ಮಡಿಕೇರಿ: ಕೇಂದ್ರ ಸಚಿವ ಸಂಪುಟ ಪುನರ್ ರಚನೆಯ ಮಾಡುವ ತಯಾರಿಗಳು ನಡೆಯುತ್ತಿರುವ ಬೆನ್ನಲ್ಲೇ ಕರ್ನಾಟಕದ ಬಿಜೆಪಿ ಸಂಸದರೂ ಸಹ ಸಚಿವರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದರೊಂದಿಗೆ ರಾಜ್ಯದ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಹರಿದಾಡುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರಕಾರದ ಸಂಪುಟ ಪುನರ್‌ರಚನೆಯಲ್ಲಿ 27 ಸಂಸದರ ಪಟ್ಟಿಯು ಸಿದ್ದಗೊಂಡಿದ್ದು, ಇದರಲ್ಲಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಇದೆ ಎನ್ನಲಾಗಿದೆ.
ಇದನ್ನು ಓದಿ: ಟ್ಯಾಪಿಂಗ್ ಪ್ರಕರಣ : ತಪ್ಪು ನಂಬರ್‌ನಿಂದ ನಾಯಕತ್ವ ಬದಲಾವಣೆಯ ಗುಟ್ಟು ರಟ್ಟಾಯ್ತು!?
ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ ಅವರು ʻʻನನಗಿಂತ ನಾಲ್ಕೈದು ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದರಿಗೆ ಸಚಿವ ಸ್ಥಾನ ಸಿಗಲಿ. ತುಂಬಾ ಹಿರಿಯ ಸಂಸದರಿದ್ದಾರೆ, ಅವರು ಸಚಿವರಾಗಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ʻʻನಾನು ಸಂಸದನಾಗಿ ಆಯ್ಕೆ ಆಗಿರುವುದೇ ಮೈಸೂರು-ಕೊಡಗು ಜನರ ಸೇವೆ ಮಾಡೋದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿಲ್ಲ. ಈ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡೋದಕ್ಕೂ ಯಾವುದೇ ಸಮಸ್ಯೆ ಆಗಿಲ್ಲ. ಮಡಿಕೇರಿಗೆ ಚತುಷ್ಪಥ ರಸ್ತೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳು ತರಲು ಪ್ರಧಾನಿ ಮೋದಿ ಅವರು ಉತ್ತಮ ಸಹಕಾರ ನೀಡಿದ್ದಾರೆ. ಹೀಗಾಗಿ ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಸಚಿವಸ್ಥಾನ ಸಿಗಲಿ ಎಂದು ನಾನು ಒಳ್ಳೆಯ ಮನಸ್ಸಿನಿಂದ ಪ್ರಾರ್ಥಿಸುವೆ ಎಂದು ತಿಳಿಸಿದರು.