಷಯ ಮಂಡಿಸುತ್ತಾ ಮಾತನಾಡಿದ ಚಿಂತಕರು, ಬರಹಗಾರರಾದ ಬಿ. ಪೀರ್ ಭಾಷಾ “ಪ್ರಭುತ್ವ ಬಹಳ ಸ್ಪಷ್ಟವಾಗಿ ಫ್ಯಾಸಿಸ್ಟ್ ಆಗಿದೆ. ಆದರೆ ಅದು ಮುಸಲೋನಿ ಮತ್ತು ಹಿಟ್ಲರ್ ಮಾಡಿದಂತೆ ಅಲ್ಲ. ನಾವು ಈಗಾಗಲೇ ಭಾರತೀಯ ಫ್ಯಾಸಿಸಂ ಗೆ ಒಳಗಾಗಿದ್ದೇವೆ. ಇದು ಪ್ರಯೋಗಶಾಲೆ ಮಾತ್ರವಲ್ಲ, ಇದು ಫ್ಯಾಸಿಸಂನ ಮುನ್ನಡೆಯಾಗಿದೆ. ಗೋಳ್ವಾಲಕರ್ ಬಹಳ ಸ್ಪಷ್ಟವಾಗಿ ಕಮ್ಯುನಿಷ್ಟರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈ ದೇಶದ ಒಳಗಿನ ಶತ್ರುಗಳು ಎಂದು ಹೇಳಿದ್ದಾರೆ. ಹೀಗಾಗಿ ಈ ಮೂವರೂ ಒಗ್ಗಟ್ಟಾಗಬೇಕು ಎಂಬುವುದು ನನ್ನ ಅನಿಸಿಕೆ,” ಎಂದರು.
“ಭಾರತದಲ್ಲಿ ಧಮನ ಎನ್ನುವುದು ವರ್ಗದ ಆಧಾರದಲ್ಲಿ ಮಾತ್ರವಲ್ಲ. ಜೊತೆಗೆ ಜಾತಿಯ ಆಧಾರದಲ್ಲೂ ಶೋಷಣೆ ನಡೆಯುತ್ತಿದೆ. ಭಾರತದ ಮುಸ್ಲಿಮರು ನೇರವಾಗಿ ಅರಬ್ ರಾಷ್ಟ್ರದಿಂದ ಬಂದವರು ಅಲ್ಲ. ಅವರು ಕೂಡಾ ಇಲ್ಲಿನ ಒಂದು ಕಾಲದ ಶೋಷಿತ ಸಮುದಾಯದವರೇ ಆಗಿದ್ದಾರೆ. ಭಾರತೀಯ ಮುಸ್ಲಿಮರು ಇಲ್ಲಿನ ಶೂದ್ರ ಸಂಸ್ಕೃತಿಯೊಂದಿಗೆ ಬೆಸೆದಿದ್ದಾರೆ. ಮುಸ್ಲಿಮರು ಮನುವಾದ ವಿರುದ್ದ ಸಿಡಿದು ಬಂದವರಾಗಿದ್ದಾರೆ. ಆದ್ದರಿಂದಲೇ ಅವರನ್ನು ಕ್ರೂರವಾಗಿ ದಮನಿಸಲಾಗುತ್ತಿದೆ. ದಲಿತರನ್ನು ಸಾಂಸ್ಕೃತಿಕ ಅಸ್ತ್ರದ ಮೂಲಕ ನಿಯಂತ್ರಿಸಲಾಗುತ್ತಿದೆ. ಈ ಎರಡು ಸಮುದಾಯಗಳೆ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡಬಹುದಾಗಿದೆ. ಹಿಂದೂ-ವರ್ಸಸ್ ಮುಸ್ಲಿಂ ಎಂಬ ದೃವೀಕರಣ ಮಾಡಲಾಗುತ್ತಿದೆ. ಹಿಂದೂ ಮೂಲಭೂತವಾದಕ್ಕೆ ಬೇಕಾಗಿದ್ದು ಮುಸ್ಲಿಂ ಮೂಲಭೂತವೇ ಎಂಬ ವಿಚಾರದಲ್ಲಿ ಚಿಂತನೆ ನಡೆಸಬೇಕಾಗಿದೆ, ಎಚ್ಚರವಾಗಿರಬೇಕಾಗಿದೆ. ಮುಸ್ಲಿಮರು ಮತೀಯವಾದಿಗಳು ಆಗಬಾರದು. ಜನಚಳವಳಿ ಕೂಡಾ ಮುಸ್ಲಿಮರ ಜೊತೆಯಾಗಬೇಕು. ಮುಸ್ಲಿಮರು ಪ್ರಜಾಪ್ರಭುತ್ವದೆಡೆ ಹೆಜ್ಜೆ ಇರಿಸಬೇಕು ಎಂದರು.
“ಕೂಡಿಬಾಳುವುದು ನಮ್ಮ ನಾಡಿನಲ್ಲಿ ಇರುವ ಪರಂಪರೆ. ಹಿಂದೂ ಮುಸ್ಲಿಂ ನಾವು ಒಂದು ಕೂಡಿ ಬದುಕುತ್ತೇವೆ, ಅದರಿಂದಾಗಿ ಅವರ ಗಂಟು ಏನು ಹೋಗುತ್ತದೆ. ನಮ್ಮ ಭಾವಕೈತೆಯನ್ನು ಅವರು ಅಳಿಸಲು ಹೇಗೆ ಸಾಧ್ಯ,” ಎಂದ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿಗಳೂ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ನೀಲಾರವರು ತಿಳಿಸಿದರು, ಮುಂದುವರಿದು ಮಾತನಾಡಿದ ಅವರು, “ನಿರುದ್ಯೋಗ, ಬಡತನ, ಬೆಲೆ ಏರಿಕೆ, ಕಳ್ಳಕೂಟ ಸೃಷ್ಟಿ ಮಾಡುತ್ತಾರೆ. ಇವೆಲ್ಲವನ್ನು ಮರೆ ಮಾಡಲು ಈಗ ಗಲಾಟೆಗಳನ್ನು ಸೃಷ್ಟಿ ಮಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಮಾಡಿದ ಷಡ್ಯಂತ್ರದಿಂದಾಗಿ ದಲಿತರು ಮತ್ತು ಮುಸ್ಲಿಮರು ಕಮ್ಯುನಿಷ್ಟರಿಂದ ದೂರ ಹೋಗುವಂತಾಯಿತು. ಪ್ರತಿ ಬಾರಿ ಕೋಮುವಾದಿಗಳು ಹೊಸ ಹೊಸ ಆಟ ಹೂಡುತ್ತಾರೆ. ನಾವೆಲ್ಲರೂ ಕೂಡಿ ಬದುಕಿದವರು. ಈ ಬಗ್ಗೆ ಬರೆದ ಪಾಠವನ್ನು ಪಠ್ಯಪುಸ್ತಕದಿಂದ ಕಿತ್ತು ಹಾಕಿದ್ದಾರೆ. ಎಷ್ಟು ವಿಭಜನೆ ಆಗಿದೆ ಎಂದರೆ ಭಾಷೆಯ ಆಧಾರದಲ್ಲಿ ನಮ್ಮನ್ನು ಒಡೆಯಲಾಗಿದೆ. ಹೆಣದ ಮೇಲೆ ರಾಜಕೀಯ ಮಾಡುವ ಪಕ್ಷಗಳು ಇವೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮನುಸ್ಮೃತಿಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಜನತೆಯ ಹೆಣದ ಮೇಲೆ ರಾಜಕೀಯ ಮಾಡುವಂತಹ ಕ್ರೂರ ರಾಜಕೀಯ ಮಾಡುವವರನ್ನು ನಾವು ನಿರಾಕರಿಸಬೇಕು,” ಎಂದು ತಿಳಿಸಿದರು.
ಬಹುಸಂಖ್ಯಾತ ಕೋಮುವಾದವನ್ನು ತಡೆಯಲು, ಅಲ್ಪಸಂಖ್ಯಾತ ಕೋಮುವಾದಕ್ಕೆ ನೀರು ಎರೆಯುವುದು ನಾವು ಈಗ ನೋಡುತ್ತಿದ್ದೇವೆ. ಆದರೆ ಅದು ಉತ್ತಮ ಬೆಳವಣಿಗೆಯಲ್ಲ. ಕಮ್ಯುನಿಷ್ಟರು ನಾಸ್ತಿಕರು ಎಂದು ಸುಳ್ಳು ಹರಡುತ್ತಾರೆ. ಧರ್ಮ ಅವರವರ ಆಯ್ಕೆ, ಕಮ್ಯೂನಿಸ್ಟ್ ಪಕ್ಷವು ನೀವ್ಯಾಕೆ ದೇವರನ್ನು ನಂಬಿದ್ದೀರಿ ಎಂದು ಕೇಳುವುದಿಲ್ಲ. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರೊಧಿಸಿದ ರೀತಿ ನಾವು ಸಾಚಾರ್ ವರದಿಯನ್ನು ಕೇಳಬೇಕು. ಮುಸ್ಲಿಮರ ಪ್ರಶ್ನೆ ಎಂದು ಏನು ತರುತ್ತಿದ್ದಾರೋ ಅದು ಮುಸ್ಲಿಮರ ಸಮಸ್ಯೆ ಅಲ್ಲ. ಅದು ದೇಶದ ಪ್ರಶ್ನೆ. ಲಕ್ಷ ಲಕ್ಷ ಜನ ಚಳವಳಿಯೊಂದಿಗೆ ಈ ಹಿಟ್ಲರ್ ವಾದಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಬೇಕು ಎಂದರು.
ಗೋಷ್ಠಿಯನ್ನು ಡಾ.ಜೀವನ್‌ರಾಜ್ ಕುತ್ತಾರ್ ನಿರ್ವಹಿಸಿದರು.