ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ಪರ ಪ್ರಚಾರ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ನಾಶವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಭಾನುವಾರ, 22 ಸೆಪ್ಟೆಂಬರ್ ರಂದು, ಹೇಳಿದ್ದಾರೆ.
ಮಲಿಕ್ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ವಿಧಿ ಅಡಿಯಲ್ಲಿ ಕಲ್ಪಿಸಲಾಗಿದ್ದ ‘ವಿಶೇಷ ಸ್ಥಾನಮಾನ’ವನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್ನಲ್ಲಿ ಹಿಂಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ನಲ್ಲಿ ಚುನಾವಣೆ ನಡೆಯುವ ಸಾದ್ಯತೆ ಇದೆ. ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನಾ-ಯುಬಿಟಿ ಹಾಗೂ ಶರದ್ ಪವರ್ ಅವರ ಎನ್ಸಿಪಿ-ಎಸ್ಪಿ ‘ಎಂವಿಎ’ ಮೈತ್ರಿಕೂಟದಲ್ಲಿವೆ. ಆಡಳಿತಾರೂಢ ‘ಮಹಾಯುತಿ’ ಸರ್ಕಾರದಲ್ಲಿ ಬಿಜೆಪಿ, ಶಿವಸೇನಾ ಮತ್ತು ಎನ್ಸಿಪಿ ಪಕ್ಷಗಳಿವೆ. ಶಿವಸೇನಾ (ಯುಬಿಟಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಮಲಿಕ್ ಮಾತನಾಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ – ಮೈದಾನದ ಗೇಟ್ ಬಿದ್ದು ನಿರಂಜನ್ ಸಾವು
ಚುನಾವಣೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಹಿನ್ನಡೆ ಅನುಭವಿಸುವುದಷ್ಟೇ ಅಲ್ಲ, ನಾಶವಾಗಲಿದೆ. ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಪ್ರಮುಖ ಪಾತ್ರವಹಿಸಲಿದ್ದಾರೆ. ನೀವು ಚಿಂತಿಸಬೇಕಿಲ್ಲ’ ಎಂದು ಹೇಳಿದ್ದಾರೆ.
‘ಎಂವಿಎಗೆ ಸಂಪೂರ್ಣ ಬೆಂಬಲ ನೀಡಲಿದ್ದೇನೆ. ಅದರ ಪರ ಪ್ರಚಾರವನ್ನೂ ಮಾಡಲಿದ್ದೇನೆ’ ಎಂದಿದ್ದಾರೆ.
‘ಮಹಾರಾಷ್ಟ್ರ ಚುನಾವಣೆಯು ರಾಷ್ಟ್ರದ ರಾಜಕೀಯದ ಮೇಲೆ ಪರಿಣಾಮ ಉಂಟುಮಾಡಲಿದೆ. ರಾಜ್ಯದ ಚುನಾವಣಾ ಫಲಿತಾಂಶವು ಬಿಜೆಪಿಯ ಶವ ಪೆಟ್ಟಿಗೆಗೆ ಕೊನೇ ಮೊಳೆಯಾಗಲಿದೆ’ ಎಂದು ಶನಿವಾರ ಅಭಿಪ್ರಾಯಪಟ್ಟಿದ್ದರು.
ಇದನ್ನೂ ನೋಡಿ: ಪಿಚ್ಚರ್ ಪಯಣ – 150 | ನಾಜಿ, ಫ್ಯಾಸಿ ಕಾಲಘಟ್ಟದಲ್ಲಿ ಪ್ರೊಪಗ್ಯಾಂಡ ಸಿನೆಮಾ – ಕೆ.ಫಣಿರಾಜ್ ಮುರಳಿ ಕೃಷ್ಣ ಮಾತುಕತೆ