ಕೇರಳ | ಸ್ಫೋಟ ಪ್ರಕರಣ: 3 ಸಾವು, ಹಮಾಸ್‌ ದೂಷಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ

ತಿರುವನಂತಪುರಂ : ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನಾ ಸಭೆ ನಡೆಸುತ್ತಿದ್ದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇಬ್ಬರು ಮಹಿಳೆಯರು ಹಾಗೂ ಒಬ್ಬ ಬಾಲಕಿ ಸತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕೊಚ್ಚಿಯಿಂದ ಈಶಾನ್ಯಕ್ಕೆ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕಲಮಶೇರಿಯ ‘ಯಹೋವನ ಸಾಕ್ಷಿಗಳು’ ಪಂಥದ ಕಾರ್ಯಕ್ರಮ ನಡೆಯುತ್ತಿದ್ದ ಸಭಾ ಭವನದಲ್ಲಿ ಬೆಳಿಗ್ಗೆ 9.40ಕ್ಕೆ ಈ ಸ್ಫೋಟ ನಡೆದಿದೆ. ಮೂರು ದಿನಗಳ ಸಮಾವೇಶದ ಕೊನೆಯ ದಿನವಾದ ಭಾನುವಾರ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸಭಾ ಭವನದ ಒಳಗೆ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆ ನಡೆದ ಕೆಲವು ತಾಸುಗಳ ಬಳಿಕ, ಯಹೋವನ ಸಾಕ್ಷಿಗಳು ಪಂಥದ ಸದಸ್ಯನೆಂದು ಹೇಳಿಕೊಂಡ 48 ವರ್ಷ ವಯಸ್ಸಿನ ಡಾಮಿನಿಕ್ ಮಾರ್ಟಿನ್‌ ಎಂಬಾತ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ‘ಸ್ಫೋಟಕ್ಕೆ ನಾನೇ ಕಾರಣ’ ಎಂದು ಹೇಳಿಕೊಂಡಿದ್ದಾನೆ ಎಂದು ಕೇರಳದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ತಿಳಿಸಿದ್ದಾರೆ.

ಶಾಂತಿ ಕಾಪಾಡಬೇಕು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಅಥವಾ ದ್ವೇಷದ ಸಂದೇಶಗಳನ್ನು ಹರಡಬಾರದು ಎಂದು ಡಿಜಿಪಿ ಮನವಿ ಮಾಡಿದ್ದಾರೆ. ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಈ ಘಟನೆ ದುರದೃಷ್ಟಕರ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ವಿಜಯನ್ ಅವರು ಸೋಮವಾರ ಬೆಳಿಗ್ಗೆ 10 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ.

ಹಮಾಸ್‌ ಕಾರಣ ಎಂದ ಕೇರಳ ಬಿಜೆಪಿ ನಾಯಕ, ನೆಟ್ಟಿಗರಿಂದ ಛೀಮಾರಿ : ಕಲಮಶ್ಶೇರಿ ಬಾಂಬ್‌ ಸ್ಪೋಟ ಪ್ರಕರಣಕ್ಕೆ ಹಮಾಸ್‌ ಸಂಘಟನೆಯನ್ನು ಥಳುಕು ಹಾಕಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದ ಕೇರಳ ಬಿಜೆಪಿ ರಾಜ್ಯ ಸಮಿತಿ ಸದಸ್ಯನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ . ನೆಟ್ಟಿಗರು ಅವರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕಲಮಶೇರಿಯಲ್ಲಿ ನಡೆದ ಸ್ಪೋಟದ ಕುರಿತಂತೆ ಫೇಸ್‌ಬುಕ್‌ ಮೂಲಕ ಪ್ರತಿಕ್ರಿಯೆ ನೀಡಿದ್ದ ಕೇರಳ ಬಿಜೆಪಿ ರಾಜ್ಯ ಘಟಕದ ಸದಸ್ಯ ಸಂದೀಪ್‌ ಜಿ ವಾರಿಯರ್‌, “ಕಲಮಶೇರಿಯಲ್ಲಿ ದಾಳಿಗೊಳಗಾದ ʼಯೆಹೋವನ ಸಾಕ್ಷಿಗಳುʼ ಮತ್ತು ಯಹೂದಿಗಳು ಒಂದೇ ದೈವಿಕ ನಂಬಿಕೆಯನ್ನು ಅನುಸರಿಸುತ್ತಾರೆ. ಅವರು ʼತೋರಾʼದ (ಯಹೂದಿಯರ ಪವಿತ್ರ ಗ್ರಂಥ) ಅನುಯಾಯಿಗಳು.ಈ ಭಯೋತ್ಪಾದಕ ದಾಳಿಯ ಹೊಣೆಗಾರಿಕೆಯನ್ನು ಭದ್ರತೆಯಲ್ಲಿ ವಿಫಲವಾಗಿರುವ ಕೇರಳ ಸರ್ಕಾರ ಮತ್ತು ಹಮಾಸ್‌ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಸಿಪಿಎಂ, ಕಾಂಗ್ರೆಸ್ ನಾಯಕರು ಹೊರಬೇಕು. ಕಲಮಶೇರಿಯಲ್ಲಿ ನಡೆದ ಉಗ್ರರ ದಾಳಿ ಅನಿರೀಕ್ಷಿತವೇನಲ್ಲ. ಧೂಪ ಖರೀದಿಸಲು ಮೊದಲೇ ಹೇಳಿದ್ದರಲ್ಲವೇ?” ಎಂದು ಬರೆದಿದ್ದರು.

ಗಾಝಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯ ವಿರುದ್ಧ ಕೇರಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಮಾಸ್‌ ಮುಖಂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಲಪಂಥೀಯರು ಕಲಮಶೇರಿ ಸ್ಪೋಟವನ್ನು ಹಮಾಸ್‌ ಹಾಗೂ ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿದ್ದರು.

ಆದರೆ, ಯಹೋವನ ಸಾಕ್ಷಿಗಳು ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಾನು ಬಾಂಬ್‌ ಸ್ಪೋಟ ನಡೆಸಿದ್ದಾಗಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಆರೋಪಿ ಡೊಮಿನಿಕ್‌ ಮಾರ್ಟಿನ್‌ ಲೈವ್‌ ಬರುತ್ತಿದ್ದಂತೆಯೇ ಬಲಪಂಥೀಯರ ಸುಳ್ಳು ಪ್ರಚಾರಗಳಿಗೆ ತೀವ್ರ ಹಿನ್ನಡೆಯಾಗಿದೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ಗೆ ತರಾಟೆ ತೆಗೆದುಕೊಂಡ ಸಿಎಂ : ಕಲಮಶ್ಶೆರಿಯ ಪ್ರಾರ್ಥನಾ ಕೇಂದ್ರವೊಂದರಲ್ಲಿ ನಡೆದ ಸ್ಫೋಟದ ಕುರಿತು ತಮ್ಮನ್ನು ಟೀಕಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಮುಖ್ಯಮಂತ್ರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರ ಹೇಳಿಕೆ ಕೋಮುವಾದಿ ನಿಲುವಿನ ಭಾಗವಾಗಿದೆ, ಯಾವ ಮಾಹಿತಿಯನ್ನು ಆಧರಿಸಿ ನನ್ನ ವಿರುದ್ಧ ಅಂತಹ ಪೋಸ್ಟ್ ಮಾಡಿದ್ದಾರೆ? ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ತನಿಖೆಯು ಪ್ರಗತಿಯಲ್ಲಿರುವಾಗ ಅಂತಹ ಹೇಳಿಕೆಯನ್ನು ನೀಡಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದರು.

ರಾಜೀವ್ ಚಂದ್ರಶೇಖರ್ ಎಕ್ಸ್ ನಲ್ಲಿ ಈ ರೀತಿ ಬರೆದುಕೊಂಡಿದ್ದರು, ಬೆಲೆ ಕಳೆದುಕೊಂಡ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ @pinarayivijayan ಅವರಿಂದ ನಾಚಿಕೆಗೇಡು. ತುಷ್ಟೀಕರಣ ರಾಜಕಾರಣ ನಡೆಯುತ್ತಿದ್ದು, ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿದ್ದಾರೆ. ಕೇರಳದಲ್ಲಿ ಜಿಹಾದ್ಗಾಗಿನ ಹಮಾಸ್ ಭಯೋತ್ಪಾದಕರು ಮುಗ್ಧ ಕ್ರಿಶ್ಚಿಯನ್ನರ ಮೇಲೆ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸುವಾಗ ದಿಲ್ಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟಿಸುತ್ತಿದ್ದಾರೆ” ಎಂದು ಬರೆದಿದ್ದರು.

ಈ ಪೋಸ್ಟ್ ಅನ್ನು ಉಲ್ಲೇಖಿಸಿದ ಪಿಣರಾಯಿ ವಿಜಯನ್, ಆ ಹೇಳಿಕೆಯು ಸಂಪೂರ್ಣವಾಗಿ ಕೋಮುವಾದಿ ಮನಸ್ಥಿತಿಯ ಪ್ರತಿಫಲನವಾಗಿದೆ.ಆದರೆ, ಕೇರಳವೆಂದೂ ಅವರ ಕಾರ್ಯಸೂಚಿಯ ಪರವಿಲ್ಲ. ಅಂತಹ ಅಭಿಯಾನಗಳಿಗೆ ಬಲಿಯಾಗಬಾರದು ಎಂದು ಕೇರಳ ಜನತೆಗೆ ಮನವಿ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *