ಗಾಜಿಪುರ ಗಡಿಯಲ್ಲಿ ರೈತರು-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ನವದೆಹಲಿ: ದೇಶದ ರಾಜಧಾನಿ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟಗಾರರು ಮತ್ತು ಮತ್ತು ಬಿಜೆಪಿ ಕಾರ್ಯಕರ್ತರು ನಡುವೆ ಘರ್ಷಣೆ ನಡೆದಿದೆ. ನಿನ್ನೆ ಮಧ್ಯಾಹ್ನ 12ರ ಹೊತ್ತಿಗೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಬಿಜೆಪಿ ಪಕ್ಷದವರ ಮೆರವಣಿಗೆ ತಲುಪುತ್ತಿದ್ದಂತೆಯೇ ಘರ್ಷಣೆ ಉಂಟಾಗಿದೆ. ಎರಡು ಕಡೆಯವರು ಕೋಲುಗಳ ಸಹಾಯದಿಂದ ಜಗಳವಾಡಿದರು ಎಂದು ವರದಿಯಾಗಿದೆ.

ಬಿಜೆಪಿಐ ಓರ್ವ ನಾಯಕನ ಸ್ವಾಗತಕ್ಕಾಗಿ ಪಕ್ಷದ ಅಪಾರ ಕಾರ್ಯಕರ್ತರು ಗಾಜಿಪುರ ಗಡಿಯಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕೃಷಿ ಕಾನೂನು ವಿರೋಧಿಸಿ ಕಳೆದ ನವೆಂಬರ್‌ನಿಂದ ನಿರಂತರವಾಗಿ ಧರಣಿ ಕುಳಿತಿರುವ ರೈತರೊಂದಿಗೆ ಬಿಜೆಪಿ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದರು ಎಂದು ತಿಳಿದು ಬಂದಿದೆ. ನಂತರ ಗಲಾಟೆ ಉಂಟಾಗಿದ್ದರಿಂದ  ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಖಾಲಿಮಾಡಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ಕರೆಗೆ ದುಡಿಯುವ ಜನರ ಭಾರೀ ಬೆಂಬಲ: ಎಐಕೆಎಸ್‍ ಅಭಿನಂದನೆ

ರೈತರ ವೇದಿಕೆ ಮತ್ತು ಮೇಲ್ಸೇತುವೆ ನಡುವಿನ ಇಕ್ಕಾಟದ ಜಾಗದಲ್ಲಿ ಬಿಜೆಪಿ ಮೆರವಣಿಗೆ ನಡೆಯುತ್ತಿತ್ತು. ಇನ್ನೂ ಈ ಮೆರವಣಿಗೆಯಲ್ಲಿ ನಮ್ಮ ಆಂದೋಲನದ ವಿರುದ್ಧವಾಗಿ ಘೋಷಣೆ ಕೂಗಲಾರಂಭಿಸಿದರು. ಘೋಷಣೆ ಕೂಗದಂತೆ ರೈತರು ಮನವಿ ಮಾಡಿದರೂ ಸಹ ಗಮನಕ್ಕೆ ತೆಗೆದುಕೊಳ್ಳದ ಬಿಜೆಪಿ ಕಾರ್ಯಕರ್ತರು ಕೋಲುಗಳಿಂದ ಹಲ್ಲೆ ನಡೆಸಲು ಮುಂದಾದರು ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ.

ಈ ಸಂದರ್ಭದಲ್ಲಿ ರಾಕೇಶ್ ಟಿಕಾಯತ್ ಅವರು ʻʻನಮ್ಮ ಸಂಘಟನೆಯ ವೇದಿಕೆ ರಸ್ತೆಯ ಮೇಲಿದೆ. ಹಾಗಂತ ಯಾರೂ ಬೇಕಾದ್ರೂ ವೇದಿಕೆಯನ್ನ ಉಪಯೋಗಿಸಿಕೊಳ್ಳವಂತಿಲ್ಲ. ಒಂದು ವೇಳೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಜೊತೆಯಾಗುವುದಾದರೆ ಬಿಜೆಪಿ ತೊರೆದು ಬನ್ನಿ. ಸುಮ್ಮನೆ ನಮ್ಮ ವೇದಿಕೆ ಮೇಲೆ ಬಂದು ಬಿಜೆಪಿಯ ಧ್ವಜ ತೋರಿಸಿ, ಇಲ್ಲಿಯ ಸ್ಥಳವನ್ನು ವಶಕ್ಕೆ ಪಡೆದಿದ್ದೇವೆ ಎಂದು ಪ್ರದರ್ಶನ ಪಡಿಸಿಕೊಳ್ಳುವುದು ಬೇಡ. ನಿಮಗೆ ಈ ವೇದಿಕೆ ಇಷ್ಟವಾಗಿದ್ರೆ, ನಮ್ಮ ಆಂದೋಲನದಲ್ಲಿ ಭಾಗಿಯಾಗಿ ಎಂದು ಧಾಳಿಕೋರರಿಗೆ ಅವರಿಗೆ ಖಾರವಾಗಿ ಉತ್ತರ ನೀಡಿದರು.

ಬಿಜೆಪಿ ನಮ್ಮ ಆಂದೋಲನವನ್ನು ಹಿಂಸೆಯ ಮೂಲಕ ಕೊನೆಗೊಳಿಸಲು ಮುಂದಾಗುತ್ತಿದೆ. ಇದಕ್ಕೆ ಇವತ್ತಿನ ಘಟನೆಯೇ ಸಾಕ್ಷಿ. ಗಾಜಿಪುರ ಗಡಿಯಲ್ಲಿ ನಡೆದದ್ದು ಬಿಜೆಪಿ ಕಾರ್ಯಕರ್ತರಿಂದ ಉಂಟಾದ ಹಿಂಸೆ. ಯಾವುದೇ ಗಾಳಿಸುದ್ದಿ ಮತ್ತು ಅವರ ಮಾತಿಗೆ ಮರಳಾಗದೇ ನೀವು ಹೋರಾಟದಲ್ಲಿ ಮುಂದುವರಿಯಿರಿ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಕರೆ ನೀಡಿದೆ

ಬಿಜೆಪಿಯವರಿಗೆ ಮೆರವಣಿಗೆ ನಡೆಸದಿರಲು ಅವಕಾಶ ನೀಡಬಾರದೆಂದು ಜಿಲ್ಲಾಡಳಿತ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅವರು ರೈತರೊಂದಿಗೆ ಕೆಟ್ಟದಾಗಿ ವರ್ತಿಸಿದರು. ವ್ಯವಸ್ಥಿತ ಷಡ್ಯಂತ್ರದಿಂದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಇದರ ವಿರುದ್ಧ ದೂರು ದಾಖಲಿಸಲಾಗುವುದು. ಸರ್ಕಾರದ ಈ ಪಿತೂರಿ ಯಶಸ್ವಿಯಾಗುವುದಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕುವ ವ್ಯರ್ಥ ಪ್ರಯತ್ನವನ್ನು ಮಾಡದಿರಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಕ್ತಾರ ಜಗ್ತಾರ್ ಸಿಂಗ್ ಬಾಜ್ವಾ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗಲಭೆಗೆ ಸಂಬಂಧಿಸಿದಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ “ತಾಳ್ಮೆಯಿಂದ ಇದ್ದೇವೆ, ಮಿತಿ ಮೀರಬೇಡಿ. ರಾಜಕೀಯ ನಾಯಕರು ಪ್ರತಿಭಟನೆಗಳ ನಡುವೆಯೂ ತಾಳ್ಮೆವಹಿಸಿದ್ದಾರೆ. ಯಾರೂ ತಮ್ಮ ಮಿತಿಯನ್ನು ಮೀರುವುದು ಒಳ್ಳೆಯದಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *