‘ಘರ್ ವಾಪ್ಸಿ’ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ

ಬೆಂಗಳೂರು : ಮುಸ್ಲಿಮರನ್ನ, ಕ್ರೈಸ್ತರನ್ನ ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಹಿಂಪಡೆಯುವುದಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  ಹಿಂದೂ ಪುನರುಜ್ಜೀವನ ಮತ್ತು ಭಾರತದ ಇತಿಹಾಸದಲ್ಲಿ ಮತಾಂತರಗೊಂಡವರೆಲ್ಲರನ್ನು ಮರಳಿ ಹಿಂದೂ ಮಡಿಲಿಗೆ ಕರೆತರುವ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದೂ ಪುನರುಜ್ಜೀವನ’ ವಿಷಯದ ಕುರಿತು ಮಾತನಾಡಿದ್ದೆ. ನನ್ನ ಭಾಷಣದ ಕೆಲವು ಹೇಳಿಕೆಗಳು ವಿಷಾದನೀಯವಾಗಿ ವಿವಾದವನ್ನು ಸೃಷ್ಟಿಸಿವೆ. ಆದ್ದರಿಂದ ನಾನು ಹೇಳಿಕೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ಟಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಮುಸ್ಲಿಮರು ಮರು ಮತಾಂತರ ಆದರೆ ಹಿಂದು ಧರ್ಮದ ಯಾವ ಜಾತಿಗೆ ಸೇರಿಸಿಕೊಳ್ಳುತ್ತೀರಿ? ಸಂಸದ ತೇಜಸ್ವಿಗೆ ಬಹಿರಂಗ ಪ್ರಶ್ನೆ

ವಿವಾದವೇನು? :  ಭಾರತದ ಇತಿಹಾಸದಲ್ಲಿ ವಿವಿಧ ಸಾಮಾಜಿಕ-ರಾಜಕೀಯ, ಆರ್ಥಿಕ ಕಾರಣಗಳಿಗಾಗಿ ತಮ್ಮ ಮಾತೃ ಧರ್ಮವನ್ನು ತೊರೆದ ಜನರು, ಹಿಂದೂ ಮಡಿಕೆಯಿಂದ ಹೊರಬಂದವರನ್ನು ಸಂಪೂರ್ಣವಾಗಿ ಮರಳಿ ಹಿಂದೂ ನಂಬಿಕೆಗೆ ಕರೆತರಬೇಕು ಎಂದಿದ್ದರು.

2015 ರ ಬಳಿಕ ಹಿಂದೂ ಧರ್ಮ ಮತ್ತೆ ಪುನರುತ್ಥಾನ ಹೊಂದಿದೆ,  2014 ರ ಹಿಂದೆ ಯಾವುದರ ಬಗ್ಗೆಯೂ ಮಾತನಾಡಲು ಹೆದರುವಂತಿತ್ತು. ಹಿಂದೂ ಧರ್ಮದ ಶ್ರೇಷ್ಠತೆ, ಧರ್ಮದ ಮೇಲೆನಡೆಯುವ ದೌರ್ಜನ್ಯ ದ ಬಗ್ಗೆ ಮಾತನಾಡಿದರೆ ಪೊಲೀಸರು ಬಂದು ನೇರವಾಗಿ ಬಂಧನ ಮಾಡುತ್ತಿದ್ದರು. ಬೇರೆಯವರ ಬಗ್ಗೆ ಮಾತನಾಡೋದೇ ಅಪರಾಧ ಅಂತಾ ಜ್ಯಾತ್ಯತೀತರು ಭಯವನ್ನು ಹುಟ್ಟಿಸಿದ್ದರು. ಆದರೆ ಈಗ ಕಾಲ ಮುಂಚಿನ ತರ ಇಲ್ಲ. ಎಲ್ಲಾ ವಿಷಯಗಳ ಬಗ್ಗೆ ಬಹಿರಂಗವಾಗಿ ಹೇಳಬಹುದು. ಧೈರ್ಯದಿಂದ ಎಲ್ಲಾ ವಿಚಾರದ ಬಗ್ಗೆ ಮಾತನಾಡಬಹುದು ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಕರೆತರಬೇಕು. ಪಾಕ್‌ ಹೋದವರನ್ನೂ ಹಿಂದೂ ಧರ್ಮಕ್ಕೆ ಕರೆತರಬೇಕು. ಚೀನಾ, ಜಪಾನ್‌ಗೆ ಮತಾಂತರಗೊಂಡವರನ್ನ ಕರೆತರಬೇಕು. ಟಿಪ್ಪು ಜಯಂತಿಯಂದೇ ನಾವು ಮರುಮತಾಂತರ ಮಾಡಬೇಕು. ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳ ಮತಾಂತರಗಳಾಗಿವೆ. ಅಸಾಧ್ಯ ಎಂಬುವುದು ಯಾವುದೂ ಇಲ್ಲ. ನಮ್ಮ ಮನೆ ಪಕ್ಕ, ಗ್ರಾಮಗಳಲ್ಲಿ ಘರ್ ವಾಪಸಿ ಮಾಡಬೇಕು ಎಂದು ಕರೆ ನೀಡಿದ್ದರು.

ತೇಜಸ್ವಿಯವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ವಿರೋಧಿಸಿದ್ದರು. ನಾವು ಮರು ಮತಾಂತರಗೊಂಡರೆ ಯಾವ ಜಾತಿಗೆ ನಮ್ಮನ್ನು ಸೇರಿಸುತ್ತೀರಿ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಬಹಿರಂಗ ಸವಾಲು ಹಾಕಿದ್ದರು. ವಿವಾದ ಆಗುತ್ತಿದ್ದಂತೆ ತೇಜಸ್ವಿ ಸೂರ್ಯ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಸಾರ್ವಜನಿಕವಾಗಿ ಬೆತ್ತಲಾದ ಸಂಸದ : ತೇಜಸ್ವಿ ಸೂರ್ಯ ಉಡುಪಿ ಮಠದ ರಾಜಾಂಗಣದಲ್ಲಿ ನಿಂತು ನೀಡಿದ ಮುಸ್ಲಿಮರು, ಕ್ರೈಸ್ತರನ್ನು ‘ಮರು” ಮತಾಂತರ ಮಾಡುವ ಕರೆಯನ್ನು ಭೇಷರತ್ ಹಿಂಪಡೆದಿದ್ದಾರೆ, ಕ್ಷಮೆ ಕೇಳಿದ್ದಾರೆ. ಆ ಮೂಲಕ ಮತ್ತೊಮ್ಮೆ ಸಾರ್ವಜನಿಕವಾಗಿ ಬೆತ್ತಲಾಗಿದ್ದಾರೆ ಎಂದು ಮುನೀರ್ ಕಾಟಿಪಳ್ಳ ವ್ಯಂಗ್ಯವಾಡಿದ್ದಾರೆ.
ತನ್ನ ಹೇಳಿಕೆಗೆ ಕನಿಷ್ಟ ಇಪ್ಪತ್ತನಾಲ್ಕು ತಾಸು ಬದ್ದರಾಗುವ ದೃಢತೆಯಿಲ್ಲದ ಸೂರ್ಯ ವೀರಾಧಿವೀರನಂತೆ ಭಾಷಣ ಬಿಗಿಯುವುದು ದೊಡ್ಟ ತಮಾಷೆ. ತಮ್ಮ ಬಂಡಲ್ ಭಾಷಣಗಳ ಮೂಲಕ ಹಿಂದುಳಿದ ಸಮಾಜದ ಬಡವರ ಮನೆಯ ಮಕ್ಕಳನ್ನು ಉದ್ರೇಕಿಸಿ ಬಲಿಕೊಡುವುದಷ್ಟೆ ಇವರ ಯೋಗ್ಯತೆ. ಮಿಸ್ಟರ್ ತೇಜಸ್ವಿ ಸೂರ್ಯ… ನಿಮ್ಮ ಹೇಳಿಕೆ ಹಿಂಪಡೆದಿರೊ, ಕ್ಷಮೆ ಕೇಳಿದಿರೋ, ಅದೆಲ್ಲಾ ಇರಲಿ, ನಾ‌ನು ನಿಮ್ಮ ಮರು ಮತಾಂತರ ಕರೆ ಸಂಬಂಧಿಸಿ ಬಹಿರಂಗ ಚರ್ಚೆಗೆ ಬರುವ ಸವಾಲು ಒಡ್ಡಿದ್ದೆ. ಅದನ್ನಾದರು ಸ್ವೀಕರಿಸುತ್ತೀರೋ, ಅಥವಾ ಇಲ್ಲಿಯೂ ಪಲಾಯನವೊ ಹೇಳಿ ಎಂದು ಸಂಸದ ತೇಜಸ್ವಿ ಸೂರ್ಯರಿಗೆ ಟಾಂಗ್‌ ನೀಡಿದ್ದಾರೆ.
Donate Janashakthi Media

Leave a Reply

Your email address will not be published. Required fields are marked *