ಬಿಜೆಪಿಗಷ್ಟೇ ಅಲ್ಲ, ಎಎಪಿಗೂ ಅಂಬೇಡ್ಕರ್ ಚುನಾವಣಾ ಸಾಧನವಷ್ಟೇ?!

ರಾಜೇಂದ್ರ ಪಾಲ್ ಗೌತಮ್

ದಿಲ್ಲಿಯ ಎಎಪಿ ನಾಯಕರೊಬ್ಬರು ಬೌದ್ಧಧರ್ಮ ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ಸಂಘ ಪರಿವಾರದ ರೋಷಕ್ಕೆ ಗುರಿಯಾದಾಗ ತನ್ನ ಪಕ್ಷದಿಂದಲೂ ಬೆಂಬಲ ಸಿಗದೇ ರಾಜೀನಾಮೆ ನೀಡಬೇಕಾಗಿ ಬಂದಿರುವ ಘಟನೆ ಆರೆಸ್ಸೆಸ್-ಬಿಜೆಪಿಗಷ್ಟೇ ಅಲ್ಲ, ಆಮ್ ಆದ್ಮಿ ಪಕ್ಷಕ್ಕೂ ಡಾ.ಬಿ.ಆರ್. ಅಂಬೇಡ್ಕರ್ ಕೇವಲ ಒಂದು ಚುನಾವಣಾ ಗಳಿಕೆಯ ಸಾಧನವಷ್ಟೇ ಆಗಿದ್ದಾರೆ ಎಂಬುದನ್ನು ತೋರಿಸುವಂತಿದೆ. ಈ ಸಂದರ್ಭದಲ್ಲಿ ಕೇಜ್ರೀವಾಲ್ ಚಾರಿತ್ರಿಕವಾಗಿ ಅಂಚಿಗೆ ತಳ್ಳಲ್ಪಟ್ಟವರಿಗೆ ಮೀಸಲಾತಿಯ ಕ್ರಮವನ್ನು ವಿರೋಧಿಸುವ ‘ಯೂತ್ ಫಾರ್ ಇಕ್ವಾಲಿಟಿ’ಯಲ್ಲಿ ಸಕ್ರಿಯರಾಗಿದ್ದರು ಎಂಬುದನ್ನು ಮರೆಯುವುದು ಕಷ್ಟ, ಎಎಪಿ ಆಡಳಿತವಿರುವ ರಾಜ್ಯಗಳಲ್ಲಿ ಅಂಬೇಡ್ಕರ್ ಅವರನ್ನು ಆರಾಧಿಸುತ್ತಿರುವುದು ಕೇವಲ ಚುನಾವಣಾ ಲಾಭಕ್ಕಾಗಿಯೇ ಹೊರತು ಸೈದ್ಧಾಂತಿಕ ಬದ್ಧತೆಯಿಂದಲ್ಲ ಎಂಬುದು ಕಳೆದ ಕೆಲವು ದಿನಗಳ ಘಟನೆಗಳಿಂದ ತೋರುತ್ತದೆ. ಬಹುಶಃ ಎಎಪಿ ಈ ಆರೋಪವನ್ನು ಅಲ್ಲಗಳೆಯುವುದು ಬಹಳ ಕಷ್ಟ ಎನ್ನುತ್ತಾರೆ ಪ್ರೊ. ರಾಮ್ ಪುನಿಯಾನಿ, ಐಐಟಿ -ಮುಂಬೈಯ ನಿವೃತ್ತ ಪ್ರಾಧ್ಯಾಪಕರು ಮತ್ತು ಈಗ ಮಾನವ ಹಕ್ಕುಗಳ ಹೋರಾಟದಲ್ಲಿ ಸಕ್ರಿಯರಾಗಿರುವವರು.

ಪ್ರೊ. ರಾಮ್ ಪುನಿಯಾನಿ

ಇತ್ತೀಚೆಗೆ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದಿಲ್ಲಿಯಲ್ಲಿ ಆ ಪಕ್ಷದ ಸರಕಾರದಲ್ಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಅಕ್ಟೋಬರ್ 5 ರಂದು ಅಶೋಕ್ ವಿಜಯದಶಮಿಯಂದು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಾಜೀನಾಮೆ ನೀಡಬೇಕಾಯಿತು. ಈ ಕಾರ್ಯಕ್ರಮವು ಬೌದ್ಧ ಧರ್ಮ ದೀಕ್ಷಾ ಸಮಾರಂಭವಾಗಿದ್ದು, ಸಾವಿರಾರು ಜನರು, ಹೆಚ್ಚಾಗಿ ದಲಿತರು, ಭಾಗವಹಿಸಿದ್ದರು. ಅವರಿಗೆ ಇದು ಬೌದ್ಧ ಧರ್ಮವನ್ನು ಸ್ವೀಕರಿಸುವ ಮತ್ತು ಹಿಂದೂ ಧರ್ಮವನ್ನು ತ್ಯಜಿಸುವ ಒಂದು ಗಂಭೀರ ಸಂದರ್ಭವಾಗಿತ್ತು. ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮತ್ತು ಭಾರತೀಯ ಸಂವಿಧಾನದ ಕರಡು ರಚನಾ ಸಮಿತಿಯ ಮುಖ್ಯಸ್ಥ ಡಾ ಬಿಆರ್ ಅಂಬೇಡ್ಕರ್ ಅವರ ಹೆಜ್ಜೆಗಳನ್ನು ಅನುಸರಿಸಿ ಬಂದಿದ್ದರು. 1956 ರಲ್ಲಿ ಇದ್ದಂತೆ, ಸಮಾರಂಭದಲ್ಲಿ ಇಪ್ಪತ್ತೆರಡು ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವುದು ಇತ್ತು. ಬೌದ್ಧ ಧರ್ಮವನ್ನು ಸ್ವೀಕರಿಸುವವರು ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಗೌರಿಯಂತಹ ಹಿಂದೂ ದೇವರುಗಳು ಮತ್ತು ದೇವತೆಗಳನ್ನು ಪೂಜಿಸುವುದನ್ನು ಬಿಟ್ಟು ಮಾನವತಾವಾದ, ತಾರತಮ್ಯರಹಿತತೆ, ಪ್ರಾಮಾಣಿಕತೆ, ಅಹಿಂಸೆ, ಸತ್ಯತೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ.

ವಿಲಕ್ಷಣ ಪ್ರತಿಕ್ರಿಯೆಗಳು

ವಿಪರ್ಯಾಸವೆಂದರೆ ಆರೆಸ್ಸೆಸ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾರ ಹಾಕುತ್ತಲೇ ಅವರ ಇಪ್ಪತ್ತೆರಡು ಪ್ರತಿಜ್ಞೆಗಳನ್ನು ವಿರೋಧಿಸಬಹುದು. ಸಮಾರಂಭದಲ್ಲಿ ಗೌತಮ್ ಅವರ ಉಪಸ್ಥಿತಿಯು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಅದರ ಅಂಗಸAಘಟನೆಗಳನ್ನು ಎಷ್ಟೊಂದು ರೊಚ್ಚಿಗೆಬ್ಬಿಸಿತು ಎಂದರೆ, ಅವರಿಗೆ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಹಚ್ಚುವ ಅಭಿಯಾನವನ್ನೇ ಆರಂಭಿಸಿತು. ದೆಹಲಿಯಲ್ಲಿ ಸರ್ಕಾರವನ್ನು ನಡೆಸುತ್ತಿರುವ ಆದರೆ ತನ್ನ ಒಬ್ಬ ನಾಯಕ ಮತ್ತು ಸಚಿವರನ್ನು ಬೆಂಬಲಿಸದ ಎಎಪಿಯ ವರ್ತನೆ ಕೂಡ ಅಷ್ಟೇ ಗಮನಾರ್ಹವಾಗಿದೆ. ಇವು ವಿಲಕ್ಷಣ ಪ್ರತಿಕ್ರಿಯೆಗಳು. ಏಕೆಂದರೆ ಎರಡೂ ಸಂಘಟನೆಗಳು ಅಂಬೇಡ್ಕರ್ ಅವರನ್ನು ಆರಾಧಿಸುವುದಾಗಿ ಹೇಳಿಕೊಳ್ಳುತ್ತವೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರಗಳನ್ನು ಪ್ರಮುಖವಾಗಿ ಪ್ರದರ್ಶಿಸುತ್ತವೆ. ಕೇಂದ್ರದಲ್ಲಿ ಅಧಿಕಾರದ ಸೂತ್ರಗಳನ್ನು ನಿಯಂತ್ರಿಸುವ ಬಿಜೆಪಿಯ ಮೂಲಸಂಘಟನೆ ಆರೆಸ್ಸೆಸ್ ಮತ್ತು ಎಎಪಿ, ಅಂಬೇಡ್ಕರ್ ಅವರ ವಿಚಾರಗಳು ಮತ್ತು ಮಾತುಗಳು ಮತ್ತು ಜೀವನದುದ್ದಕ್ಕೂ ಅವರು ಶ್ರಮಿಸಿದ ಮೌಲ್ಯಗಳನ್ನು ಎಷ್ಟು ಸುಲಭವಾಗಿ ತೊಡೆದುಹಾಕಿದವು ಎಂಬುದನ್ನು ಅವರ ಪ್ರತಿಕ್ರಿಯೆಗಳು ಪ್ರದರ್ಶಿಸಿವೆ.

ಗೌತಮ್ ಅವರ ಮನೆಯ ಹೊರಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರ ಗುಂಪು ಗೌತಮ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು, ನಂತರ ಭಗವಾನ್ ರಾಮನ ಚಿತ್ರವಿರುವ ಕೇಸರಿ ಧ್ವಜವನ್ನು ಹಾರಿಸಿದರು. ಕಾರ್ಯಕ್ರಮದಲ್ಲಿ ಗೌತಮ್ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳು ಮತ್ತು ಸರ್ಕಾರದ ಪರ ಮಾಧ್ಯಮಗಳು ಮಿತಿಮೀರಿ ಪ್ರಚಾರ ಮಾಡಿದವು. ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಗೌತಮ್ ವಿರುದ್ಧ ದೂರು ದಾಖಲಿಸಿದ್ದು, ದೆಹಲಿ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಹಿಂದೂ ವಿರೋಧಿ ಎಂದು ಹೆಸರಿಸುವ ಪೋಸ್ಟರ್‌ಗಳು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿವೆ. ಕೇಜ್ರಿವಾಲ್ ತಕ್ಷಣವೇ ತಾನು ಕೃಷ್ಣ ಜನ್ಮಾಷ್ಟಮಿಯಂದು ಜನಿಸಿzವÀರು ಮತ್ತು ಕಟ್ಟಾ ಹಿಂದೂ ಎಂದು ಹೇಳಿದರು, ನಂತರ ಗೌತಮ್ ಇಪ್ಪತ್ತೆರಡು ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೊನೆಗೂ ಗೌತಮ್ ರಾಜೀನಾಮೆ ನೀಡಿದರು. ಮತ್ತೆ-ಮತ್ತೆ ಸ್ಪಷ್ಟಪಡಿಸಿದಂತೆ, ಅಕ್ಟೋಬರ್ 5 ರಂದು ಜನರು ಕೈಗೊಂಡ ಪ್ರತಿಜ್ಞೆಗಳು ಅಂಬೇಡ್ಕರ್ ಅವರು 1956 ರಲ್ಲಿ ಸುಮಾರು ಮೂರು ಲಕ್ಷ ಅನುಯಾಯಿಗಳಿಗೆ ಬೋಧಿಸಿದವುಗಳೇ. ಅವರ ಬರಹಗಳಲ್ಲಿ ಈ ಪ್ರತಿಜ್ಞೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ ಮತ್ತು ಇವು ಹಿಂದೂ ದೇವತೆಗಳನ್ನು ಪೂಜಿಸಬೇಡಿ ಎಂದು ಅನುಯಾಯಿಗಳನ್ನು ಕೇಳುತ್ತವೆ. ಆದಾಗ್ಯೂ, ಹಿಂದೂ ದೇವರುಗಳನ್ನು ಯಾವುದೇ ರೀತಿಯಲ್ಲಿ ಅವಮಾನಿಸುವುದಿಲ್ಲ.

ಪ್ರಾತಃಸ್ಮರಣೀಯರು ಎಂಬ ಪೊಳ್ಳು ಮಾತು

ಕಳೆದ ವಾರದ ಈ ಘಟನೆಯಿಂದ ಆರ್‌ಎಸ್‌ಎಸ್-ಬಿಜೆಪಿ ಆಧುನಿಕ ಭಾರತದಲ್ಲಿ ದಲಿತರ ದೊಡ್ಡ ಪೂಜನೀಯ ರಾಜಕೀಯ ಮೂರ್ತಿಯನ್ನು ಬುಡಮೇಲು ಮಾಡುತ್ತಲೇ ದಲಿತರನ್ನು ಓಲೈಸುವ ಸಂಕೀರ್ಣ ತಂತ್ರ ಮತ್ತು ಕೇಜ್ರಿವಾಲ್ ಅವರ ಅಂಬೇಡ್ಕರ್‌ರವರನ್ನು ಪೂಜನೀಯಗೊಳಿಸುತ್ತಿರುವುದು ಎಷ್ಟು ಪೊಳ್ಳು ಎಂಬುದು ಎದ್ದು ಕಂಡಿತು. ಆರ್‌ಎಸ್‌ಎಸ್ ಅಂಬೇಡ್ಕರ್ ಅವರನ್ನು ಪ್ರಾತಃಸ್ಮರಣೀಯರು ಎನ್ನುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆರ್‌ಎಸ್‌ಎಸ್ ಹಿನ್ನೆಲೆಯ ಪ್ರಮುಖ ನಾಯಕರು ತಮ್ಮ ವೃತ್ತಿಜೀವನಕ್ಕೆ ಅಂಬೇಡ್ಕರ್ ಅವರ ಸಮಾನತೆ ಮತ್ತು ನ್ಯಾಯದ ಹೋರಾಟಗಳಿಗೆ ಋಣಿಯಾಗಿರುವುದಾಗಿ ಹೇಳಿದ್ದಾರೆ. ಆರೆಸ್ಸೆಸ್ ಸಂಘಟನೆಗಳು ಅಂಬೇಡ್ಕರ್ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸುತ್ತವೆ.

ನಾಣ್ಯದ ಇನ್ನೊಂದು ಬದಿ ಅಂಬೇಡ್ಕರ್‌ರವರ ಮುಖಸ್ತುತಿ, ಇದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಾಯಿಸುವ ಆರೆಸ್ಸೆಸ್ ಯೋಜನೆಯ ಭಾಗವಾಗಿದೆ. ಸ್ವಾಭಾವಿಕವಾಗಿಯೇ, ಇದು ಅಂಬೇಡ್ಕರರ ವಿಚಾರಗಳಿಗೆ ವಿರುದ್ಧವಾಗಿದೆ. (ಶತಮಾನದ ಹಿಂದೆ ಆರ್‌ಎಸ್‌ಎಸ್ ರಚನೆಯಾಗಿದ್ದು ಕೂಡ ನಾಗ್ಪುರ ಪ್ರದೇಶದಲ್ಲಿ ‘ಬ್ರಾಹ್ಮಣೇತರ’ ಚಳವಳಿಯನ್ನು ಎದುರಿಸಲು). ಜಾತಿ-ವಿರೋಧಿ ಅಭಿಯಾನವು ಜಾತಿ ಆಧಾರಿತ ಶ್ರೇಣಿವ್ಯವಸ್ಥೆಯನ್ನು ಗುರಿಯಾಗಿಸಿದರೆ, ಆರ್‌ಎಸ್‌ಎಸ್ ಆರಂಭದಲ್ಲಿ ಜಾತಿಯ ಆಳವಾದ ಸಾಮಾಜಿಕ ಮತ್ತು ಆರ್ಥಿಕ ಬೇರುಗಳ ಬಗ್ಗೆ ಹೇಳದೆ ಎಲ್ಲಾ ಹಿಂದೂಗಳನ್ನು ಒಂದೇ ಸೂರಿನಡಿಯಲ್ಲಿ ಸಂಯೋಜಿಸಲು ಪ್ರಯತ್ನಿಸಿತು. ಹಿಂದೊಂದು ಸುವರ್ಣ ಕಾಲ ಇತ್ತು ಎನ್ನುವ ಆರೆಸ್ಸೆಸ್ ಈ ಪುರಾಣಕ್ಕೆ ತೋರಿಸಿದ ಉದಾಹರಣೆ ಭವಿಷ್ಯದಲ್ಲಿ ಮನುಸ್ಮೃತಿಯ ಆದೇಶಗಳನ್ನು ಪಾಲಿಸುವ ಪ್ರಭುತ್ವದ ಬ್ರಾಹ್ಮಣ ಹೇರಿಕೆ. ಕ್ರಮೇಣ, ಆರೆಸ್ಸೆಸ್ ತನ್ನ ಕಾರ್ಯತಂತ್ರಗಳು ಮತ್ತು ಭಾಷೆಯನ್ನು ಬದಲಾಯಿಸಿತು. ಇದು ಹಿಂದೂ ರಾಷ್ಟ್ರದ ಮೂಲ ಯೋಜನೆಯನ್ನು ಉಳಿಸಿಕೊಂಡಿದೆ, 1947 ರಲ್ಲಿ ರಚಿಸಲಾದ ಜಾತ್ಯತೀತ ಪ್ರಜಾಪ್ರಭುತ್ವ ಭಾರತಕ್ಕೆ ವಿರುದ್ಧವಾಗಿ ಹಿಂದೂ ಮಹಾಸಭಾದೊಂದಿಗೆ, ಅದು ಹಿಂದೂ ರಾಷ್ಟ್ರದ ಪ್ರಯತ್ನ ನಡೆಸಿತು. ಅದಕ್ಕೆ, ಕೇವಲ ಮುಸ್ಲಿಮರಿಗೆ ಸೀಮಿತವಾದ ಮುಸ್ಲಿಂ ದೇಶವೊಂದರ ಪ್ರಯತ್ನದಲ್ಲಿದ್ದ ಮುಸ್ಲಿಂ ಲೀಗ್‌ನಲ್ಲಿ ಒಂದು ಅವಳಿಯೂ ಸಿಕ್ಕಿತು ಎಂಬುದರಲ್ಲಿ ಸಂದೇಹವಿಲ್ಲ.

ಅಂಬೇಡ್ಕರ್ ಈ ಎರಡೂ ಧರ್ಮ ಆಧಾರಿತ ರಾಷ್ಟ್ರೀಯತೆಗಳು ನಿಷ್ಪ್ರಯೋಜಕವೆಂದು ಕಂಡುಕೊಂಡರು ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ಪ್ರಭುತ್ವ ಬೇಕೆಂದರು. ಪಾಕಿಸ್ತಾನದ ಕುರಿತಾದ ಅವರ ಪುಸ್ತಕದ ಪರಿಷ್ಕೃತ ಆವೃತ್ತಿಯಲ್ಲಿ, ಅವರು ಹೊಸ ದೇಶದ ಬೇಡಿಕೆಯನ್ನು ವಿರೋಧಿಸಿದರು ಏಕೆಂದರೆ ಅದು ಪಾಕಿಸ್ತಾನದ ಆಚೆಗೆ ಬ್ರಿಟಿಷ್ ಭಾರತದಲ್ಲಿ ಉಳಿದಿರುವ ವಿಶಾಲವಾದ ಪ್ರದೇಶದಲ್ಲಿ ಹಿಂದೂ ರಾಷ್ಟ್ರಕ್ಕೆ ದಾರಿ ಮಾಡಿಕೊಡಬಹುದು ಎಂದು. ಧರ್ಮಾಧಾರಿತ ದೇಶಗಳ ಈ ಕಣ್ನೋಟಗಳಲ್ಲಿ ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಪತ್ತನ್ನು ಮುಂಗಂಡರು. ಇದಕ್ಕೆ ವ್ಯತಿರಿಕ್ತವಾಗಿ, ಆರೆಸ್ಸೆಸ್ ಅವರು ಪಾಶ್ಚಿಮಾತ್ಯ ವಿಚಾರಗಳನ್ನು ಎರವಲು ಪಡೆದರು ಮತ್ತು ಹಿಂದೂ ಪವಿತ್ರ ಪುಸ್ತಕಗಳಲ್ಲಿ ತಾವು ವೈಭವಯುತವೆಂದು ಪರಿಗಣಿಸುವದನ್ನು ನಿರ್ಲಕ್ಷಿಸಿದರು ಎಂದು ಸಂವಿಧಾನದ ಅವರ ಕರಡನ್ನು ಟೀಕಿಸಿದರು.

ಜಾತಿಯ ಬಗ್ಗೆ ಹೇಳುವುದಾದರೆ, ಅಂಬೇಡ್ಕರ್ ಎಂದಿಗೂ ಅದರ ನಿರ್ಮೂಲನೆಯೇ ಆಗಬೇಕು ಎಂದೇ ಬಯಸಿದರು. ಅವರ ಸಂವಿಧಾನವು ಕಾಲಾನಂತರದಲ್ಲಿ ಜಾತಿ ವ್ಯತ್ಯಾಸಗಳು ಮತ್ತು ತಾರತಮ್ಯವನ್ನು ನಿರ್ಮೂಲನೆ ಮಾಡುವ ಪರಿಸ್ಥಿತಿಗಳನ್ನು ಸೃಷ್ಟಿಸಲು ಮೀಸಲಾತಿ ನೀತಿಯನ್ನು ಮುಂದುವರೆಸಿತು. ಪ್ರಬಲ ಸಮುದಾಯಗಳಲ್ಲಿ ಮೀಸಲಾತಿಗೆ ವಿರೋಧವು 1981 ರಲ್ಲಿ ಗುಜರಾತ್‌ನಲ್ಲಿ ದಲಿತ ವಿರೋಧಿ ಹಿಂಸಾಚಾರ ಮತ್ತು 1986 ರಲ್ಲಿ ಉದ್ಯೋಗ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ವಿರುದ್ಧ ಇದೇ ರೀತಿಯ ಹಿಂಸಾಚಾರವಾಗಿ ಹೊರಹೊಮ್ಮಿತು.

ಸಾಮಾಜಿಕ ಇಂಜಿನಿಯರಿಂಗ್ ಮತ್ತು ‘ಯೂತ್ ಫಾರ್ ಇಕ್ವಾಲಿಟಿ’

ಭಾರತವು ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ ನಂತರ, ಆರೆಸ್ಸೆಸ್ ಬಾಬರಿ ಮಸೀದಿ ಇದ್ದಲ್ಲಿ ರಾಮಮಂದಿರ ಕಟ್ಟಬೇಕೆಂದು ಒತ್ತಾಯಿಸಿ ತನ್ನ ಚಳುವಳಿಯನ್ನು ಬಲಪಡಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ವಿದ್ಯಮಾನವನ್ನು ಅಚ್ಚುಕಟ್ಟಾಗಿ ವಿವರಿಸಿದರು, ಮಂಡಲಕ್ಕೆ ಒಂದು ಸ್ಪಂದನೇ ಬೇಕಾಗಿತ್ತು, ಅದು ಕಮಂಡಲದಲ್ಲಿ, ಅಂದರೆ ಹಿಂದೂ ಧರ್ಮದಲ್ಲಿ ಸಿಕ್ಕಿತು ಎಂದರು.

ಹೀಗೆ, ಒಂದೆರಡು ವರ್ಷಗಳ ಹಿಂದೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು ಪರಿಚಯಿಸಿದಂತೆ, ಆರೆಸ್ಸೆಸ್ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಮೀಸಲಾತಿ ಕ್ರಮವನ್ನು ದುರ್ಬಲಗೊಳಿಸಬಲ್ಲದು. ಇದು ಸಾಮಾನ್ಯವಾಗಿ “ಸಾಮಾಜಿಕ ಎಂಜಿನಿಯರಿAಗ್” ಎಂದು ಕರೆಯಲ್ಪಡುವ ಕ್ರಿಯೆಯ ಮೂಲಕ ಅದು ದಲಿತ, ಹಿಂದುಳಿದ ಮತ್ತು ಆದಿವಾಸಿ ಸಮುದಾಯಗಳ ಸದಸ್ಯರಿಗೆ ತನ್ನಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದೆ. ದಲಿತರು ಮತ್ತು ಹಿಂದುಳಿದವರಿಗಾಗಿ ಸಾಮಾಜಿಕ ಸಮರಸತಾ ಮಂಚ್, ಆದಿವಾಸಿಗಳಿಗಾಗಿ ವನವಾಸಿ ಕಲ್ಯಾಣ ಆಶ್ರಮ ಮತ್ತು ಇತರ ಅನೇಕ ಸಮುದಾಯಗಳನ್ನು ತನ್ನ ಹಿಂದೂ ರಾಷ್ಟ್ರದ ಅಜೆಂಡಾಕ್ಕೆ ಗೆದ್ದುಕೊಳ್ಳುವ ಸಂಸ್ಥೆಗಳನ್ನು ಇದು ತೇಲ ಬಿಡುತ್ತದೆ. ತಳ ಸಮುದಾಯಗಳ ವೀರರನ್ನು ಮುಸ್ಲಿಮರಿಗೆ ಎದುರಾಗಿ ಶತ್ರುಗಳಲ್ಲದಿದ್ದರೂ, ‘ಐತಿಹಾಸಿಕ ಎದುರಾಳಿ’ಗಳಾಗಿ, ಆರಿಸಿ ಪ್ರಸ್ತುತ ಪಡಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಪಾಸ್ಸಿ ದಲಿತ ಸಮುದಾಯದ ರಾಜಾ ಸುಹೇಲ್‌ದೇವ್. ಮೊದಲು ಆತನನ್ನು ವೈಭವೀಕರಿಸಿತು, ನಂತರ ಆತ ಮುಸ್ಲಿಂ-ವಿರೋಧಿಯೆಂಬ ಸ್ವರೂಪ ಕೊಟ್ಟಿತು.

ದಲಿತ ನಾಯಕರು ಬಿಜೆಪಿಯ ಅಧಿಕಾರದತ್ತ ಸೆಳೆಯಲ್ಪಟ್ಟಿದ್ದಾರೆ, ವಿಶೇಷವಾಗಿ 2014 ರಿಂದ ಅದು ರಾಷ್ಟ್ರೀಯ ಚುನಾವಣೆಗಳಲ್ಲಿ ವ್ಯಾಪಕ ಗೆಲುವು ಪಡೆಯಲಾರಂಭಿಸಿದಾಗಿನಿಂದ. ಇದು ಹಿಂದುತ್ವ ದೇವಗಣದಲ್ಲಿ ತುಂಬಾ ಕೆಳಗಣ ಸ್ಥಾನಮಾನ ಪಡೆದಿರುವ ಸಮುದಾಯಗಳ ನಡುವೆ ತನ್ನ ಚುನಾವಣಾ ಮತ್ತು ಸೈದ್ಧಾಂತಿಕ ಬೇರುಗಳನ್ನು ಅಗೆದು ಸೇರಿಸಲು ಆರೆಸ್ಸೆಸ್‌ಗೆ ಸಹಾಯ ಮಾಡಿತು. ಅದು ಮೀಸಲಾತಿಯ ಸಕಾರಾತ್ಮಕ ಕ್ರಮವನ್ನು ಬುಡಮೇಲು ಮಾಡುವ ರೀತಿಯಲ್ಲಿ ‘ಸೇವೆ’ ಎಂಬುದನ್ನೂ ಮಾಡುತ್ತದೆ.

ಗೌತಮ್ ಅವರು ತಮ್ಮ ಪಕ್ಷವು ತಮ್ಮ ಪರವಾಗಿ ನಿಲ್ಲದೇ ಹೋದಾಗ ರಾಜೀನಾಮೆ ನೀಡಿರುವುದರಲ್ಲಿ ಆಶ್ಚರ್ಯವೇನಿದೆ? ಅದು ತಮ್ಮ ಧಾರ್ಮಿಕ ಗುರುತನ್ನು ಆರಿಸಿಕೊಳ್ಳುವ ನಾಗರಿಕರ ಹಕ್ಕುಗಳ ಪರವಾಗಿಯೂ ನಿಲ್ಲಲಿಲ್ಲ. ನಿಜವಾಗಿ, ಇದು ಅಂಬೇಡ್ಕರ್ ಹೋರಾಟ ಮಾಡಿದ ಸಾಮಾಜಿಕ ನ್ಯಾಯದ ಗುರಿಸಾಧನೆಗೆ ದ್ರೋಹ ಬಗೆದಿದೆ. ಕೇಜ್ರೀವಾಲ್ ಚಾರಿತ್ರಿಕವಾಗಿ ಅಂಚಿಗೆ ತಳ್ಳಲ್ಪಟ್ಟವರಿಗೆ ಮೀಸಲಾತಿಯ ಕ್ರಮವನ್ನು ವಿರೋಧಿಸುವ ‘ಯೂತ್ ಫಾರ್ ಇಕ್ವಾಲಿಟಿ’ಯಲ್ಲಿ ಸಕ್ರಿಯರಾಗಿದ್ದರು ಎಂಬುದನ್ನು ಮರೆಯುವುದು ಕಷ್ಟ, ಎಎಪಿ ಆಡಳಿತವಿರುವ ರಾಜ್ಯಗಳಲ್ಲಿ ಅಂಬೇಡ್ಕರ್ ಅವರನ್ನು ಪೂಜನೀಯರು ಎಂದು ಬಿಂಬಿಸಿರುವುದು ಕೇವಲ ಚುನಾವಣಾ ಲಾಭಕ್ಕಾಗಿಯೇ ಹೊರತು ಸೈದ್ಧಾಂತಿಕ ಬದ್ಧತೆಯಿಂದಲ್ಲ ಎಂಬುದು ಕಳೆದ ಕೆಲವು ದಿನಗಳ ಘಟನೆಗಳಿಂದ ತೋರುತ್ತದೆ. ಬಹುಶಃ ಎಎಪಿ ಈ ಆರೋಪವನ್ನು ಅಲ್ಲಗಳೆಯುವುದು ಬಹಳ ಕಷ್ಟ.

ಅನು: ಕೆ.ವಿ, ಮೂಲ: ನ್ಯೂಸ್‌ಕ್ಲಿಕ್, ಅಕ್ಟೋಬರ್ 15

ಈಗ ಆತ (ಹಿಂದೂ ವೋಟ್) ದೇವರುಗಳಿಗೆ ರೇವ್ಡಿ ಅರ್ಪಿಸುತ್ತಿದ್ದಾರೆ… ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ
Donate Janashakthi Media

Leave a Reply

Your email address will not be published. Required fields are marked *