- ರೈತರ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ: ಡಿ. ರಾಜಾ
- ನಿಮ್ಮ ರಾಷ್ಟ್ರ ವಿರೋಧಿ, ಜನ ವಿರೋಧಿ ನೀತಿಗಳನ್ನು ಹಿಂತೆಗೆದುಕೊಳ್ಳಿ: ಮೋದಿಗೆ ಯೆಚೂರಿ ಆಗ್ರಹ
ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ರಾಷ್ಟ್ರ ರಾಜಧಾನಿಯತ್ತ ತೆರಳುತ್ತಿದ್ದ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಬಳಸಿದ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರಕ್ಕೆ ಎಡ ಪಕ್ಷಗಳು ಗುರುವಾರ ಛಾಟಿ ಬೀಸಿವೆ. ಇದು ಬಿಜೆಪಿಯ ‘ರೈತ ವಿರೋಧಿ ಮುಖ‘ವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿವೆ.
ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸಲು ‘ದೆಹಲಿ ಚಲೊ‘ ಕೈಗೊಂಡಿದ್ದ ಪಂಜಾಬ್ ರೈತರು, ಹರಿಯಾಣ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರ ಜಲಫಿರಂಗಿಗಳನ್ನು, ಅಶ್ರುವಾಯುವನ್ನು ಎದುರಿಸಬೇಕಾಯಿತು. ‘ಇದು ಬಿಜೆಪಿ ಸರ್ಕಾರ ರೈತರ ಮೇಲೆ ನಡೆಸಿದ ದಾಳಿಯಾಗಿದೆ. ಸಿಪಿಐ ಯಾವಾಗಲೂ ರೈತರಿಗೆ ಬೆಂಬಲವಾಗಿ ನಿಂತಿದೆ ಮತ್ತು ಅವರ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ. ಇದು ಬಿಜೆಪಿಯ ನಿಜವಾದ ರೈತ ವಿರೋಧಿ ಮುಖವನ್ನು ತೋರಿಸುತ್ತದೆ‘ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.
ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪಂಜಾಬ್ ರೈತರು ಸೇರಿದಂತೆ ದೇಶದಾದ್ಯಂತ ನಡೆದ ಪ್ರತಿಭಟನೆಗಳ ಚಿತ್ರಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಇದು ‘ನಿಜವಾದ ಭಾರತ‘ ಎಂದು ಹೇಳಿದ್ದಾರೆ.
This is the real India PM Modi.
We shall make you listen to us.
Withdraw your anti-national, anti-people policies. pic.twitter.com/pfRMdJu6JR— Sitaram Yechury (@SitaramYechury) November 26, 2020
‘ಇದು ನಿಜವಾದ ಭಾರತ ಪ್ರಧಾನಿ (ನರೇಂದ್ರ) ಮೋದಿ ಅವರೇ. ನೀವು ನಮ್ಮ ಮಾತನ್ನು ಕೇಳುವಂತೆ ಮಾಡುತ್ತೇವೆ. ನಿಮ್ಮ ರಾಷ್ಟ್ರ ವಿರೋಧಿ, ಜನ ವಿರೋಧಿ ನೀತಿಗಳನ್ನು ಹಿಂತೆಗೆದುಕೊಳ್ಳಿ‘ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.