ಬಿಜೆಪಿ ನನ್ನ ವಿರುದ್ಧ ಟೀಕೆಗೆ ಯಾವ ಕಾರ್ಡ್ ಬಳಸುತ್ತಿದೆ? ಅದು ಜಾತಿ ಕಾರ್ಡ್ ಅಲ್ಲವೇ?: ಡಿ.ಕೆ ಶಿವಕುಮಾರ್ ತಿರುಗೇಟು

ಬೆಂಗಳೂರು: ಉಪಚುನಾವಣೆಯಲ್ಲಿ ನಾನು ಜಾತಿ ಕಾರ್ಡ್ ಬಳಸುತ್ತಿದ್ದೇನೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ, ನನ್ನ ವಿರುದ್ಧ ಟೀಕೆ ಮಾಡಲು ಅಶ್ವತ್ಥ್ ನಾರಾಯಣ್, ಅಶೋಕ್, ಸೋಮಶೇಖರ್, ಸಿ.ಟಿ ರವಿ ಅವರನ್ನು ಬಿಟ್ಟು ಯಾವ ಕಾರ್ಡ್ ಬಳಸುತ್ತಿದೆ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಆ ಮೂಲಕ, ಬಿಜೆಪಿ ನನ್ನ ಮೇಲೆ ವಾಗ್ಪ್ರಹಾರ ನಡೆಸಲು ಮಂತ್ರಿ ಮಂಡಲದಲ್ಲಿರುವ ಒಕ್ಕಲಿಗ ಮುಖಂಡರನ್ನೇ ಛೂಬಿಟ್ಟಿದೆ. ಒಕ್ಕಲಿಗ ಜಾತಿ ಕಾರ್ಡನ್ನೇ ಬಳಸಿಕೊಳ್ಳುತ್ತಿದೆ ಎಂದು ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾಧ್ಯಮಗಳ ಜತೆ  ಡಿ.ಕೆ ಶಿವಕುಮಾರ್ ಮಾತನಾಡುತ್ತಾ, ‘ಪಕ್ಷ ಬಿಟ್ಟು ಬಿಜೆಪಿಗೆ ಹೋಗಲು. ನಾನು ಕಾರಣ ಎಂದು ಹೇಳಿರುವವರಿಗೆ ಒಳ್ಳೆಯದಾಗಲಿ. ಹಬ್ಬದ ದಿನ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವರಿಗೆ ಆದಷ್ಟು ಬೇಗನೆ ಬಡ್ತಿ ಸಿಗಲಿ.’

‘ಅವರಿಗೆ ಮಾರ್ಕೆಟ್ ಬೇಕು, ಪ್ರಮೋಷನ್ ಬೇಕು ಎಂದು ನನ್ನ ಬಗ್ಗೆ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನಮ್ಮ ಬಗ್ಗೆ ಮಾತನಾಡಿದರೆ ಮಾಧ್ಯಮಗಳು ಚೆನ್ನಾಗಿ ಪ್ರಚಾರ ಮಾಡುತ್ತವೆ. ಇಲ್ಲವಾದರೆ ಅವರನ್ನು ತೋರಿಸುವುದಿಲ್ಲ. ಹೀಗಾಗಿ ಅವರು ನನ್ನ ಹಾಗೂ ಸಿದ್ದರಾಮಯ್ಯನವರ ಹೆಸರನ್ನು ಎಲ್ಲೆಲ್ಲಿ ಬಳಸಿಕೊಳ್ಳಬೇಕೋ ಅಲ್ಲಿ ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ.’

‘ಕೆಲವರು ಕಾಂಗ್ರೆಸ್ಸಿಗೆ ಬೀಳುವ ಅಲ್ಪಸಂಖ್ಯಾತರ ಮತಗಳನ್ನು ತಪ್ಪಿಸಲು ಮತದಾರರ ಗುರುತಿನ ಚೀಟಿ ಕಸಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಯಾರು ಹೆದರಿಸುತ್ತಿದ್ದಾರೆ ಎಂಬುದರ ಬಗ್ಗೆ ಮತದಾರರೇ ಉತ್ತರ ನೀಡಲಿದ್ದಾರೆ.

ಎಲ್ಲರೂ ತಮ್ಮ ಜವಾಬ್ದಾರಿ ನಿಭಾಯಿಸುತ್ತಾರೆ:

ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಕೆಲವರು ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಕೆ.ಬಿ. ಕೋಳಿವಾಡ ಅವರು ಖಂಡಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಪಕ್ಷದಲ್ಲಿ ಯಾರಿಗೆ ಯಾವ ಜವಾಬ್ದಾರಿ ವಹಿಸಿದ್ದೇವೋ ಅವರು ಆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಚುನಾವಣೆ ಸಮಯ ಬರಲಿ, ಆಗ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡೋಣ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕು. ನಮಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಈ ಸರ್ಕಾರವನ್ನು ರಾಜ್ಯದ ಜನ ಕಿತ್ತೆಸೆದ ಮೇಲೆ ಆ ಬಗ್ಗೆ ಮಾತನಾಡೋಣ. ಈಗ ಉಪಚುನಾವಣೆ ಬಗ್ಗೆ ಮಾತ್ರ ಮಾತನಾಡೋಣ.’

ಜನರ ನೋವಿಗೆ ಸ್ಪಂದಿಸಲು ಸರ್ಕಾರ ವಿಫಲವಾಗಿದೆ: ರಾಜ್ಯದಲ್ಲಿ ಪ್ರವಾಹ ಎದುರಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಮಂತ್ರಿಗಳೂ ಇಲ್ಲ., ಅಧಿಕಾರಿಗಳು ನಿಯಂತ್ರಣದಲ್ಲಿ. ಬಡವರ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಯಾರಿಗೂ ಆಸಕ್ತಿ ಇಲ್ಲ. ಮುಖ್ಯಮಂತ್ರಿಗಳು ಕೇವಲ ಆಶ್ವಾಸನೆ ನೀಡುತ್ತಿದ್ದಾರೆ. ಕಳೆದ ವರ್ಷ ನೆರೆ ಸಮಯದಲ್ಲೂ ಕೇವಲ ಆಶ್ವಾಸನೆ ಕೊಟ್ಟರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಸರ್ಕಾರದ ಆದ್ಯತೆ ಕೇವಲ ಚುನಾವಣೆಯೇ ಹೊರತು ನೆರೆ ಸಂತ್ರಸ್ತರಲ್ಲ. ಜನರ ನೋವಿಗೆ ಸ್ಪಂದಿಸಲು ಸರ್ಕಾರ ವಿಫಲವಾಗಿದೆ. ದೆಹಲಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ತಮ್ಮದೇ ಪಕ್ಷದ ನಾಯಕರನ್ನು, ಸಂಸದರನ್ನು ಕರೆದುಕೊಂಡು ಹೋಗಿ ರಾಜ್ಯಕ್ಕೆ ಹಣ ತರಲು ಅವರಲ್ಲಿ ಶಕ್ತಿ ಇಲ್ಲ.

ಬಿಜೆಪಿ ಅಭ್ಯರ್ಥಿಯಿಂದ ತರಬೇತಿ ತಗೊಳೋಣ:

ರಾಜಕಾರಣದಲ್ಲಿ ನಮಗೆ ಕೆಲವು ವಿದ್ಯೆ ಗೊತ್ತಿರಲಿಲ್ಲ. ಈಗ ಅವರಿಂದ (ಮುನಿರತ್ನಂ ನಾಯ್ಡು) ಗೊತ್ತಾಗುತ್ತಿದೆ. ನಾನು ಬೆಳೀಬೇಕು ಅಂದ್ರೆ ಕೆಂಪೇಗೌಡರ ಪುಸ್ತಕ ಓದಬೇಕು ಎಂಬ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ.

ನಾವೆಲ್ಲರೂ ಸಿದ್ದರಾಮಯ್ಯ ಜತೆ ಇದ್ದೇವೆ:

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು. ಪಕ್ಷದ ಎಲ್ಲ ಶಾಸಕರು ಅವರ ಜತೆಗಿದ್ದೇವೆ. ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾವೆಲ್ಲರೂ ಅವರ ಜತೆ ಇದ್ದೆವು. ಅವರ ಜತೆ ಇದ್ದರೆ ತಪ್ಪೇನು?

ದೂರು ದಾಖಲಿಸಿರುವುದು ಸಂತೋಷ:

ನನ್ನ ಹೇಳಿಕೆ ವಿರುದ್ಧ ಬಿಜೆಪಿ ಕಾನೂನು ವಿಭಾಗ ಆಯೋಗಕ್ಕೆ ದೂರು ನೀಡಿದೆ ಸಂತೋಷ. ಆದರೆ ವಿಧಾನಸೌಧದಲ್ಲಿ ಶ್ರೀನಿವಾಸಗೌಡರು ತಮ್ಮ ಮನೆಗೆ ಅಶ್ವಥ್ ನಾರಾಯಣ ಅವರು 5 ಕೋಟಿ ರುಪಾಯಿ ತಂದಿದ್ದರು ಎಂದು ಹೇಳಿಕೆ ಕೊಟ್ಟಾಗ ಎಲ್ಲಿ ಹೋಗಿತ್ತು ಈ ಕಾನೂನು ವಿಭಾಗ? ಆಗ ಐಟಿ, ಸಿಬಿಐ ಸಂಸ್ಥೆಗಳು ಎಲ್ಲಿ ಹೋಗಿದ್ದವು? ಬಿಜೆಪಿ ಕಾನೂನು ವಿಭಾಗವು ಯಾಕೆ ಅವರಿಗೆ ನೋಟಿಸ್ ಕೊಡಲಿಲ್ಲ?’ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *