ಬಿಜೆಪಿಗೆ ಮತ ಹಾಕಲಿಲ್ಲವೆಂದು ದಲಿತ ವಿದ್ಯಾರ್ಥಿನಿ ಶಾಲೆ ಪ್ರವೇಶಕ್ಕೆ ನಿರಾಕರಣೆ: ದೂರು ದಾಖಲು

ಶಾಜಾಪುರ: ಖಾಸಗಿ ಶಾಲೆಯ ನಿರ್ದೇಶಕರೊಬ್ಬರ ಸೊಸೆ ಬಿಜೆಪಿ ಪಕ್ಷದಿಂದ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಶಾಲೆಯ ಬಾಲಕಿಯ ಪೋಷಕರು ಮತ ಹಾಕಲಿಲ್ಲವೆಂದು ದಲಿತ ಬಾಲಕಿಯೊಬ್ಬಳನ್ನು ತರಗತಿಗೆ ಪ್ರವೇಶಿಸದಂತೆ ತಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಶಾಜಾಪುರ ಜಿಲ್ಲೆಯ ದುಪಾಡಾದಲ್ಲಿರುವ ಬಿಎಸ್‌ಪಿ ಖಾಸಗಿ ಶಾಲೆಯ ನಿರ್ದೇಶಕ ರವಿ ಪಾಟಿದಾರ್ ಎಂಬುವರ ಸೊಸೆ ಸ್ವಪ್ನಾ ಸಚಿನ್ ಪಾಟಿದಾರ್ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಆದರೆ, ಶಾಲಾ ಬಾಲಕಿಯ ತಂದೆ ವಾಸಿಸುವ ವಾರ್ಡ್‌ನಿಂದ ಯಾವುದೇ ಮತದಾನವಾಗಿಲ್ಲ ಎಂದು ತಿಳಿದು ಬಂದಿದ್ದರಿಂದ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪಡೆದಿದ್ದ ಬಾಲಕಿಯನ್ನು ಶಾಲಾ ನಿರ್ದೇಶಕರು ತಡೆದು ಆಕೆಯನ್ನು ಒಳಬಿಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಗಳನ್ನು ಯಾಕೆ ತರಗತಿಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಪೋಷಕರು ವಿಚಾರಿಸಿದಾಗ, “ನೀವು ನಮಗೆ ಬೆಂಬಲ ನೀಡಲಿಲ್ಲ ಮತ್ತು ಮತ ಹಾಕಲಿಲ್ಲ. ಹಾಗಾಗಿ, ನಾನು ನಿಮ್ಮ ಹುಡುಗಿಗೆ ಶಾಲೆಯಲ್ಲಿ ಕಲಿಸುವುದಿಲ್ಲ” ಎಂದು ನಿರ್ದೇಶಕ ಹೇಳಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬಾಲಕಿಯ ತಂದೆ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಮುಖ್ಯಮಂತ್ರಿ ಸಹಾಯವಾಣಿಗೆ ದೂರು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. “ಶಾಲೆ ಬಿಜೆಪಿ ಮುಖಂಡರದ್ದು. ನಾವು ದಲಿತರು. ಯಾರೂ ನಮ್ಮ ಮಾತು ಕೇಳುತ್ತಿಲ್ಲ” ಎಂದು ವಿದ್ಯಾರ್ಥಿನಿಯ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *