ಲಖಿಂಪುರ ಖೇರಿ ಪ್ರಕರಣ : ಮತ್ತೆ ನಾಲ್ವರ ಬಂಧನ

ದೆಹಲಿ: ಲಖಿಂಪುರ ಖೇರಿಯಲ್ಲಿ ಅಕ್ಟೋಬರ್​ 3ರಂದು ರೈತರ ಮೇಲೆ ಕಾರು ಹರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇವರೆಲ್ಲ ಆಶೀಶ್​ ಮಿಶ್ರಾ ಆಪ್ತರು ಎಂದು ಹೇಳಲಾಗಿದ್ದು, ಒಬ್ಬ ಬಿಜೆಪಿ ಕಾರ್ಯಕರ್ತ ಇದ್ದಾರೆ. ಘಟನೆ ನಡೆದಾಗ ಈ ನಾಲ್ವರೂ ಎಸ್​ಯುವಿ ವಾಹನದ ಮೇಲೆ ಇದ್ದರು . ಅಲ್ಲಿಗೆ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 10ಕ್ಕೇರಿಕೆಯಾಗಿದೆ.

ಲಖಿಂಪುರ ಖೇರಿ ಪೊಲೀಸ್​ ಕ್ರೈಂಬ್ರ್ಯಾಂಚ್​ ಇದೀಗ ನಾಲ್ವರನ್ನು ಬಂಧಿಸಿದೆ. ಇದೀಗ ಬಂಧಿತರಾಗಿರುವ ನಾಲ್ವರನ್ನು ಎಸ್​ಐಟಿ ಅಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ವಿಚಾರಣೆ ನಡೆಯುತ್ತಿದೆ. ಬಂಧಿತರ ಹೇಳಿಕೆ ಆಧಾರದ ಮೇಲೆ ತನಿಖೆಯೂ ನಡೆಯುತ್ತಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬಂಧನಕ್ಕೆ ಒಳಗಾದವರನ್ನು ಸುಮಿತ್​ ಜೈಸ್ವಾಲ್​, ಶಿಶಿಪಾಲ್​, ಸತ್ಯ ಪ್ರಕಾಶ್​ ತ್ರಿಪಾಠಿ ಮತ್ತು ನಂದನ್​ ಸಿಂಗ್​ ಬಿಸ್ತ್​ ಎಂದು ಹೇಳಲಾಗಿದೆ. ಇನ್ನು ಪ್ರಕರಣದಲ್ಲಿ ಮುಖ್ಯ ಆರೋಪಿಗಳೆನಿಸಿರುವ ಆಶೀಶ್ ಮಿಶ್ರಾ, ಅಂಕಿತ್​ ದಾಸ್​, ಆಶೀಶ್​ ಪಾಂಡೆ, ಲವಕುಶ್​ ರಾಣಾ, ಶೇಖರ್​ ಭಾರ್ತಿ ಮತ್ತು ಲತೀಫ್​ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ.

ಇವರಲ್ಲಿ ಸುಮಿತ್​ ಜೈಸ್ವಾಲ್​ ತನ್ನನ್ನು ತಾನು ಬಿಜೆಪಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಅಯೋಧ್ಯಾಪುರಿ ನಿವಾಸಿಯಾಗಿದ್ದು, ಅಂದು ಘಟನೆ ನಡೆದಾಗ ಬನ್​ಬೀರ್​​ ಪುರದಲ್ಲಿ ನಡೆಯಲಿದ್ದ ಕುಸ್ತಿ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಡೆಪ್ಯೂಟಿ ಸಿಎಂ ಕೇಶವ್​ ಮೌರ್ಯ ಅವರನ್ನು ಸ್ವಾಗತಿಸಲು ಹೊರಟಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ, ರೈತರ ಮೇಲೆ ಕಾರು ಹರಿದ ವಿಡಿಯೋ ವೈರಲ್​ ಆದಾಗ, ಅದರಲ್ಲೊಂದು ಎಸ್​ಯುವಿ ವಾಹನದಿಂದ ವ್ಯಕ್ತಿಯೊಬ್ಬ ಓಡಿದ ದೃಶ್ಯ ಕಂಡುಬಂದಿತ್ತು. ಆ ವ್ಯಕ್ತಿ ಇದೇ ಸುಮಿತ್ ಎಂದು ಎನ್​ಡಿಟಿವಿ ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *