ಮಧ್ಯರಾತ್ರಿಯ ಬುಲ್ಡೋಜರ್ ಕಾರ್ಯಾಚರಣೆಯಿಂದ ಬೆದರಿ ಹೋಗಿದ್ದ ಕೋಗಿಲು ನಿರ್ವಸಿತರು ಭಯದಿಂದ ಮೌನಕ್ಕೆ ಶರಣಾಗಿದ್ದವರು ಈಗ ಮಾತಾಡತೊಡಗಿದ್ದಾರೆ. ಕರ್ನಾಟಕ ಕಂಡ ಅತಿ ಕೆಟ್ಟ ವಿರೋಧ ಪಕ್ಷದ ನಾಯಕ ಎಂದು ಕುಖ್ಯಾತಿಗೊಳಗಾಗಿರುವ, ನಾಲಿಗೆಯ ಮೇಲೆ ನಿಯಂತ್ರಣ ಇಲ್ಲದ ಆರ್ ಅಶೋಕ್, ಕಾರ್ಯಾಚರಣೆಯಲ್ಲಿ ಶೆಡ್ ಗಳನ್ನು ಕಳೆದುಕೊಂಡವರು “ಬಾಂಗ್ಲಾದೇಶಿಗಳು” ಎಂದು ಸಾರಾಸಗಟಾಗಿ ಹೇಳಿಕೆ ನೀಡಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
-ಮುನೀರ್ ಕಾಟಿಪಳ್ಳ
ಕೋಗಿಲು ಬಡಾವಣೆಯಲ್ಲಿ ಸರಕಾರಿ ಜಮೀನು ಅತಿಕ್ರಮಿಸಿ ವಾಸ ಇದ್ದ ಕೂಲಿಕಾರರ ನಡುವೆ ಕೆಲಸ ಮಾಡುತ್ತಿದ್ದ NGO ಹಾಗು ಈಗ ಸರಕಾರ ಕಲೆ ಹಾಕಿರುವ ಮಾಹಿತಿಯ ಪ್ರಕಾರ 80 ಶೇಕಡಾ ಹೆಚ್ಚಿಗೆ ಜನಗಳು ಉತ್ತರ ಕರ್ನಾಟಕ, ಹೈದರಾಬದ್ ಕರ್ನಾಟಕ ಭಾಗದಿಂದ ವಲಸೆ ಬಂದಿರುವ ಬಡ ಕೂಲಿಕಾರರು. ಇವರೆಲ್ಲಾ ದಶಕದ ಹಿಂದಿನಿಂದಲೆ ಕೋಗಿಲು ಬಡಾವಣೆಯಲ್ಲಿ ಶೆಡ್ ಕಟ್ಟಿ ವಾಸ ಇದ್ದಾರೆ.
ಇವರೆಲ್ಲರೂ ತೀರಾ ಬಡವರಾದ ಮುಸಲ್ಮಾನರು, ದಲಿತರು, ದುರ್ಬಲ ಕೆಳ ಜಾತಿಗಳಿಗೆ ಸೇರಿದವರಾದ ಕಾರಣ ಬಹಳ ಸುಲಭವಾಗಿ ಕೇರಳೀಯರು, ಅಸ್ಸಾಮಿಗಳು, ಕೊನೆಗೆ ಬಾಂಗ್ಲಾದೇಶೀಯರು ಎಂದು ಬಿಜೆಪಿ ಹಾಗು ಅದೇ ಮನಸ್ಥಿತಿಯ ಮೀಡಿಯಾಗಳು, ಒಂದು ವಿಭಾಗದ ಜನಗಳು ಆರೋಪ ಹೊರಿಸಿದರು. ಇದಂತು ಅತಿ ಕೆಟ್ಟದಾಗಿತ್ತು. ಅದರಲ್ಲು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಹಾಗು ಚಲವಾದಿ ನಾರಾಯಣ ಸ್ವಾಮಿ ಸಂತ್ರಸ್ತರ ನಡುವೆ ನಿಂತು ಬಾಂಗ್ಲಾ ನುಸುಳುಕೋರರು ಎಂದು ಹೇಳಿದ್ದು ಬಡವರು, ಕೆಳವರ್ಗದ ಕೂಲಿಕಾರರನ್ನು ಹೇಗೆ ಬೇಕಾದರು ನಡೆಸಿಕೊಳ್ಳಬಹುದು ಎಂಬಂತೆ ಕಾಣಿಸಿಕೊಂಡಿತ್ತು.
ಇದನ್ನೂ ಓದಿ: ಹುಬ್ಬಳ್ಳಿ | ಮರ್ಯಾದೆಗೇಡು ಹತ್ಯೆ : ಅಪರಾಧಿಗಳಿಗೆ ಶಿಕ್ಷೆ : ಸೂಕ್ತ ಪರಿಹಾರ ನೀಡುವ ಭರವಸೆ – ಜಿ.ಪರಮೇಶ್ವರ
ಇನ್ನು ಕೆಲವರು,” ಈ ಹಿಂದೆ ಒಕ್ಕಲೆಬ್ಬಿಸಿದವರಿಗೆ ಪುನರ್ವಸತಿ ಕಲ್ಪಿಸಿಲ್ಲ, ಈಗ್ಯಾಕೆ ಪುನರ್ವಸತಿ ಕಲ್ಪಿಸಲು ತರಾತುರಿ, ಕೊಡುವುದಾದರೆ ಈ ಹಿಂದೆ ಮನೆ ಕಳೆದುಕೊಂಡವರಿಗೆ ಮೊದಲು ಪುನರ್ವಸತಿ, ಮನೆಕೊಡಿ” ಎಂಬ ವಾದ ಮುಂದಿಟ್ಟರು. ನಿಜಕ್ಕೂ ಇವರ ಕಾಳಜಿಯಲ್ಲಿ ಪ್ರಾಮಾಣಿಕತೆ ಇದ್ದರೆ, ಈಗ ಕೋಗಿಲು ಬಡಾವಣೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದನ್ನು ಬೆಂಬಲಿಸಬೇಕಿತ್ತು, ಹಾಗೆಯೆ ಈ ಹಿಂದೆ ಸಂತ್ರಸ್ತರಾದವರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಬೇಕಿತ್ತು. ಇನ್ನು ಮುಂದಕ್ಕೆ ಇಂತಹ ಕಾರ್ಯಾಚರಣೆ ಮಾಡುವಾಗ ನಿಯಮ ಪಾಲಿಸಲು ಒತ್ತಾಯಿಸಬೇಕಿತ್ತು.
ಕೋಗಿಲು ಬಡಾವಣೆ ನಿವಾಸಿಗಳಿಗೆ ಮಾತ್ರ ಅಲ್ಲ, ನಾಡಿನ ಪ್ರತಿಯೊಬ್ಬ ವಸತಿ ರಹಿತನಿಗೂ ಮನೆ ಒದಗಿಸುವುದು ಸರಕಾರಗಳ ಜವಾಬ್ದಾರಿ. ಅದು ಪೂರ್ತಿಗೊಂಡಾಗಲಷ್ಟೆ ಒಂದು ನಾಡು ಅಭಿವೃದ್ದಿ, ಸಮಾನ ನ್ಯಾಯದ ಕಡೆಗೆ ಪುಟ್ಟ ಹೆಜ್ಜೆ ಇಟ್ಟಿದೆ ಎಂದು ಭಾವಿಸಬಹುದು.
ಇನ್ನು ಕೆಲವರು ನವ ಮಧ್ಯಮ ವರ್ಗದ ಕಡೆಗೆ ಚಲಿಸುತ್ತಿರುವವರ ವಾದ ತೀರಾ ಬಾಲಿಶವಾಗಿದೆ. “ನಾವು ಒಂದೆರೆಡು ದಶಕ ದುಡಿದು, ಉಳಿತಾಯ ಮಾಡಿ, ಅದರಲ್ಲಿ ಡೌನ್ ಪೇಮೆಂಟ್ ಕಟ್ಟಿ, ಬ್ಯಾಂಕ್ ಸಾಲ ಮಾಡಿ ಮನೆ ಖರೀದಿಸಬೇಕು, ಈ ಸರಕಾರಿ ಭೂಮಿಯಲ್ಲಿ ಅತಿಕ್ರಮಣ ಮಾಡಿದವರು, ವಸತಿ ರಹಿತರು ಎಂದು ಅರ್ಜಿ ಹಾಕಿದವರಿಗೆಲ್ಲ ಸರಕಾರ ಪುಕ್ಸಟ್ಟೆ ಮನೆ ಕಟ್ಟಿಕೊಡುತ್ತದೆ” ಎಂದು ರೋಧಿಸತೊಡಗಿದ್ದಾರೆ. ಇವರ ಪ್ರಕಾರ ರಟ್ಟೆ ಮುರಿದು ಇಡೀ ದಿನ ದುಡಿದು ಹಸಿವು ಹಿಂಗಿಸಲು ಪೇಚಾಡುವ ಕೂಲಿಕಾರರು ಮನೆ ಹೊಂದುವುದು ಬಹು ದೊಡ್ಡ ಅಪರಾಧ.
ಪಿಣರಾಯಿ ವಿಜಯನ್ ಒಂದು ಟ್ವೀಟ್ ಮಾಡಿದ ತರುವಾಯ ಕೇರಳ, ಕೇರಳ ಎಂದು ಬೊಬ್ಬಿಡುತ್ತಿರುವ ಮೀಡಿಯಾಗಳಲ್ಲಿ ಕೇಳಲಿರುವುದು, ಸುವರ್ಣ ಚಾನಲ್, ಟಿ ವಿ 9, ರಿಪಬ್ಲಿಕ್ ಕನ್ನಡ ಮುಂತಾದ ಚಾನಲ್ ಗಳ ಮಾಲಕರು ಯಾರು, ಕನ್ನಡಿಗರೆ ? ಪಬ್ಲಿಕ್ ಟಿವಿಗೆ ಹಣ ಹೂಡಿದವರು ಯಾರು ? ಶ್ವೇತ್ರ ಪತ್ರ ಹೊರಡಿಸುತ್ತೀರಾ ? ಕೇರಳದ ಬಿಜೆಪಿ ನಾಯಕ, ರಾಜ್ಯ ಸಭಾ ಸದಸ್ಯ ರಾಜೀವ ಚಂದ್ರಶೇಖರ್ ಮಾಲಕತ್ವದ ಸುವರ್ಣ ಚಾನಲ್ ಗೆ ಕರ್ನಾಟಕದಲ್ಲಿ ಏನು ಕೆಲಸ ? ಅಂತ ಕೇಳಿದರೆ ಹೇಗಿರುತ್ತದೆ ?
ಅಷ್ಟಕ್ಕೂ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಿಂದ ಬಂದು ಬೆಂಗಳೂರಿನಲ್ಲಿ ಬೆವರು ಬಸಿಯುತ್ತಿರುವ ಬಡವರಾದ ಮುಸ್ಲಿಮರು, ದಲಿತರು, ಸಂಖ್ಯಾ ಬಲ ಇಲ್ಲದ ಕೆಳ ಜಾತಿಗಳ ಕೂಲಿಕಾರ್ಮಿಕರ ಕುರಿತು ಈ ಪರಿಯ ದ್ವೇಷ ಏತಕ್ಕೆ ? ಇದರಿಂದ ಸಾಧಿಸುವುದು ಏನು ? ಇಡೀ ರಾಜ್ಯದ ಸಂಪತ್ತು ಲೂಟಿ ಹೊಡೆದ, ನೂರಾರು ಎಕರೆ ಜಮೀನು ಬೇನಾಮಿಯಾಗಿ ಖರೀದಿ ಮಾಡಿರುವ, ಸರಕಾರಿ ಜಮೀನು ಹೊಡೆದಿರುವ ಬಿಜೆಪಿಯ ನಾಯಕರನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೆ ?
ಇದನ್ನೂ ನೋಡಿ: 2026 | ನಿರಾತಂಕ ಹಗಲು, ನಿರ್ಭಯದ ರಾತ್ರಿಗಳ ಖಾತ್ರಿಯಾಗಿರಲಿ Janashakthi Media
