ಈ ವರ್ಷದ ಗಣತಂತ್ರ ದಿನದ ಪರೇಡಿನಲ್ಲಿ ಪ್ರದರ್ಶನಗೊಳ್ಳಬೇಕಾಗಿರುವ ಕೇರಳದ ಸ್ತಬ್ಧಚಿತ್ರದ ವಿಷಯ ಮಹಿಳಾ ಸುರಕ್ಷತೆಯಾಗಿದ್ದು, ಇದರಲ್ಲಿ ಕೇರಳದ ಕೊಳ್ಳಂ ಜಿಲ್ಲೆಯಲ್ಲಿರುವ ಬೃಹದಾಕಾರದ ಜಟಾಯು ಶಿಲ್ಪವನ್ನು ಹೊಂದಿರುವ ವಿಶ್ವವಿಖ್ಯಾತ ಜಟಾಯುಪಾರ ಶಿಲೋದ್ಯಾನ ಮತ್ತು ರಾಜ್ಯದ ಇನ್ನೊಂದು ವೈಶಿಷ್ಟ್ಯತೆಯಾದ ಹಾವಿನಾಕಾರದ ಮುಂಭಾಗ ಹೊಂದಿರುವ ದೋಣಿಯ ಪ್ರತಿಕೃತಿಯನ್ನು ಸಲ್ಲಿಸಲಾಗಿತ್ತು.
ಇದರ ಎದುರು ಆದಿ ಶಂಕರಾಚಾರ್ಯರ ಪ್ರತಿಮೆ ಇರಬೇಕು ಎಂದು ಕೇಂದ್ರದಿಂದ ಸೂಚನೆ ಬಂದಿತ್ತು. ಅದಕ್ಕೆ ಬದಲಾಗಿ ಕೇರಳದ ಪುನರುಜ್ಜೀವನದ ನೇತಾರ ಶ್ರೀನಾರಾಯಣ ಗುರು ಅವರ ಪ್ರತಿಮೆಯನ್ನು ಇಡಬಹುದು ಎಂದು ಸೂಚಿಸಲಾಯಿತು. ಅಧಿಕಾರಿಗಳು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು, ಅಂತಿಮ ಪಟ್ಟಿಗೆ ಕೇರಳವನ್ನು ಸೇರಿಸಲಾಗಿತ್ತು.
ಆದರೆ, ರಾಜಕೀಯ ಹಸ್ತಕ್ಷೇಪದಿಂದಾಗಿ ಗಣರಾಜ್ಯೋತ್ಸವ ಪರೇಡ್‌ನಿಂದ ಶ್ರೀನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತೆಗೆದುಹಾಕಲಾಗಿದೆ. ಊಳಿಗಮಾನ್ಯ ಮತ್ತು ಅಸ್ಪೃಶ್ಯತೆಯ ಪರಂಪರೆಯನ್ನು ಅನುಸರಿಸುತ್ತಿರುವುದರಿಂದ ಕೇಂದ್ರವು ನಾರಾಯಣ ಗುರು ಅವರ ಪ್ರತಿಮೆ ಇರುವ ಈ ಸ್ಬಬ್ಧಚಿತ್ರವನ್ನು ತಿರಸ್ಕರಿಸಿದೆ. ಬಹುಶಃ ಬಿಜೆಪಿಗೆ ಶ್ರೀನಾರಾಯಣ ಗುರು ಸ್ವೀಕಾರಾರ್ಹರಲ್ಲ.
ಪುನರುಜ್ಜೀವನ ಕಾಲಘಟ್ಟದ ಈ ಮಹಾನ್ ವ್ಯಕ್ತಿಗೆ ಈ ರೀತಿ ಅವಮಾನ ಮಾಡುವುದನ್ನು ಪ್ರಗತಿಪರ ಸಮಾಜ ಒಪ್ಪಲಾರದು. ಅವರನ್ನು ಅಸ್ಪೃಶ್ಯ ಎಂದು ಪರಿಗಣಿಸಿದಂತಿರುವ ಈ ಸಂಕುಚಿತ ರಾಜಕೀಯ ನಿರ್ಧಾರವನ್ನು ಕೇಂದ್ರವು ಸರಿಪಡಿಸಬೇಕು. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳದ ಶ್ರೀನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಸೇರಿಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕೇರಳ ರಾಜ್ಯ ಸಮಿತಿಯು ಆಗ್ರಹಿಸಿದೆ.
ಜಾತಿ-ವಿರೋಧಿ ಹೋರಾಟದ ಮಹಾನಾಯಕ ಶ್ರೀನಾರಾಯಣ ಗುರು ರವರ ಪ್ರತಿಮೆ ಇರುವ ಕೇರಳದ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಿಸಿರುವುದು ಅತ್ಯಂತ ಖಂಡನಾರ್ಹ ವಿಷಯ ಎಂದಿರುವ ಕೇರಳದ ಶಿಕ್ಷಣ ಮಂತ್ರಿ ಶಿವನಕುಟ್ಟಿ, ರಾಜ್ಯ ಬಿಜೆಪಿ ಕೇರಳದ ಈ ಗುರುಗಳಿಗೆ ಈ ರೀತಿ ಅವಮಾನ ಮಾಡುವುದನ್ನು ಒಪ್ಪುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಆರೆಸ್ಸೆಸ್, ಬಿಜೆಪಿ ಮತ್ತು ಮೋದಿ ಸರಕಾರ ಮನುವಾದಿ ಜಾತಿ-ಆಧಾರಿತ ಸಾಮಾಜಿಕ ದಮನದ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸಮಾನತೆಯ ಖಾತ್ರಿ ನೀಡುವ ಸಂವಿಧಾನವನ್ನು ರಕ್ಷಿಸಲು ಇವರನ್ನು ಸೋಲಿಸಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.