ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳು ಹಮ್ಮಿಕೊಂಡಿರುವ ಮೈಸೂರು ಚಲೋ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರೆ, ಒಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾದಯಾತ್ರೆ ಮೂರನೇ ದಿನವಾದ ಸೋಮವಾರ ಈ ಘಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತೆ ಗೌರಮ್ಮ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಾದಯಾತ್ರೆ ಮಧ್ಯದಲ್ಲೇ ಗೌರಮ್ಮ ಅವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಇದೇ ವೇಳೆ ಬೆಂಗಳೂರಿನ ಜಯನಗರ ಮಂಡಳದ ಉಪಾಧ್ಯಕ್ಷ ಶಂಕರ್ ಪಾದಯಾತ್ರೆ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ರಾಮನಗರದ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಬಿವೈ ವಿಜಯೇಂದ್ರ ಶಂಕರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಸೋಮವಾರ ಪಾದಯಾತ್ರೆ ವೀಕ್ಷಿಸಲು ತೆರಳಿದ್ದ ಬಾಲಕನೊಬ್ಬ ಕೂಡ ನಾಪತ್ತೆಯಾಗಿದ್ದು ಪಾದಯಾತ್ರೆ ಸಂಘಟಕರಿಗೆ ದೊಡ್ಡ ತಲೆನೋವಾಗಿದೆ. ಚನ್ನಪಟ್ಟಣದ ಬಳಿ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಯುವಕ ಕಾಣೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಅಕ್ರಮದ ಕುರಿತು ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಮಂಗಳವಾರ ನಾಲ್ಕನೇ ದಿನ ತಲುಪಿದೆ. ಹವಾಮಾನ ವೈಪರಿತ್ಯದಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಪಾದಯಾತ್ರೆ ವೇಳೆ ಮುಖಂಡರು ವಾಹನಗಳ ಆಶ್ರಯ ಪಡೆದರೆ ಕಾರ್ಯಕರ್ತರು ಯಾವುದೇ ಆಶ್ರಯ ಸಿಗದೇ ಪರದಾಡುವಂತಾಗಿದೆ.