ಏಪ್ರಿಲ್ 8ರ ಬಳಿಕ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ : ಸಿಎಂ ಬೊಮ್ಮಾಯಿ

ಬೆಂಗಳೂರು : ವಿಧಾನಸಭೆ ಚುನಾವಣೆ ಸಂಬಂಧಏಪ್ರಿಲ್ 8 ಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯ ಬಳಿಕ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಏಪ್ರಿಲ್‌ 3 ರಂದು ಬೆಂಗಳೂರಿನಲ್ಲಿ ಮಾತನಾಡಿದ ಬೊಮ್ಮಾಯಿ, ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತವಾಗಿಲ್ಲ. ಹಲವು ಕ್ಷೇತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಅದು ನಮ್ಮ ಪಕ್ಷ ಗೆಲ್ಲುವುದನ್ನು ತೋರಿಸುತ್ತದೆ ಎಂದರು.

ಕಾಂಗ್ರೆಸ್ ಅವರಿಗೆ ಅಂಬೇಡ್ಕರ್ ಮೇಲೆ ಪ್ರೀತಿ ಇಲ್ಲ :
ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಮೇಲೆ ಪ್ರೀತಿ ಇಲ್ಲ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಟ್ವೀಟ್ ಮಾಡಿದ್ದಾರೆ. ಮೀಸಲಾತಿ ಸಂವಿಧಾನ ಬಾಹಿರ ಕಾನೂನು ಬಾಹಿರ ಎಂದು ಹೇಳಿದ್ದಾರೆ. ಕೆಳ ಮಟ್ಟದ ಪದ ಬಳಕೆ ಮಾಡಿದ್ದಾರೆ. ಕಾಂಗ್ರೆಸ್ ಅವರಿಗೆ ಅಂಬೇಡ್ಕರ್ ಮೇಲೆ ಪ್ರೀತಿ ಇಲ್ಲ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.
ಕಾಂಗ್ರೆಸ್‌ಗೆ ಹಿಂದುಳಿದ ಸಮುದಾಯದ ಮೇಲೆ ಕಾಳಜಿ ಇಲ್ಲ.‌ ನಾಗಮೋಹನ್ ದಾಸ್ ವರದಿ ಬಂದ ತಕ್ಷಣ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಅಷ್ಟೆ ಅಲ್ಲ, ಕ್ಯಾಬಿನೆಟ್‌ನಲ್ಲೂ ಚರ್ಚೆ ಮಾಡಲಾಗಿತ್ತು.ಕಾಯಿದೆ ತಂದು ಅದನ್ನ ಜಾರಿ ಮಾಡಿದ್ದೇವೆ ಎಂದರು.

ಕೈ ಅಧಿಕಾರಕ್ಕೂ ಬರುವುದಿಲ್ಲ, ಮೀಸಲಾತಿಯನ್ನು ತೆಗೆಯುವುದಕ್ಕೂ ಆಗುವುದಿಲ್ಲ:
ಇದೀಗ ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿ ಕಾಡ್ತಿದೆ. ಹತಾಶರಾಗಿ ಇಂತಹ ಹೇಳಿಕೆ ಕೊಡ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ವಿಚಾರಗಳನ್ನು ವಿರೋಧ ಮಾಡ್ತಿದೆ. ಕಾಂಗ್ರೆಸ್ ದೀನ ದಲಿತರ ವಿರೋಧಿ, ಲಿಂಗಾಯತ ಹಾಗೂ ಒಕ್ಕಲಿಗರ ವಿರೋಧಿ ಎಂದು ಕಿಡಿಕಾರಿದರು.
ಮೀಸಲಾತಿ ತೆಗೆಯಲು ಸಾಧ್ಯವಿಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ನಿರ್ಧಾರವನ್ನು ವಾಪಸ್‌ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ‌. ಮೀಸಲಾತಿಯನ್ನು ತೆಗೆಯುವುದಕ್ಕೂ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ : ಟಿಕೆಟ್ ಘೋಷಣೆಯಾಗುವ ಮುನ್ನವೇ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ

ಗ್ರಾಮೀಣ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್‌ಗೆ ಆಗ್ರಹ :
ಕಲಬುರಗಿ ಬಿಜೆಪಿ ಗ್ರಾಮೀಣ ಮತಕ್ಷೇತ್ರದಲ್ಲಿಅಸಮಾಧಾನ ಭುಗಿಲೆದ್ದಿದ್ದು, ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ‘ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರು’ ಎಂಬ ಬ್ಯಾನರ್ ಅಡಿ ಸಮಾವೇಶ ನಡೆಸಿದರು. ಇಲ್ಲಿನ ವೀರಶೈವ ಕಲ್ಯಾಣ ಮಂಟಪದವರೆಗೆ ಪ್ರತಿಭಟನೆ ನಡೆಸಿ, ಬಸವರಾಜ ಮತ್ತಿಮೂಡ್ ಹಟಾವೋ, ಕಲಬುರಗಿ ಗ್ರಾಮೀಣ ಬಿಜೆಪಿ ಬಚಾವೋ ಎಂದು ಘೋಷಣೆ ಕೂಗಿದರು. ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈಗಿನ ಶಾಸಕರಿಗೆ ಟಿಕೆಟ್ ನೀಡಿದರೆ ಪಕ್ಷ ಸೋಲುವುದು ಖಚಿತ. ಆದ್ದರಿಂದ ಇವರ ಬದಲಿಗೆ ಸ್ಥಳೀಯ ಅಭ್ಯರ್ಥಿಗಳಾದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅಂಬಾರಾಯ ಅಷ್ಟಗಿ, ಬಿಜೆಪಿ ಮುಖಂಡರಾದ ಕಮಲಾಕರ ರಾಠೋಡ್, ರಾಜಕುಮಾರ ಎಂ.ಚವ್ಹಾಣ, ಅಂಬಾರಾಯ ಬೆಳಕೋಟ, ಸೋನುಬಾಯಿ ರಾಠೋಡ್ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಬಿಜೆಪಿಯನ್ನು ಗೆಲ್ಲಿಸಲಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *