ಬಿಜೆಪಿ ಗೆದ್ದ ಕ್ಷೇತ್ರಗಳು 66 -ಠೇವಣಿ ಕಳಕೊಂಡ ಕ್ಷೇತ್ರಗಳು 31!

ಬೆಂಗಳೂರು: ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಆ ವೇಳೆಗೆ ಸರಕಾರ ನಡೆಸುತ್ತಿದ್ದ ಬಿಜೆಪಿ ತಾನು ಸ್ಪರ್ಧಿಸಿದ ಚುನಾವಣಾ ಕ್ಷೇತ್ರಗಳಲ್ಲಿ 29.5% ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿರುವುದು ಮಾತ್ರವಲ್ಲದೆ, 13.8% ಕ್ಷೇತ್ರಗಳಲ್ಲಿ ಠೇವಣಿಯನ್ನೂ ಕಳಕೊಂಡಿದೆ. ಇದು ಆ ಪಕ್ಷದ ‘ಮಟ್ಟಿಗೆ ದೇಶದಲ್ಲಿಯೇ ಅತೀ ಹೆಚ್ಚು. ಚುನಾವಣಾ ಫಲಿತಾಂಶಗಳನ್ನು ವಿಶ್ಲೇಷಣೆ ಮಾಡಿದಾಗ ಈ  ಸಂಗತಿ ಕಂಡು ಬಂದಿದೆ ಎಂದು ‘ದಿ ಹಿಂದು’ ದೈನಿಕದಲ್ಲಿ ಪ್ರಕಟವಾಗಿರುವ ವಿಶ್ಲೇಷಣೆ ತಿಳಿಸುತ್ತದೆ (ರೆಬೆಕ್ಕಾ ರೋಸ್‍ ವರ್ಗೀಸ್‍ ಮತ್ತು ವಿಘ್ನೇಶ್‍ ರಾಧಾಕೃಷ್ಣನ್, ಮೇ 24)

ಚುನಾವಣೆಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು 10,000ರೂ. ( ಪರಿಶಿಷ್ಟ ಜಾತಿ/ಪಂಗಡಗಳ ಅಭ್ಯರ್ಥಿಗಳು 5000ರೂ.) ಠೇವಣಿ ಇಡಬೇಕು. ಕನಿಷ್ಟ 16.67%( ಆರನೇ ಒಂದರಷ್ಟು) ಮತ ಗಳಿಸಿದರೆ ಮಾತ್ರ ಅದನ್ನು ಹಿಂದಿರುಗಿಸಲಾಗುತ್ತದೆ.  ಈ ಚುನಾವಣೆಗಳಲ್ಲಿ 66 ಸೀಟುಗಳಲ್ಲಿ ಮಾತ್ರ ಗೆದ್ದು ಅಧಿಕಾರ ಕಳಕೊಂಡಿರುವ ಬಿಜೆಪಿ 31 ಕ್ಷೇತ್ರಗಳಲ್ಲಿ ಠೇವಣಿ ಕಳಕೊಂಡಿರುವುದು ಕೂಡ ಗಮನಾರ್ಹ ಸಂಗತಿ ಎಂದು ವಿಶ್ಲೇಷಕರು ಹೇಳುತ್ತಾರೆ.

ಇದನ್ನೂ ಓದಿ:ಕರ್ನಾಟಕದ ಜನತೆಯಿಂದ ಬಿಜೆಪಿ ಸರಕಾರಕ್ಕೆ ಗೇಟ್ ಪಾಸ್ – ಭಾಗ 01

ಇನ್ನೂ ಗಮನಾರ್ಹ ಸಂಗತಿಯೆಂದರೆ, ದಕ್ಷಿಣ ಕರ್ನಾಟಕದಲ್ಲಿ ಅದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಕಳಕೊಂಡಿದೆ. ಅಲ್ಲಿ 38.46% ಕ್ಷೇತ್ರಗಳಲ್ಲಿ ಠೇವಣಿ ಕಳಕೊಂಡರೆ , ಮಧ್ಯಕರ್ನಾಟಕದಲ್ಲಿ 19.89% , ಬೆಂಗಳೂರಿನಲ್ಲಿ 11.11% ಮತ್ತು ಕಲ್ಯಾಣ ಕರ್ನಾಟಕದಲ್ಲಿ 6.45% ಸೀಟುಗಳಲ್ಲಿ ಕಳಕೊಂಡಿದೆ.

ರಾಷ್ಟ್ರ ಮಟ್ಟದಲ್ಲಿ ನಡೆದ ಇತ್ತೀಚಿನ ಚುನಾವಣೆಗಳಲ್ಲಿ 5%ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದ ಆರು ರಾಜ್ಯಗಳಲ್ಲಿ ಅದು 70% ಸೀಟುಗಳಲ್ಲಿ ಠೇವಣಿ ಕಳಕೊಂಡಿದೆ. ಇದು ಸಹಜ.

10%ಕ್ಕಿಂತ ಹೆಚ್ಚು ಸೀಟು ಪಡೆದ 22 ರಾಜ್ಯಗಳಲ್ಲಿ  16ರಲ್ಲಿ ಠೇವಣಿ ಕಳಕೊಂಡ ಸೀಟುಗಳ ಪ್ರಮಾಣ 5% ಕ್ಕಿಂತ ಕಡಿಮೆಯಿದೆ.  ಇದೂ ಸಹಜವೇ,

ಉಳಿದ ಆರು ರಾಜ್ಯಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಕಳಕೊಂಡಿರುವುದು ಕರ್ನಾಟಕದಲ್ಲಿ. ನಂತರದ ಸ್ಥಾನ ಗೋವಾದ್ದು, ಅಲ್ಲಿ 12.5% ಸೀಟುಗಳಲ್ಲಿ ಠೇವಣಿ ಕಳಕೊಂಡಿದೆ. ಒಡಿಶಾದಲ್ಲಿ 8.8% ಸೀಟುಗಳಲ್ಲಿ ಅದು ಠೇವಣಿ ಕಳಕೊಂಡಿದೆ. ಇದು ಕರ್ನಾಟಕದ ಮತದಾರ ತೀರ್ಪಿನ ವೈಶಿಷ್ಟ್ಯಗಳಲ್ಲಿ ಒಂದು.

Donate Janashakthi Media

Leave a Reply

Your email address will not be published. Required fields are marked *