ಬ್ಲಾಕ್ ಮೇಲ್ ಮಾಡಿದವರಿಗೆ, ಹಣ ನೀಡಿದವರಿಗೆ, ಸಿಡಿ ತೋರಿಸಿ ಬೆದರಿಸಿದವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ
ಬೆಂಗಳೂರು ಜ 13 : ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. 15 ಕ್ಕೂ ಹೆಚ್ಚು ಶಾಸಕರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನ ಸಿಗದ ಕಾರಣ ಸಿಎಂ ವಿರುದ್ಧ ಅನೇಕ ಶಾಸಕರು ಆಕ್ರೋಶ ಹೊರಹಾಕಿದ್ದಾರೆ. ಹೆಚ್. ವಿಶ್ವನಾಥ್, ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಸತೀಶ್ ರೆಡ್ಡಿ, ಸುನಿಲ್ ಕುಮಾರ್, ರಾಮದಾಸ್ ಹಾಗೂ ಮುನಿರತ್ನ ಸೇರಿದಂತೆ 20 ಕ್ಕೂ ಹೆಚ್ಚು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಆರು ಬಾರಿ ಗೆದ್ದರೂ ಮಂತ್ರಿ ಸ್ಥಾನ ಸಿಗಲಿಲ್ಲ, ಸುಮ್ನೆ ಲೈಫ್ವೇಸ್ಟ್ ಆಯ್ತು ಎಂದು ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಲಿಸ್ಟ್ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ತಿಪ್ಪಾರೆಡ್ಡಿ ಬಿಜೆಪಿ ಸರ್ಕಾರ ಬರೋದಕ್ಕೆ ಸ್ಥಾನ ಕೊಟ್ಟಿದ್ದು ಸರಿ. ಆದರೆ ಸಿಪಿ ಯೋಗೇಶ್ವರ್ಗೆ ಯಾಕೆ ಮಂತ್ರಿ ಸ್ಥಾನಕೊಟ್ಟರು ಅಂತ ಗೊತ್ತಿಲ್ಲ. ಮಂತ್ರಿಸ್ಥಾನ ಅನ್ನೋದು ಕೇವಲ ಎರಡು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಸದ್ಯ ನನಗೆ ಸಾಕಾಗಿ ಹೋಗಿದೆ ನನ್ನ ಮಗನಿಗೂ ಈ ಕಷ್ಟ ಬೇಡ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸಚಿವರಾಗುವವರ ಹೆಸರು ಬಹಿರಂಗವಾಗುತ್ತಿದ್ದಂತೆಯೇ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬಹಿರಂಗವಾಗೇ ಸಿಎಂ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ ಶಾಸಕ ಸತೀಶ್ ರೆಡ್ಡಿ ‘ರೀ ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು?
ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ’ ಎಂದಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ವಾರ್ನಿಂಗ್ ನೀಡಿದರೂ ಜಗ್ಗದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ವಿರುದ್ಧ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಸೇರಿ ಕಾಂಗ್ರೆಸ್ ನಾಯಕರನ್ನು ಕೂಡ ಖರೀದಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಯತ್ನಾಳ್, ಬ್ಲಾಕ್ ಮೇಲ್ ಮಾಡಿದವರಿಗೆ, ಹಣ ನೀಡಿದವರಿಗೆ, ಸಿಡಿ ತೋರಿಸಿ ಬೆದರಿಸಿದವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತಿದೆ. ಎಂದು ಯತ್ನಾಳ ಆರೋಪ ಮಾಡಿದ್ದಾರೆ.