ಬಿಜೆಪಿಯ ಕಟೀಲ್‌, ರವಿಕುಮಾರ್ ಹೇಳಿಕೆಯ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಇತ್ತೀಚೆಗೆ ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು, ಅನಾಚಾರಿಗಳು ಹೆಚ್ಚುತ್ತಿದ್ದಾರೆ ಅದನ್ನು ತಡೆಯುವ ಬದಲು, ಅನವಶ್ಯಕವಾಗಿ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಿ ಟೀಕೆಗಳನ್ನು ಮಾಡುತ್ತಿರುವ ಬಿಜೆಪಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.

ನಗರದ ಆನಂದರಾವ್‌ ವೃತ್ತ ಬಳಿ ಇರುವ ಕಾಂಗ್ರೆಸ್ ಕಛೇರಿ‌ ಮುಂಭಾಗ ಪ್ರತಿಭಟಿಸಿದ ಕಾರ್ಯಕರ್ತರು ಬಿಜೆಪಿ ಪಕ್ಷದ ಭ್ರಷ್ಟಾಚಾರ, ಸರಕಾರದ ದುರಾಡಳಿತವನ್ನು ಮರೆಮಾಚಲು ಟೀಕೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದರು.

ಇದನ್ನು ಓದಿ: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲ: ಇನ್ನೂ ಒಂದೂವರೆ ವರ್ಷ ಚುನಾವಣೆ ಇಲ್ಲ

ಗೂಂಡಾಗಳು ಯಾರು ಎಂಬುದು ನಳಿನ್ ಕುಮಾರ್ ಕಟೀಲ್ ಗೆ ಮಾಹಿತಿಯಿಲ್ಲ ಎನ್ನಿಸುತ್ತದೆ. ಭ್ರಷ್ಟಾಚಾರಿಗಳ ಬಗ್ಗೆ ಮಾಹಿತಿ ಬೇಕಾದರೆ ಬಿಜೆಪಿಯ ನಾಯಕರಾದ ಎಚ್.ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪನವರನ್ನು ಕೇಳಿ ನಿಮ್ಮ ಭ್ರಷ್ಟರ ಬಗ್ಗೆ ಪಟ್ಟಿಯನ್ನು ನೀಡುತ್ತಾರೆ. ಅವರ ಮೇಲೆ ಕ್ರಮಕೈಗೊಳ್ಳುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಬಿಜೆಪಿ ವಕ್ತಾರ ರವಿಕುಮಾರ್ ನಿರುದ್ಯೋಗಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಅವರ ಪಕ್ಷದ ಭ್ರಷ್ಟಾಚಾರವನ್ನು ಹಾಗೂ ಅನಾಚಾರವನ್ನು ಮರೆಮಾಚಲು ಒಂದಂಶದ ಕಾರ್ಯಕ್ರಮವನ್ನು ರೂಪಿಸಿಲ್ಲ. ಬದಲಾಗಿ ಆಧಾರ ರಹಿತವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಮೊದಲು ತಮ್ಮ ಪಕ್ಷದಲ್ಲಿರುವ ಭ್ರಷ್ಟರು ಹಾಗೂ ಅನಾಚಾರಗಳ ವಿರುದ್ಧ ಗಮನ ಹರಿಸಿ ಅದನ್ನು ತಡೆಯುವ ಕೆಲಸ ಮಾಡಿ ಎಂದರು.

ಬಿಜೆಪಿಯವರಿಗೆ ಬಸವಣ್ಣನವರ ಹೆಸರನ್ನು ಹೇಳುವ ಯೋಗ್ಯತೆ ಅರ್ಹತೆ ಹೊಂದಿಲ್ಲ. ಮೊದಲು ಬಸವಣ್ಣನವರ ಹೆಸರನ್ನು ಹೇಳಿದ್ದಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಕೋರಬೇಕು. ಏಕೆಂದರೆ ಬಸವಣ್ಣ ಜನಿಸಿದ ನಾಡಿನಲ್ಲಿ ಜೈಲಿಗೆ ಹೋಗಿ ಬಂದವರು ಜೈಲಿಗೆ ಹೋಗುವವರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಅವರೇ ಈಗ ರಾಜ್ಯದಲ್ಲಿ ಚುಕ್ಕಾಣಿ ಹಿಡಿದು ಅಧಿಕಾರ ನಡೆಸುತ್ತಿದ್ದಾರೆ ಇಂಥವರಿಂದ ಕರ್ನಾಟಕಕ್ಕೆ ಅಪಕೀರ್ತಿ ಬಂದಿದೆ. ಅವರು ರಾಜೀನಾಮೆ ಕೊಟ್ಟು ರಾಜ್ಯದಿಂದ ತೊಲಗಲಿ ಎಂದು ಕಾಂಗ್ರೆಸ್‌ ಪಕ್ಷವು ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರಾದ ಎಸ್. ಮನೋಹರ್,  ಜಿ.ಜನಾರ್ದನ್,  ಎ. ಆನಂದ್,  ಈ. ಶೇಖರ್, ಪ್ರಕಾಶ್,ಚಂದ್ರಶೇಖರ್, ಪುಟ್ಟರಾಜು, ಶಶಿಭೂಷಣ್ ಕಾಂಗ್ರೆಸ್‌ನ ಮತ್ತಿತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *