ಮೇ 26:  “ಕರಾಳ ದಿನ”  ಆಚರಣೆಗೆ ಐತಿಹಾಸಿಕ ಜನಸ್ಪಂದನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ  ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ  ನಿರಂತರ ಹೋರಾಟಕ್ಕೆ ಆರು ತಿಂಗಳು ಪೂರ್ಣಗೊಂಡಿವೆ.  ಮೇ 26 ರಂದು  ಅನ್ನದಾತರು ದೇಶವ್ಯಾಪಿ ಕರಾಳದಿನವನ್ನಾಗಿ ಆಚರಿಸಿದ್ದಾರೆ. ಮನೆ ಮನೆಗಳಲ್ಲಿ, ತಾವಿದ್ಧ ಜಾಗದಲ್ಲಿಯೇ ಪ್ರತಿಭಟನಾನಿರತ ರೈತರು ಹಣೆಪಟ್ಟಿಗೆ ಕಪ್ಪುಬಟ್ಟೆ ಧರಿಸಿ, ಕೈಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಹಲವುಕಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.

ಮೇ 26 ರಂದು ದಿಲ್ಲಿಯ ಗಡಿಗಳಲ್ಲಿ ರೈತರ ಅಭೂತಪೂರ್ವ ಹೋರಾಟಕ್ಕೆ ಆರು ತಿಂಗಳು ಪೂರ್ಣಗೊಂಡಿವೆ. ಆ ಹಿನ್ನಲೆಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ ಮೇ 26 ನ್ನು ಕರಾಳದಿನ ಎಂದು ಆಚರಿಸಲು ಕರೆ ನೀಡಿತ್ತು. ಇದಕ್ಕೆ ಎರಡು ಕಾರಣಗಳಿವೆ ಮೊದಲನೆಯ ಕಾರಣ ಏನು ಅಂದ್ರೆ, ಕಾರ್ಮಕ ವರ್ಗದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದೊಂದಿಗೆ ರೈತರ ಈ ಹೋರಾಟ ಆರಂಭವಾಗಿತ್ತು. ಮೇ 26, ಈ ರೈತ ಹೋರಾಟವನ್ನು  ಹತ್ತಿಕ್ಕುವುದಕ್ಕಾಗಿ ಮೋದಿ ಸರಕಾರ ಶತಪ್ರಯತ್ನ ಮಾಡಿ ವಿಫಲವಾಗಿತ್ತು. ಇನ್ನೊಂದು ಕಾರಣ ಏನು ಅಂದ್ರೆ,  ಮೋದಿ ನೇತೃತ್ವದ ಬಿಜೆಪಿ-ಆರೆಸ್‌ಎಸ್‌  ಸರಕಾರಕ್ಕೆ ಏಳು ವರ್ಷವಾಗಿರುವ ದಿನವೂ ಕೂಡ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅದರ ಬೆಂಬಲಕ್ಕೆ ನಿಂತಿರುವ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಮಾತ್ರವಲ್ಲ ಕೃಷಿ ಕೂಲಿಕಾರರ, ಮಹಿಳಾ, ಯುವಜನ ಮತ್ತು ವಿದ್ಯಾರ್ಥಿಗಳ ಸಂಘಟನೆಗಳೂ ಮೇ26ನ್ನು ಕಪ್ಪು ಬಾವುಟ ದಿನವಾಗಿ ಆಚರಿಸಬೇಕು ಎಂದು ಕರೆ ನೀಡಿದ್ದವು. ಆ ಕರೆಗೆ ದೇಶವ್ಯಾಪಿ ಬೆಂಬಲ ವ್ಯಕ್ತವಾಗಿತ್ತು.

ದೇಶದೆಲ್ಲೆಡೆಯಿಂದ ಬಂದಿರುವ ವರದಿಗಳ ಪ್ರಕಾರ, ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ, ಗುಜರಾತಿನಿಂದ ಗುವಾಹಾಟಿಯ ವರೆಗೆ ಹತ್ತಾರು ಸಾವಿರ ಸ್ಥಳಗಳಲ್ಲಿ ಲಕ್ಷಾಂತರ ಕುಟುಂಬಗಳು  ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ,   ಹಲವೆಡೆಗಳಲ್ಲಿ ಮೋದಿ ಪ್ರತಿಕೃತಿಗಳ ದಹನವೂ ನಡೆದಿದೆ.  ಹಲವೆಡೆಗಳಲ್ಲಿ ಇತರ ಸಣ್ಣ ಉತ್ಪಾದಕರು, ಸಾಂಸ್ಕೃತಿಕ ಕಾರ್ಯಕರ್ತರು,   ಬುದ್ದಿಜೀವಿಗಳು ಮತ್ತಿತರ ಜನವಿಭಾಗಗಳೂ ಇದರಲ್ಲಿ ಭಾಗವಹಿಸಿವೆ.  ಈ ಬೃಹತ್ ಸ್ವರೂಪದ ಜನಸ್ಪಂದನೆ ಮೋದಿ ನೇತೃತ್ವದ ಸರಕಾರದ ವಿರುದ್ಧ,  ವಿಶೇಷವಾಗಿ ಕೊವಿಡ್-19 ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಅದರ ಕ್ರಿಮಿನಲ್ ವಿಫಲತೆ ಮತ್ತು ದಿವಾಳಿಕೋರ ಲಸಿಕೆ ನೀತಿಯ ವಿರುದ್ಧ ಜನಗಳಲ್ಲಿ ತುಂಬಿರುವ ಆಕ್ರೋಶವನ್ನು, ಬಿಂಬಿಸಿದೆ ಎಂದು ಎಐಕೆಎಸ್ ಹೇಳಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ

ಮೂರು ಕೃಷಿ ಕಾಯ್ದೆಗಳನ್ನು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು, ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು, ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಬಿಡಿಗಾಸಿಗೆ ದೇಶಿ-ವಿದೇಶಿ ಕಾರ್ಪೊರೇಟ್‌ಗಳಿಗೆ ಮಾರುವುದನ್ನು ನಿಲ್ಲಿಸಬೇಕು ಎಂಬ ಆಗ್ರಹಗಳು ಮತ್ತೊಮ್ಮೆ ದೇಶಾದ್ಯಂತ ಕೇಳಬಂದವು. ದಿಲ್ಲಿಯ ಎಲ್ಲ ಗಡಿ ಪ್ರದೇಶಗಳಲ್ಲಿ, ಸಿಂಘು, ಟಿಕ್ರಿ, ಗಾಝೀಪುರ, ಶಾಹಜಹಾನ್‌ಪುರ ಮತ್ತು ಪಲ್ವಾಲ್‌ನಲ್ಲಿ ಟ್ರಾಲಿಗಳಲ್ಲಿ ಮತ್ತು ಟೆಂಟ್‌ಗಳಲ್ಲಿ ಕಪ್ಪು ಬಾವುಟಗಳು ಹಾರಾಡಿದವು, ಮೋದಿ ಪ್ರತಿಕೃತಿಗಳ ದಹನ ನಡೆಯಿತು. ದೇಶದ ಪ್ರತಿಯೊಂದು ಹಳ್ಳಿಹಳ್ಳಿಗಳ ರೈತನ ಮನೆಗಳ ಮೇಲೂ ಕಪ್ಪು ಬಾವುಟವನ್ನು ಹಾರಿಸಿರುವ ವರದಿಗಳು ಲಭ್ಯವಾಗಿವೆ.

ಅಖಿಲ ಭಾರತ ಕಿಸಾನ್ ಸಭಾ ಮತ್ತು ಕೃಷಿಕೂಲಿಕಾರರ ಸಂಘದ ಮುಖ್ಯ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಕೆಎಸ್‌ನ ಅಧ್ಯಕ್ಷ ಅಶೋಕ ಧವಳೆ, ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ, ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್,  ಹಣಕಾಸು ಕಾರ್ಯದರ್ಶಿ ಪಿ ಕೃಷ್ಣಪ್ರಸಾದ್, ಸಿಐಟಿಯು ಕಾರ್ಯದರ್ಶಿ ಎ.ಆರ್.ಸಿಂಧು, ಎಐಎಡಬ್ಲ್ಯುಯು ಜಂಟಿ ಕಾರ್ಯದರ್ಶಿ ವಿಕ್ರಮ್‌ಸಿಂಗ್,  ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಳೆ,  ಎಸ್‌ಎಫ್‌ಐ ಜಂಟಿ ಕಾರ್ಯದರ್ಶಿ ಧಿನೀತ್ ಧೆಂತ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ :   ನಿಮ್ಮ ಅಕ್ಕಪಕ್ಕದಲ್ಲಿನ ಕೋವಿಡ್ಪ್ರಕರಣಗಳನ್ನು ಸುಲಭವಾಗಿ ತಿಳಿಯಬಹುದು! ಹೇಗೆ ?

ದೇಶದಾದ್ಯಂತ ಕರೆ ನೀಡಿದ್ದ  ಕರಾಳ ದಿನಾಚರಣೆಗೆ ಕರ್ನಾಟಕದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಂಯುಕ್ತ ಹೋರಾಟ ಕರ್ನಾಟಕ ಹಾಗೂ  ಜೆಸಿಟಿಯು ನೇತೃತ್ವದಲ್ಲಿ  ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು  ಮನೆಗಳ ಮುಂಭಾಗ ಕಪ್ಪು ಉಡುಗೆಯನ್ನು ತೊಟ್ಟು,  ಕಪ್ಪು ಭಾವುಟವನ್ನು ಹಿಡಿದು, ಪ್ಲೇಕಾರ್ಡ್‌ ಪರ್ದರ್ಶಿಸುವ ಮೂಲಕ ಪ್ರತಿಭಟನೆಯನ್ನು ನಡೆಸಿದ್ದಾರೆ.  ಸಿಐಟಿಯು ನೇತೃತ್ವದಲ್ಲಿ ಕಚೇರಿಗಳ ಮುಂಭಾಗ, ತರಕಾರಿ ಹೂ ಹಣ್ಣು ಮಾರಾಟ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದ್ದು ವಿಶೇಷವಾಗಿತ್ತು.

ಉತ್ತರ ಕನ್ನಡ, ಹಾವೇರಿ, ದಕ್ಷಿಣ ಕನ್ನಡ, ಬಿಜಾಪೂರ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಕರಾಳ ದಿನಾಚರಣೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.  ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ಗ್ರಾಮದಲ್ಲಿ ಮಹಿಳೆಯರು ಖಾಲಿ ಚೀಲವನ್ನು ಹಿಡಿದು ಪ್ರತಿಭಟನೆ ನಡೆಸಿದರು. ಸರಕಾರ ನಮ್ಮ ಬದುಕಿನ ಜೊತೆ ಆಟವಾಡುತ್ತಿದೆ. ಎನ್‌ಆರ್‌ಇಜಿ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

ರೈತ ಚಳುವಳಿಗೆ 6 ತಿಂಗಳು ಪೂರೈಸಿದ ಮತ್ತು ಜನವಿರೋಧಿ ಮೋದಿ ಸರ್ಕಾರದ 7 ವರ್ಷಗಳ ದುರಾಡಳಿತ ವಿರುದ್ಧ ಹಾಸನದಲ್ಲಿ ಕಪ್ಪು ಬಾವುಟ ಹಿಡಿದು ಕರಾಳ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು, ಜನ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆಯಲು, ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ಹಿಂಪಡೆಯಲು , ಎಲ್ಲಾ ನಾಗರೀಕರಿಗೆ ಉಚಿತ ವ್ಯಾಕ್ಸಿನ್ ನೀಡುವಂತೆ ಒತ್ತಾಯಿಸಲಾಯಿತು. ಕರ್ನಾಟಕ ಪ್ರಾಂತರೈತ ಸಂಘದ ನೇತೃತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರ,  ಕೊಪ್ಪಳ, ಬಳ್ಳಾರಿ, ರಾಯಚೂರು, ಉಡುಪಿ, ಮೈಸೂರು, ಗದಗ್‌, ತುಮಕೂರು ಜಿಲ್ಲೆಯಲ್ಲಿ  ಜನರು ತಮ್ಮ ತಮ್ಮ ಮನೆಗಳ ಮುಂದೆ ಪ್ರತಿಭಟನೆ ನಡೆಸಿದರು. ಮಂಡ್ಯ , ಕಲಬುರ್ಗಿ ಜಿಲ್ಲೆಯಲ್ಲಿ ರೈತರು ಕೃಷಿ ಮಾಡುವ ಜಾಗಗಳಿಂದಲೆ ಕಪ್ಪು ಭಾವುಟವನ್ನು ಪ್ರದರ್ಶಿಸಿ ಕೇಂದ್ರ ರಾಜ್ಯ ಸರಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.

6 ತಿಂಗಳುಕಾಲ ನಿರಂತರವಾಗಿ ನಡೆದ ರೈತರ ಪ್ರತಿಭಟನೆಗೆ ದೊಡ್ಡ ಇತಿಹಾಸವಿದೆ. ಆರಂಭದೊಂದಲೂ ಮೋದಿ ಸರಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ರೈತರು ದೆಹಲಿಗೆ ಬಂದಾಗೆ ಅವರ ಮೇಲೆ ಜಲಫಿರಂಗಿ, ಪೋಲೀಸ್‌ ಬಲ ಬಳಿಸಿ ಲಾಠಿಚಾರ್ಜ್‌ ನಡೆಸಲಾಯಿತು.  ಕಾಯ್ದೆಯನ್ನು ರದ್ದು ಮಾಡುವಂತೆ ಸಂಸತ್ತ ನಲ್ಲಿ ಪ್ರತಿಭಟನೆ ನಡೆಸಿದ ಎಡಪಕ್ಷಗಳ ಮತ್ತು ಕಾಂಗ್ರೆಸ್‌ ನ ಸಂಸದರನ್ನು ಅಮಾನತ್ತು ಮಾಡಲಾಯಿತು. ಟ್ರ್ಯಾಕ್ಟರ್‌ ರ್ಯಾಲಿಯನ್ನು ದಿಕ್ಕು ತಪ್ಪಿಸಲು ದೀಪ್‌ ಸಿಧು ಎಂಬ ಬಿಜೆಪಿ ಬೆಂಬಲಿತ ವ್ಯಕ್ತಿಯನ್ನು ಮುಂದೆ ಬಿಟ್ಟು ದಿಕ್ಕು ತಪ್ಪಿಸಲು ಪ್ರಯತ್ನವನ್ನು ನಡೆಸಲಾಯುತು. ‌

ರೈತರ ಹೋರಾಟದತ್ತ ಜನ ಹೆಚ್ಚೆಚ್ಚು ಬರಲು ಆರಂಭಿಸಿದಾಗ ಅವರು ದೆಹಲಿ ತಲುಪಬಾರದು ಅಂತಾ ರಸ್ತೆಗಳಲ್ಲಿ ಗುಂಡಿಗಳನ್ನು ತೋಡಲಾಯಿತು. ರೈತರ ಶಿಬಿರಗಳ ಸುತ್ತ ಹಲವು ಸುತ್ತಿನ ಮುಳ್ಳುತಂತಿ ಬೇಲಿಗಳನ್ನು ನಿರ್ಮಿಸಲಾಯಿತು. ಒಂದು ಅಡಿಗೂ ಹೆಚ್ಚು ಉದ್ದದ ಮೊನಚಾದ ಸಾವಿರಾರು ಸರಳುಗಳನ್ನು ನೆಡಲಾಯಿತು.  ಇದೆಲ್ಲವನ್ನೂ ಮೀರಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಈಗ 6 ತಿಂಗಳು ಸಂದಿದೆ.

ಕೇಂದ್ರ ಸರಕಾರ ಮತ್ತು ರೈತರ ನಡುವೆ 12 ಬಾರಿ ಸಭೆಗಳು ನಡೆದಿವೆ. ಸಭೆಗಳು ವಿಫಲಗೊಂಡಿವೆ.  ದೆಹಲಿಯ ಗಡಿ ಪ್ರದೇಶದಲ್ಲಿ ನೆತ್ತಿಸುಡುವ ಬಿಸಿಲು ಹಾಗೂ ಮೈಕೊರಿವ ಚಳಿಯ ಮಧ್ಯೆ ಕುಳಿತುಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ ಮಳೆ, ಗಾಳಿ, ಬಿಸಿಲು ಮತ್ತು ಚಳಿಗೆ ರೈತರು ಯಾವುದೇ ರೀತಿ ಭಯ ಪಟ್ಟಿಲ್ಲ ನಮ್ಮ ಬೇಡಿಕೆ ಈಡೇರುವವರೆಗೂ ನಾವು ಇಲ್ಲಿಂದ ವಾಪಸ್ ಹೋಗುವ ಮಾತೇ ಇಲ್ಲ. ಒಂದು ವೇಳೆ ನಮ್ಮನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವ ಉದ್ದೇಶವೇನಾದರೂ ಇದ್ದರೆ ಕೇಂದ್ರ ಸರ್ಕಾರವು ಮೊದಲು ನಮ್ಮ ಬೇಡಿಕೆಗಳನ್ನು ಆಲಿಸಬೇಕು. ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ರೈತರು ಆಗ್ರಹವನ್ನು ಮಾಡಿದ್ದಾರೆ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೃಷಿಕಾಯ್ದೆಗಳನ್ನು ರದ್ದುಮಾಡಿ ಅನ್ನದಾತರನ್ನ ಉಳಿಸಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *