ಗುರುರಾಜ ದೇಸಾಯಿ
ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಆರೋಪ ಪ್ರತ್ಯಾರೋಪಗಳ ನಡುವೆ ಚುನಾವಣೆ ರಂಗು ಪಡೆದುಕೊಂಡಿದೆ. ಸರಕಾರದ ಸಾಲು ಸಾಲು ಹಗರಣ ಹಾಗೂ ಕಮೀಷನ್ ಆರೋಪ 2023ರ ಚುನಾವಣೆ ಗಮನವನ್ನುಸೆಳೆದಿದೆ, ಬಿಜೆಪಿಯ ಮೇಲೆ ಹಗರಣದ ತೂಗುಕತ್ತಿ ನೇತಾಡುತ್ತಿದೆ.
ರಾಜ್ಯದ ತುಂಬೆಲ್ಲ ಕಮಿಷನ್ ಸದ್ದು, 20, 30, 40% ಹೀಗೆ ಕಮಿಷನ್ ಪಟ್ಟಿ ಬೆಳೆಯುತ್ತಲೇ ಇದೆ. ಅಷ್ಟೆ ಯಾಕೆ ವಿಧಾನಸೌಧದ ಕಲ್ಲುಗಳಿಗೆ ಕಿವಿಗೊಟ್ಟು ಕೇಳಿದರೆ ಅದು ಕಾಸುಕಾಸು ಎನ್ನುವಷ್ಟರ ಮಟ್ಟಿಗೆ ಕಮಿಷನ್ ಬೆಳೆದು ಬಿಟ್ಟಿದೆ. ಚುನಾವಣಾ ಸಮಯದಲ್ಲಿ ಭ್ರಷ್ಟಾಚಾರದ ಕುರಿತು ಚರ್ಚೆಮಾಡ್ತಾ ಇರೋದು ಇದೇ ಮೊದಲೇನು ಅಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 10% ಸರಕಾರ ಎಂದು ಬಿಜೆಪಿ ಆರೋಪಮಾಡಿತ್ತು. ಆದರೆ ಸಾಕ್ಷಿಸಮೇತ ಸಾಬೀತು ಮಾಡುವಲ್ಲಿ ವಿಫಲವಾಗಿತ್ತು. ರಾಜಕೀಯಲಾಭದ ಆರೋಪ ಎಂದು ಅದು ಕಣ್ಮರೆಯಾಗಿ ಹೋಯ್ತು.
40% ಕಮಿಷನ್ ಆರೋಪ ಇಷ್ಟೊಂದು ಚರ್ಚೆ ಪಡೆದುಕೊಳ್ಳೊಕೆ ಕಾರಣವೂ ಇದೆ. ಗುತ್ತಿಗೆದಾರರ ಸಂಘದವರು ದಾಖಲೆ ಸಮೇತ ಪ್ರಧಾನಿಗೆ ದೂರು ನೀಡಿದ್ದಾರೆ. ಮೂವರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರ ತಲೆದಂಡ ಈ ಕಮೀಷನ್ ಕುಣಿಕೆ ಎಂತಹದ್ದು ಎಂಬುದನ್ನು ಸಾಕ್ಷಿಕರಿಸುತ್ತದೆ.
ಹೌದು, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು 40 ಕಮಿಷನ್ನ ಎಲ್ಲಾ ಆಯಾಮಗಳನ್ನು ತೆರೆದಿಡುತ್ತಾ ಹೋಗುತ್ತೆ. 40% ಕಮಿಷನ್ ಕುರಿತಾಗಿ ಈ ಮೊದಲು ಮುಖ್ಯಮಂತ್ರಿ, ಪ್ರಧಾನಮಂತ್ರಿ, ಬಿಜೆಪಿಯ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರಿಗೆ ಪತ್ರಬರೆದಿದ್ದರು. ಆ ಪತ್ರಕ್ಕೆ ಇವರು ಉತ್ತರ ಕೊಟ್ಟಿದ್ದರೆ ಬಹುಷಃ ಸಂತೋಷ್ ಪಾಟೀಲ್ ಸಾಯುತ್ತಿರಲಿಲ್ಲ.
ಏಪ್ರಿಲ್ 12, 2022, ರಂದು ಉಡುಪಿಯ ಶಾಂಭವೀ ಲಾಡ್ಜ್ನಲ್ಲಿ ನೇಣಿಗೆ ಕೊರಳೊಡ್ಡಿದ್ದರು, “ನನ್ನ ಸಾವಿಗೆ ಗ್ರಾಮೀಣ ಸಚಿವಕೆ.ಎಸ್ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದರು” ಒಂದು ವರ್ಷದಿಂದ ಬಾಕಿ ಉಳಿದಿರುವ ಬಿಲ್ ಪಾವತಿಗೆ ಸಚಿವರು ಮತ್ತು ಅವರ ಸಹಚರರು ಕಮಿಷನ್ ಕೇಳಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ರ ಬರೆದಿದ್ದರು. ಆ ಪತ್ರವನ್ನೊಮ್ಮೆ ಓದಿಕೊಂಡು ಬರೋಣ
“ಬಿಜೆಪಿ ಆಡಳಿತವಿರುವ ಹಿಂಡಲ ಗ್ರಾಮ ಪಂಚಾಯಿತಿಯಲ್ಲಿ ತಾನು ಮತ್ತು ಇತರ ಆರು ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೆವು. “ದೇವಸ್ಥಾನದ ಜಾತ್ರೆ ಇದ್ದ ಸಮಯದಲ್ಲಿ ಈಶ್ವರಪ್ಪ ಅವರನ್ನು ಭೇಟಿ ಮಾಡಿ ರಸ್ತೆಕಾಮಗಾರಿಗೆ ಅನುದಾನ ನೀಡುವಂತೆ ಕೋರಿದ್ದೆವು.” “ಸಚಿವರು ನನಗೆ ಮತ್ತು ಇತರ ಗುತ್ತಿಗೆದಾರರಿಗೆ ಕೆಲಸ ಪ್ರಾರಂಭಿಸಲು ಸೂಚಿಸಿ, ಕಾರ್ಯಾದೇಶವನ್ನು ನಂತರ ನೀಡುವುದಾಗಿ ತಿಳಿಸಿದರು,”
“ತಾವು ಮತ್ತು ಇತರೆ ಗುತ್ತಿಗೆದಾರರು ಒಟ್ಟಾಗಿ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಇದರಲ್ಲಿ ಹೆಚ್ಚಿನವು ರಸ್ತೆಕಾಮಗಾರಿಗಳಾಗಿವೆ. ಇದಕ್ಕಾಗಿ 4 ಕೋಟಿರೂ, ಹಣವ್ಯಯಿಸಿದ್ದೇವೆ. ಈ ಹಣವನ್ನು ಬಡ್ಡಿಗೆ ಸಾಲವಾಗಿ ಪಡೆಯಲಾಗಿದೆ. ಸಾಲಗಾರರು ಮರು ಪಾವತಿಗೆ ಒತ್ತಾಯಿಸುತ್ತಿದ್ದಾರೆ. ಕಾಮಗಾರಿ ತ್ವರಿತವಾಗಿ ನಡೆದಿದ್ದರೂ ಸರಕಾರ ದಿಂದ ಹಣ ಪಾವತಿಯಾಗಿಲ್ಲ. 2021 ರ ಮೇ ತಿಂಗಳಿನಲ್ಲಿಯೇ ಕಾಮಗಾರಿ ಪೂರ್ಣಗೊಂಡಿದ್ದು, ಬಿಲ್ಗಳನ್ನು ಬಿಡುಗಡೆ ಮಾಡುವಂತೆ ಈಶ್ವರಪ್ಪ ಅವರನ್ನು ಹಲವು ಬಾರಿಭೇಟಿ ಮಾಡಿದ್ದೆ.”
“ಕಾಲಕ್ರಮೇಣ ನಾನು 15 ಲಕ್ಷ ರೂಪಾಯಿ ಕಮಿಷನ್ ನೀಡುವಂತೆ ಸಚಿವರು ಅಂದರೆ ಈಶ್ವರಪ್ಪನವರು ಬೇಡಿಕೆ ಇಟ್ಟರು. ಈಶ್ವರಪ್ಪ ಅವರ ಸಹಚರರು ಒಟ್ಟು ಬಿಲ್ನ ಸುಮಾರು ಶೇ.40ರಷ್ಟನ್ನು ಒಂದೇ ಬಾರಿ ಪಾವತಿಸುವಂತೆ ಒತ್ತಾಯಿಸಿದರು. “ನಾನು ಸಚಿವರನ್ನು ಕನಿಷ್ಠ 80 ಬಾರಿ ಭೇಟಿ ಮಾಡಿದ್ದೇನೆ,” ಮೊದಲಿಗೆ ಕಮೀಷನ್ ಕೊಡುಬಿಲ್ಲ ಅದಾಗಿಯೇ ಬಿಡುಗಡೆ ಆಗುತ್ತೆ ಎಂದು ಹೇಳಿದರು ಎಂದು ನಡೆದ ಎಲ್ಲ ಘಟನೆಗಳನ್ನು ಬಿಡಿಬಿಡಿಯಾಗಿ ಪತ್ರದಲ್ಲಿ ವಿವರಿಸಿದ್ದರು”
ಕಾಮಗಾರಿ ಸಿಕ್ಕಿದ್ದ ಖುಷಿಗೆ ಸಾಲ ಮಾಡಿಕೊಂಡ ಕೆಲಸ ಮಾಡಿದ್ದ ಸಂತೋಷ್ಗೆ ಬಿಲ್ ಪಡೆಯಲು ಕಮೀಷನ್ ಕೇಳಿದಾಗ ಎದೆ ದಿಗಿಲೊಡೆದದ್ದು ನಿಜ. ಅಂದ ಹಾಗೇ ಸಂತೋಷ ಕೇವಲ ಗುತ್ತಿಗೆದಾರನಾಗಿರಲಿಲ್ಲ. ಬಿಜೆಪಿಯ ಕಾರ್ಯಕರ್ತನೂ ಆಗಿದ್ದ.
ಬಿಲ್ ಮಾಡುವುದಕ್ಕಾಗಿ 40 ಕಮಿಷನ್ ಕೇಳಲಾಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ಪ್ರತಿಭಟನೆಯನ್ನು ನಡೆಸಿದರು. ಬಹುತೇಕ ಕ್ಷೇತ್ರದಲ್ಲಿ 500 ಕೋಟಿಗೂ ಹೆಚ್ಚು ಕಾಮಗಾರಿ ನಡೆದಿದೆ. ಆದರೆ ಬಿಲ್ ಪಾವತಿಯಾಗುತ್ತಿಲ್ಲ. 40% ಕಮಿಷನ್ ನೀಡದ ಕಾರಣ ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿ, ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು.
ಬಿಜೆಪಿಯ ಕಮಿಷನ್ ಕಥೆ ಇಷ್ಟಕ್ಕೆ ಮುಗಿಯಲಿಲ್ಲ. ಕರ್ನಾಟಕ ರಾಜ್ಯಸಾಬೂನು ಹಾಗೂ ಮಾರ್ಜಕ ನಿಗಮಕ್ಕೆ ಟೆಂಡರ್ ನೀಡುವುದಕ್ಕಾಗಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ 80 ಲಕ್ಷರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಇನ್ನೊಬ್ಬ ಬಿಜೆಪಿಯ ಶಾಸಕ ಶ್ರೀಮಂತ್ ಪಾಟೀಲ್ ಲಕ್ಷಾಂತರರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಿಜೆಪಿ ಗೆದ್ದ ಪ್ರತಿಕ್ಷೇತ್ರದಲ್ಲೂ ಹಗರಣದ ಕುಣಿಕೆ ಕಾಣುತ್ತಲೆ ಇದೆ.
ಇನ್ನೂ ಇದೇ ವೇಳೆ ನೇಮಕಾತಿ ಹಗರಣದಲ್ಲೂ ಬಿಜೆಪಿಯ ಪಾಲು ದೊಡ್ಡದಿದೆ .ಪಿಎಸ್ಐ ನೇಮಕಾತಿ ಹಗರಣ, ಶಿಕ್ಷಣ ಇಲಾಖೆ, ಗೃಹ ಇಲಾಖೆ, ಕೆಪಿಎಸ್ಸಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನೇಮಕಾತಿ ಹಗರಣಗಳಲ್ಲಿ ಇಡೀ ದೇಶದ ಜನ ಬೆಚ್ಚಿ ಬೀಳುವಂತೆ ಮಾಡಿದ್ದು ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕರು ಕಿಂಗ್ಪಿನ್ಗಳಾಗಿ ಕೆಲಸ ಮಾಡಿದ್ದರು. ಇಲ್ಲಿಯವರೆಗೆ 70 ಜನರನ್ನು ಬಂಧಿಸಿ ವಿಚಾರಣೆಯನ್ನು ನಡೆಸಲಾಗುತ್ತಿದೆ .ಬಂಧಿತರಲ್ಲಿ ಬಹುತೇಕರು ಬಿಜೆಪಿಯ ಜೊತೆಗೆ ಸಖ್ಯವನ್ನು ಹೊಂದಿದವರು.
ಅಷ್ಟಕ್ಕೂ ಈ ಹಗರಣ ಬಯಲಿಗೆ ಬಂದಿದ್ದೆ ಒಂದು ರೋಚಕ ಕಥೇಯಾಗುತ್ತದೆ. ವಿರೇಶ್ ಎನ್ನುವ ಅಭ್ಯರ್ಥಿ ಪರೀಕ್ಷೆ ಪಾಸು ಮಾಡಿಕೊಟ್ಟರೆ ಹಣ ನೀಡುವುದಾಗಿ ಹೇಳಿದ್ದ ಅದರಂತೆ ಹಣದ ಆಸೆಗೆ ಬಿದ್ದಿದ್ದ ವಿರೇಶ್ ಗೆಳೆಯ, ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಜೊತೆ ಸೇರಿ ಡೀಲ್ ಖುದಿರಿಸುತ್ತಾರೆ. ಆದರೆ ವಿರೇಶ್ ಹಣಕೊಡದೆ ಇದ್ದಾಗ ವಿರೇಶ್ನ ಸ್ನೇಹಿತ ಆತನ ಓಎಮ್ಆರ್ ಶೀಟ್ನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಾನೆ. 20 ಪ್ರಶ್ನೆಗಳನ್ನು ಬರೆದಿರುವ ವಿರೇಶ್ಗೆ 121 ಅಂಕ ಹೇಗೆ ಬಂತು ಎಂಬೆಲ್ಲ ಪ್ರಶ್ನೆಗಳನ್ನು ಹಾಕಿ ಚರ್ಚೆ ಆರಂಭಿಸುತ್ತಾನೆ.
ಇನ್ನೂ ಈ ಹಗರಣ ನಡೆದೆದ್ದು ಹೇಗೆ ಎಂಬುದು ಎಲ್ಲರನ್ನೂ ದಿಗಿಲುಗೊಳಿಸುತ್ತದೆ.‘ಮುನ್ನಾಬಾಯಿ ಎಂಬಿಬಿಎಸ್’ ಸ್ಟೈಲ್ನಲ್ಲಿ ಅನೇಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಲೆಕ್ಟ್ರಾನಿಕ್ ಡಿವೈಸಿ ಬಳಸಿ ಉತ್ತರವನ್ನು ಬರೆಯಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.ಅದಕ್ಕಾಗಿ ಕೋವಿಡ್ನಲ್ಲಿ ಸತ್ತಹೋದವರ ಹೆಸರಿನಲ್ಲಿದ್ದ ಸಿಮ್ಕಾರ್ಡ್ಗಳನ್ನು ಬಳಸಿಕೊಳ್ಳಲಾಗಿದೆ.
ಕಳ್ಳನ ಆಟ ಕಳ್ಳನಿಂದಲೇ ಗೊತ್ತಾಗುತ್ತಿದೆ ಈ ಹಗರಣ ಹಿಂದೆ ಯಾರೆಲ್ಲ ಇದ್ದಾರೆ ಎಂದು ಅಗೆದು ಅಗೆದು ತೆಗೆದಾಗ ಪೊಲೀಸ್ ಇಲಾಖೆಯ ಅಧಿಕಾರಿಗಳು, ರಾಜಕಾರಣಿಗಳು, ಕೆಲ ಖಾಸಗಿ ಕಾಲೇಜುಗಳ ಮಾಲೀಕರು ಶ್ಯಾಮೀಲಾಗಿರುವುದು ಬೆಳಕಿಗೆ ಬರುತ್ತದೆ. ಗೃಹ ಸಚಿವ ಅರಗ ಜ್ಞಾನೇಂದ್ರರ ಪಾತ್ರವೂ ಇದರಲ್ಲಿ ಇದೆ ಎಂದು ಆರೋಪಿಸಲಾಗಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಗದರ್ಶನದಂತೆ ತನಿಖೆ ನಡೆದು ಎಲ್ಲರನ್ನೂ ಉಳಿಸುವ ಹಾಗೂ ಆರೋಪವನ್ನು ಪೊಲೀಸ್ ಅಧಿಕಾರಿಗಳ ಮೇಲೆ ಹಾಕಿ ಪ್ರಕರಣದಲ್ಲಿ ಸಿಲುಕಿರುವ ರಾಜಕಾರಣಿಗಳಿಗೆ ಕ್ಲೀನ್ ಚೀಟ್ ನೀಡಲು ತಯಾರಿ ಕೂಡ ನಡೆದಂತೆ ಕಾಣುತ್ತಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಹಿನ್ನೆಲೆ ಸಿಐಡಿ ತನಿಖೆ ನಡೆದಂತೆಲ್ಲಾ ಅಕ್ರಮಗಳ ಸಾಲುಗಳೇ ಹೊರ ಬೀಳುತ್ತಿವೆ. ಪಿಡಬ್ಲ್ಯೂಡಿ ಇಲಾಖೆ ನೇಮಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಶಿಕ್ಷಕರ ನೇಮಕಾತಿ, ಕೆಪಿಎಸ್ಸಿ ನೇಮಕಾತಿ ಹೀಗೆ ನಡೆದ ಎಲ್ಲಾ ನೇಮಕಾತಿಯಲ್ಲೂ ಹಗರಣದ ವಾಸನೇ ಇದ್ದೇ ಇದೆ.
ಇಷ್ಟೆಲ್ಲ ಹಗರಣಗಳು ನಡೆಯುತ್ತಿದ್ದರೂ ಸರಕಾರ ಮೌನವಾಗಿಯೇ ಇದೆ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಈ ಎಲ್ಲಾ ಹಗರಣಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ .ಈ ಹಗರಣಗಳು ಬಿಜೆಪಿಗೆ ತೂಗುಕತ್ತಿಯಾಗಿ ನೇತಾಡುತ್ತಿದೆ .ಕಳೆದ ಬಾರಿಯ ಚುನಾವಣೆಯಲ್ಲಿ, ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ, ಭ್ರಷ್ಟರನ್ನು ಬೆಳೆಸುವುದಿಲ್ಲ ಎಂದು ಅಬ್ಬರಿಸಿದ್ದ ಬಿಜೆಪಿ ಈಗ ಬ್ರಹ್ಮಾಂಡ ಬ್ರಷ್ಟಾಚಾರದಲ್ಲಿ ಸಿಲಿಕಿ ನಲಗುತ್ತಿದೆ. ಬಿಜೆಪಿ ಪಾಲಿಗೆ ಈ ಹಗರಣಗಳು, ಭ್ರಷ್ಟಚಾರ ಏನಾಗ ಬಹುದು ಮೇ 13ರ ವರೆಗೆ ಕಾದು ನೋಡಬೇಕಿದೆ.