ಬಿ.ಎಲ್ ಸಂತೋಷ್ ಅವರಿಗೆ ನನ್ನ ಮೇಲೆ ಕಣ್ಣಿತ್ತು, ನನ್ನನ್ನು ಪದೇ ಪದೇ ಅವಮಾನಿಸಿದರು : ಜಗದೀಶ್ ಶೆಟ್ಟರ್ ನೇರ ಆರೋಪ

ಹುಬ್ಬಳ್ಳಿ : ನನಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೈ ತಪ್ಪಲು ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಿತು.

ಅವರ ಟೀಂ ಕೂಡ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತು ಎಂದು ಅವರು ಹೇಳಿದರು. ಇಂದು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಮೇಲೆ ಪಕ್ಷಕ್ಕೆ ಅಷ್ಟು ಗೌರವವಿದ್ದರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಬಹುದಿತ್ತು ಅಥವಾ ಕೇಂದ್ರಕ್ಕೆ ತೆಗೆದುಕೊಳ್ಳಬಹುದಾಗಿತ್ತು. ಆದರೆ, ಬಿ.ಎಲ್ ಸಂತೋಷ್ ಅವರಿಗೆ ನನ್ನ ಮೇಲೆ ಕಣ್ಣಿತ್ತು. ನನ್ನನ್ನು ಪದೇ ಪದೇ ಅವಮಾನಿಸಿದರು. ಅಪಪ್ರಚಾರ ನಡೆಸಿದರು. ಕಡೆಗೆ ಟಿಕೆಟ್ ಕೊಡದೇ ಸತಾಯಿಸಿದರು ಎಂದು ಆರೋಪಿಸಿದ್ದಾರೆ.

ಈಗ ರಾಜ್ಯಪಾಲರನ್ನಾಗಿಸುತ್ತಿದ್ದೆವು, ರಾಜ್ಯಸಭೆಗೆ ಆರಿಸುತ್ತಿದ್ದೆವು ಎಂದೆಲ್ಲಾ ಹೇಳುತ್ತಾರೆ. ಅವೆಲ್ಲಾ ನಾವು ಪಕ್ಷ ಬಿಟ್ಟ ಮೇಲೆ ಬರ್ತಾ ಇರೋ ಮಾತುಗಳು. ಇದೇ ಮಾತುಗಳನ್ನು ನನ್ನನ್ನು ಸೌಜನ್ಯದಿಂದ ಕರೆಯಿಸಿ ಏಕೆ ಮಾತನಾಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನು, ನನಗೆ ಮುಖ್ಯಮಂತ್ರಿ ಅಧಿಕಾರ ಕೊಟ್ಟಿದ್ದಕ್ಕೆ ನಾನು ಬಿಜೆಪಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, 10 ತಿಂಗಳ ಕಾಲವಷ್ಟೇ ಅಧಿಕಾರ ಕೊಟ್ಟಿದ್ದು. ನನಗಿಂತಲೂ ಕಿರಿಯರಾದ ಬೊಮ್ಮಾಯಿಯವರಿಗೆ ಈಗಾಗಲೇ ಸುಮಾರು 2 ವರ್ಷಗಳಿಂದ ಸಿಎಂ ಪದವಿ ಕೊಟ್ಟಿದ್ದೀರಲ್ಲವೇ? ನನಗೆ ಅದಕ್ಕಿಂತಲೂ ಕಡಿಮೆ ಅವಧಿಗೆ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಜನಮತ2023 :ಬಿಜೆಪಿ ತೊರೆದು ಕೈ ಪಕ್ಷಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರ್ಪಡೆ

ಸಂತೋಷ್ ಅವರ ಮಾನಸಪುತ್ರರನ್ನು ರಕ್ಷಿಸಲೆಂದೇ ಈ ತಂತ್ರ : ರಾಜ್ಯದಲ್ಲಿ ಸಂತೋಷ್ ಅವರ ಮಾನಸಪುತ್ರರು ಕೆಲವರಿದ್ದಾರೆ. ಅವರಿಗೆ ಒಳ್ಳೆಯದು ಮಾಡುವ ಉದ್ದೇಶದಿಂದಾಗಿ ನನ್ನನ್ನು ದೂರ ತಳ್ಳಬೇಕಿತ್ತು. ಅವರಿಗೆ, ನನ್ನನ್ನು ದೂರ ತಳ್ಳಲು ಯಾವುದೇ ಕಾರಣಗಳು ಇರಲಿಲ್ಲ. ನಾನು ಪಕ್ಷಕ್ಕೆ ನಿಷ್ಠಾವಂತ, ಶುದ್ಧಹಸ್ತನೆಂಬುದು ಅವರಿಗೆ ಗೊತ್ತಿತ್ತು. ಹಾಗಾಗಿ, ನನ್ನ ವಿರುದ್ಧ ಕಿತಾಪತಿಗಳನ್ನು ಶುರು ಮಾಡಿದರು. ಕಳೆದ ಆರೇಳು ತಿಂಗಳುಗಳಿಂದ ನನ್ನನ್ನು ಮಾನಸಿಕವಾಗಿ ಹಿಂಸಿಸಲು ಯತ್ನಿಸಿದರು. ಸಭೆ, ಸಮಾರಂಭಗಳಲ್ಲಿ ನನ್ನನ್ನು ಅವಮಾನಿಸಿದರು. ಈ ಬಾರಿ ಶೆಟ್ಟರ್ ಅವರಿಗೆ ಟಿಕೆಟ್ ಇಲ್ಲ ಎಂದು ಕ್ಷೇತ್ರದಲ್ಲಿ ಅಪಪ್ರಚಾರ ಮಾಡಿದರು. ಇಂಥ ನಡೆಗಳಿಂದ ನಾನೇ ಬೇಸರಗೊಂಡು ಚುನಾವಣೆಯಿಂದ ದೂರ ಸರಿಯುತ್ತೇನೆಯೇ ಎಂದು ನೋಡಿದರು. ಆದರೆ, ನಾನು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಹಾಗಾಗಿ, ನನ್ನ ವಿರುದ್ಧ ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಲಾಯಿತು ಎಂದು ಹೇಳಿದರು.

ಜೋಷಿಯವರೇ ನೀವ್ಯಾಕೆ ಸೈಲೆಂಟ್ ಆದ್ರಿ? : ನಂತರ, ತಮ್ಮ ಮಾತುಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಕಡೆಗೂ ತಿರುಗಿಸಿದ ಅವರು, ಜೋಷಿಯವರೇ, ನೀವು ಸಂಸದರಾಗುವಾಗ ನಾನು ನಿಮ್ಮ ಗೆಲುವಿಗಾಗಿ ಎಷ್ಟು ಪ್ರಯತ್ನಿಸಿದ್ದೇನೆ, ಎಷ್ಟು ಪ್ರಚಾರ ನಡೆಸಿದ್ದೇನೆ ಎಂಬುದು ನಿಮಗೆ ಗೊತ್ತಿದೆ. ಆದರೆ, ಪಕ್ಷದಲ್ಲಿ ನನಗೆ ಅನ್ಯಾಯವಾಗುತ್ತಿದ್ದರೂ ನೀವು ಸೈಲೆಂಟ್ ಆಗಿದ್ದು ಯಾಕೆ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.

ಹೈಕಮಾಂಡ್ ನಲ್ಲಿ ಆದ ಮಾತುಕತೆ ವೇಳೆ, ಜೋಷಿಯವರು ಸ್ವಲ್ಪ ಹಠ ಹಿಡಿದಿದ್ದರೂ ಸಾಕಿತ್ತು. ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ಕೊಟ್ಟೇ ಕೊಡಬೇಕು ಎಂದು ಹಠ ಹಿಡಿದಿದ್ದರೂ ಸಾಕಿತ್ತು. ನನಗೆ ಟಿಕೆಟ್ ಸಿಗುತ್ತಿತ್ತು. ಆದರೆ, ಜೋಷಿಯವರು ಅಂಥ ಗಟ್ಟಿತನ ತೋರಲಿಲ್ಲ ಎಂದು ಅವರು ಬೇಸರ ಮಾಡಿಕೊಂಡರು

ನಾನು ಈಶ್ವರಪ್ಪನವರಂತೆ ಮಾಡ್ತೇನೆ ಎಂದುಕೊಂಡಿದ್ದರು : “ನಾಮಪತ್ರ ಸಲ್ಲಿಕೆ ಆರಂಭಕ್ಕೆ ಒಂದೆರಡು ದಿನ ಇರುವಾಗ, ನನಗೆ ದೆಹಲಿಯಿಂದ ಒಬ್ಬರು ಫೋನ್ ಮಾಡುತ್ತಾರೆ. ಶೆಟ್ಟರ್ ಅವರೇ ನಿಮಗೆ ಈ ಬಾರಿ ಟಿಕೆಟ್ ಇಲ್ಲ. ನನಗೆ ಟಿಕೆಟ್ ಬೇಡ ಎಂಬರ್ಥದಲ್ಲಿ ನಿಮಗೊಂದು ಪತ್ರ ಕಳಿಸಲಾಗುತ್ತದೆ, ಅದಕ್ಕೆ ಸಹಿ ಹಾಕಿ ಕಳುಹಿಸಿ ಎಂದು ಮೂರೇ ಮಾತುಗಳನ್ನಾಡಿ ಫೋನ್ ಇಟ್ಟರು. ಒಬ್ಬ ಮಾಜಿ ಮುಖ್ಯಮಂತ್ರಿಯಾದ ನನಗೆ ಇಷ್ಟು ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಅದು ನನಗೆ ಭಾರೀ ಬೇಸರ ತರಿಸಿತು” ಎಂದರು. ಸಂಘ ಪರಿವಾರದಿಂದ ಬಂದವನು, ಪಕ್ಷ ಬಿಟ್ಟು ಹೋಗಲಾರ. ನಾವು ಏನು ಮಾಡಿದರೂ ನಡೆಯುತ್ತೆ ಎಂದು ಅಂದುಕೊಂಡಿದ್ದವರ ನಡೆಗೆ ಬೇಸತ್ತು ನಾನು ಪಕ್ಷದಿಂದ ಆಚೆ ಬಂದಿದ್ದೇನೆ ಎಂದು ಹೇಳಿದ ಅವರು ಗದ್ಗದಿತರಾದರು.

ಕಣ್ಣೀರು ಹಾಕಿದ ಶೆಟ್ಟರ್ : ಪಕ್ಷ ನಿಷ್ಠೆಗೆ, ಪ್ರಾಮಾಣಿಕತೆಗೆ ಬಿಜೆಪಿಯಲ್ಲಿ ಬೆಲೆ ಇಲ್ಲದಂತಾಗಿದೆ. ಉದಾಹರಣೆಗೆ, ಕೃಷ್ಣರಾಜದಲ್ಲಿ ಎಸ್.ಎ. ರಾಮದಾಸ್ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಅವರಿಗೆ ಟಿಕೆಟ್ ಕೊಟ್ಟಿದ್ದರೆ ಅವರು ಗೆಲ್ಲುತ್ತಿದ್ದರು. ಅಲ್ಲಿ, ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದುಕೊಂಡೇ ರಾಮದಾಸ್ ಅವರ ವಿರುದ್ಧ ಕೆಲಸ ಮಾಡಿದ್ದ ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಹಾಳುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದ ಅವರು, ಇಂಥವರನ್ನು ಬೆಳೆಸುವುದಕ್ಕಾಗಿ ನನ್ನಂಥ ಹಿರಿಯನ್ನು ದೂರವಿಡುತ್ತಿದ್ದಾರೆ ಎಂದು ಹೇಳಿದರು. ಅಷ್ಟರಲ್ಲಿ ಅವರ ಗಂಟಲು ತುಂಬಿ ಬಂದು ಕಣ್ಣೀರು ಹಾಕಿದರು.

Donate Janashakthi Media

Leave a Reply

Your email address will not be published. Required fields are marked *