ಕೇಜ್ರಿವಾಲ್​ ನಿವಾಸ ಧ್ವಂಸ ಪ್ರಕರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್​

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸಕ್ಕೆ ಧಾಳಿ ಮಾಡಿ, ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಏಪ್ರಿಲ್ 28ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗಲು ಆದೇಶಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಮೇಯರ್ ಜಯಪ್ರಕಾಶ್ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ವಾಸು ರುಖ್ದ್ ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ.

ಏಪ್ರಿಲ್ 1 ರಂದು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಯುವ ಮೋರ್ಚಾದ ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸದ ಬಳಿ ಪ್ರತಿಭಟನೆ ನಡೆಸಿತ್ತು. ಕಾಶ್ಮೀರ ಫೈಲ್ಸ್ ಚಿತ್ರದ ಕುರಿತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿರುವ ಹೇಳಿಕೆ ವಿರೋಧಿಸಿ ಈ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ಕೆಲವರು ಮುಖ್ಯಮಂತ್ರಿ ನಿವಾಸದ ವಸ್ತುಗಳನ್ನು ಧ್ವಂಸ ಮಾಡಿ, ಗಲಭೆ ಸೃಷ್ಠಿಸಲು ಮುಂದಾಗಿದ್ದರು.

ಬೂಮ್ ಬ್ಯಾರಿಯರ್ ಮತ್ತು ಸಿಸಿಟಿವಿ ಒಡೆದಿದ್ದಲ್ಲದೇ, ಮುಖ್ಯ ಗೇಟ್‌ಗೆ ಬಣ್ಣ ಎರಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಿವಿಲ್ ಲೈನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು 8 ಆರೋಪಿಗಳನ್ನು ಬಂಧಿಸಿದ್ದರು. ಸುಮಾರು ಎರಡು ವಾರಗಳ ಕಾಲ ಜೈಲಿನಲ್ಲಿ ಕಳೆದ ನಂತರ ಅವರಿಗೆ ಜಾಮೀನು ನೀಡಲಾಯಿತು.

ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿದ ಪೊಲೀಸರು, ಮಾಜಿ ಮೇಯರ್ ಜೈ ಪ್ರಕಾಶ್ ಮತ್ತು ಯುವ ಮೋರ್ಚಾ ರಾಜ್ಯಾಧ್ಯಕ್ಷ ವಾಸು ರುಖ್ದಾದ್ ಅವರನ್ನು ಬಂಧಿಸಿದ್ದಾರೆ. ಆದರೆ, ಇಬ್ಬರಿಗೂ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಲಾಗಿದೆ.

ಈ ಪ್ರಕರಣದಲ್ಲಿ ಇದೀಗ ಪೊಲೀಸರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ನೋಟಿಸ್ ಕಳುಹಿಸಿದ್ದು, ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ನೋಟಿಸ್ ಕಳುಹಿಸಿದ ನಂತರ ಅವರನ್ನು ಏಪ್ರಿಲ್ 28 ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಈ ಪ್ರಕರಣದಲ್ಲಿ ಇದುವರೆಗೆ ಸುಮಾರು ಎರಡು 12ಕ್ಕೂ ಹೆಚ್ಚು ಆರೋಪಿಗಳು ಬೆಳಕಿಗೆ ಬಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪೈಕಿ 10 ಮಂದಿಯನ್ನು ಬಂಧಿಸಲಾಗಿತ್ತು. ಮೊದಲ 8 ಆರೋಪಿಗಳನ್ನು ಮಾತ್ರ ಜೈಲಿಗೆ ಕಳುಹಿಸಲಾಗಿತ್ತು.

ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವ ಅವಕಾಶವಿದ್ದು, ಈ ಕಾರಣದಿಂದ ಬಂಧಿತ ಆರೋಪಿಗಳಿಗೆ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *