ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಉಚ್ಚಾಟನೆ ಆದೇಶ ಹಿಂಪಡೆದ ಬಿಜೆಪಿ

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಮಾನತುಗೊಂಡಿದ್ದ ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ
ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರ ಉಚ್ಚಾಟನೆ ಆದೇಶವನ್ನು ಹಿಂಪಡೆಯಲಾಗಿದೆ.

ಕಳೆದ ವಿಧಾನಪರಿಷತ್ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅವರನ್ನು ಪಕ್ಷದಿಂಧ ಅಮಾನತು ಪಡಿಸಲಾಗಿತ್ತು.

ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಬಿಜೆಪಿ ಬಂಡಾಯ (ಪಕ್ಷೇತರ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ್ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಭಾರೀ ಪೈಪೋಟಿ ನೀಡಿದ್ದರು. ಈ ವೇಳೆ ಡಿ.ಟಿ ಶ್ರೀನಿವಾಸ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಪಕ್ಷದ ಬಗ್ಗೆ ತಾವು ತೋರಿದ ಬದ್ದತೆ,ನಡವಳಿಕೆ ಹಾಗೂ ಉಚ್ಚಾಟನೆ ಆದೇಶದ ಕುರಿತು ತಾವು ನೀಡಿದ ಉತ್ತರ ಗಮನಿಸಿ ಉಚ್ಚಾಟನೆ ಆದೇಶ ಹಿಂಪಡೆಯಲಾಗಿದೆ ಎಂದು ಪಕ್ಷದ ಶಿಸ್ತು ಸಮಿತಿ ತನ್ನ ಆದೇಶದಲ್ಲಿ ತಿಳಿಸಿದೆ. ಒಳ ಮೀಸಲಾತಿ ಗೊಂದಲ ಸೇರಿದಂತೆ ಹಲವು ಕಾರಣದಿಂದ ಹಿಂದುಳಿದ ಸಮುದಾಯ ಬಿಜೆಪಿ ಪರವಾಗಿಲ್ಲ ಎಂಬ ವರದಿಗಳಿಂದ ಬೆಚ್ಚಿರುವ ಹೈಕಮಾಂಡ್ ಇದೀಗ ಈ ಸಮುದಾಯಗಳನ್ನು ಓಲೈಸತೊಡಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯದ ಮುಖಂಡ ಹಾಗೂ ಕಾಡುಗೊಲ್ಲ ಸಮುದಾಯದ ಪ್ರಭಾವಿ ನಾಯಕ ಶ್ರೀನಿವಾಸ್ಗೆ ಮಣೆ ಹಾಕಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪತಿಯೇ ಪತ್ನಿಗೆ ತಲೆನೋವಾಗದಿರಲಿ, ಬಿಜೆಪಿಗೆ ನಿಷ್ಠೆಯಿಂದ ಶ್ರಮಿಸಲಿ ಎಂಬ ಸದುದ್ದೇಶದಿಂದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಿಂದುಳಿದ ವರ್ಗದ ಏಕೈಕ ಮಹಿಳಾ ಶಾಸಕಿಯಾಗಿರುವ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಲಿಲ್ಲ ಎನ್ನುವುದು ಕಾಡುಗೊಲ್ಲ ಸಮುದಾಯದ ಬಹುದೊಡ್ಡ ಅಸಮಾಧಾನಕ್ಕೆ ಕಾರಣವಾಗಿತ್ತು. ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಪೂರ್ಣಿಮಾ ಅವರು ನಾಯಕರ ಮೇಲೆ ಮುನಿಸಿಕೊಂಡಿದ್ದು, ಪಕ್ಷದ ಕಾರ್ಯಚಟುವಟಿಕೆಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನು ಅರಿತ ಕಾಂಗ್ರೆಸ್ ಪೂರ್ಣಿಮಾ ಅವರನ್ನು ಸೆಳೆಯಲು ಕಸರತ್ತು ನಡೆಸಿತ್ತು.

ಇದರಿಂದ ಎಚ್ಚೆತ್ತ ಬಿಜೆಪಿ ಪೂರ್ಣಿಮಾ ಅವರನ್ನು ಮನವೊಲಿಸಲು ಅವರ ಪತಿಯ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಈ ಮೂಲಕ ಪೂರ್ಣಿಮಾ ಅವರನ್ನು ಸಮಾಧಾನಪಡಿಸಲು ಮುಂದಾಗಿದೆ.

ಇದನ್ನೂ ಓದಿ : ಬಿಜೆಪಿಯವರು ಮಾಡಿರುವ ತಪ್ಪನ್ನು ನಾವು ಅಧಿಕಾರಕ್ಕೆ ಬಂದಾಗ ಸರಿ ಪಡಿಸುತ್ತೇವೆ : ಡಿಕೆಶಿ

ಪುರ್ಣಿಮಾ ಅವರಿಗೆ ಕಾಂಗ್ರೆಸ್ ಗಾಳ ಹಾಕಿತ್ತು. ಆದರೆ, , ಅದು ಸಕ್ಸಸ್ ಆಗದಿದ್ದರಿಂದ ಅಂತಿಮವಾಗಿ ಹಿರಿಯೂರ ಕ್ಷೇತ್ರಕ್ಕೆ ಮಾಜಿ ಸಚಿವ ಡಿ ಸುಧಾಕರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಪ್ರಕಟಿಸಿದೆ.

Donate Janashakthi Media

Leave a Reply

Your email address will not be published. Required fields are marked *