ರಾಕೇಶ್‌ ಟಿಕಾಯತ್‌ ಮೇಲೆ ದುಷ್ಕರ್ಮಿಗಳ ಹಲ್ಲೆ

ಜೈಪುರ್ : ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತೀಯ ಕಿಸಾನ್ ಸಂಘಟನೆಯ ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಟಿಕಾಯತ್ ಅವರು ಶುಕ್ರವಾರ ಹರಸೋರಾ ಪ್ರದೇಶದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಬನ್ಸೂರ್ ನಲ್ಲಿ ನಡೆಯಲಿದ್ದ ಮಹಾಪಂಚಾಯತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಹಚರರ ಜತೆ ಕಾರಿನಲ್ಲಿ ತೆರಳುತ್ತಿದ್ದರು.ಈ ವೇಲೆ ಅಲ್ವಾರ್ ಜಿಲ್ಲೆಯ ತಾಟರ್ಪುರ್ ಎಂಬಲ್ಲಿ ಗುಂಪೊಂದು ಏಕಾಏಕಿ ಟಿಕಾಯತ್ ಅವರ ಕಾರಿನ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಟಿಕಾಯತ್ ಅವರ ಮೇಲೆ ಮಸಿ ಎರಚಲಾಗಿದೆ. ಕಾರಿನ ಗ್ಲಾಸ್ ಒಡೆದು ಹಾಕಲಾಗಿದೆ ಎಂದು ವರದಿಯಾಗಿದೆ. ದಾಳಿ ನಡೆಸಿರುವ ಗುಂಪಿನ ಪ್ರಮುಖರು ಬಿಜೆಪಿಯವರಾಗಿದ್ದಾರೆಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಹಾನಿಗೀಡಾದ ತಮ್ಮ ಕಾರಿನ ವಿಡಿಯೋ ಟ್ವಟರ್ ನಲ್ಲಿ ಹಂಚಿಕೊಂಡಿರುವ ಟಿಕಾಯತ್, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಬಿಜೆಪಿಯ ಗೂಂಡಾಗಳಿಂದ ಈ ದಾಳಿ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಕಳೆದ ವರ್ಷ(2020) ನವೆಂಬರ್ ತಿಂಗಳಿಂದ ದೆಹಲಿಯ ಗಡಿಯಲ್ಲಿ ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರಾಕೇಶ್ ಟಿಕಾಯತ್ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ಮಹಾಪಂಚಾಯತ್ ಹೆಸರಿನಲ್ಲಿ ಬೃಹತ್ ಪ್ರತಿಭಟನೆಗಳನ್ನು ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಪಂಜಾಬ್ ಹಾಗೂ ಉತ್ತರ ಪ್ರದೇಶಗಳಲ್ಲಿ ಮಹಾಪಂಚಾಯತ್ ಸಮಾವೇಶಗಳು ನಡೆದಿವೆ.

Donate Janashakthi Media

Leave a Reply

Your email address will not be published. Required fields are marked *