ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯದ ಬಳಿಯ ಪೆರಿಯಾರ್ ಪ್ರತಿಮೆ ತೆಗೆದು ಹಾಕುತ್ತೇವೆ – ಅಣ್ಣಾಮಲೈ

ತಿರುಚಿರಾಪಳ್ಳಿ: ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ ದೇವಾಲಯಗಳ ಬಳಿಯಿರುವ ತತ್ವಜ್ಞಾನಿ ಪೆರಿಯಾರ್ ಅವರ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುತ್ತೇವೆ ಎಂದು  ಎಲ್ಲಾ ರಾಜ್ಯದ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ನವೆಂಬರ್ 7ರ ಮಂಗಳವಾರ ಹೇಳಿದ್ದಾರೆ. ಪೆರಿಯಾರ್ ಪ್ರತಿಮೆಗಳನ್ನು ತೆಗೆದ ನಂತರ ವೈಷ್ಣವ ಮತ್ತು ಶೈವ ಮತದ ಸಂತರಾದ ಆಳ್ವಾರ್ ಮತ್ತು ನಾಯನಾರ್, ತಮಿಳು ಕವಿ, ಸ್ವಾತಂತ್ರ್ಯ ಹೋರಾಟಗಾರದ ತಿರುವಳ್ಳುವರ್ ಅವರ ಪ್ರತಿಮೆಗಳನ್ನು ಬಿಜೆಪಿ ಸ್ಥಾಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಶ್ರೀರಂಗಂನ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಾತನಾಡಿದ್ದ ಅವರು, “ಜನರ ವಿರೋಧಿ ಪಕ್ಷವಿದ್ದರೆ ಅದು ಡಿಎಂಕೆಯಾಗಿದೆ. ಉದಾಹರಣೆಗೆ, 1967 ರಲ್ಲಿ ಅವರು ಅಧಿಕಾರಕ್ಕೆ ಬಂದಾಗ, ಅವರು ಈ ದೇವಾಲಯದ ಹೊರಗೆ, ‘ದೇವರನ್ನು ನಂಬುವವರು ಮೂರ್ಖರು, ದೇವರನ್ನು ನಂಬುವವರು ಮೋಸ ಹೋಗಿದ್ದಾರೆ. ದೇವರನ್ನು ನಂಬಬೇಡಿ’ ಎಂಬ ಫಲಕವನ್ನು ಹಾಕಿದರು. ಎಲ್ಲ ದೇವಸ್ಥಾನಗಳ ಹೊರಗೆ ಇವುಗಳನ್ನು ಇಟ್ಟು ಯಾವುದೋ ಮಹಾನ್ ಸಾಧನೆ ಮಾಡಿದವರಂತೆ ಧ್ವಜ ಕಟ್ಟಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಸಂಸದ ಡಿ.ವಿ ಸದಾನಂದ ಗೌಡ

“ಅದಾಗ್ಯೂ, ಹಿಂದೂಗಳು ಇದನ್ನು ಲೆಕ್ಕಿಸದೆ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಹೀಗಾಗಿ ಇಂದು ಬಿಜೆಪಿ ಶ್ರೀರಂಗದ ನೆಲದಲ್ಲಿ ನಿಂತು ನಿರ್ಣಯ ಕೈಗೊಂಡಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ದೇವರಿಲ್ಲ ಎಂದು ಹೇಳುವ ಎಲ್ಲಾ ಪ್ರತಿಮೆಗಳು ಮತ್ತು ಧ್ವಜಸ್ತಂಭಗಳನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದ್ದಾರೆ.

ಶ್ರೀರಂಗಂ ದೇವಸ್ಥಾನದ ಹೊರಭಾಗದಲ್ಲಿ ಇರಿಸಲಾಗಿರುವ ದ್ರಾವಿಡ ನಾಯಕ, ಜಾತಿ ವಿರೋಧಿ ಮತ್ತು ವಿಚಾರವಾದಿ ಪೆರಿಯಾರ್ ಅವರ ಪ್ರತಿಮೆಯನ್ನು ಅಣ್ಣಾಮಲೈ ಉಲ್ಲೇಖಿಸಿದ್ದಾರೆ. ಅಲ್ಲಿರುವ ಪ್ರತಿಮೆಯ ಕೆಳಗಿರುವ ಫಲಕದಲ್ಲಿ ‘ದೇವರಿಲ್ಲ, ದೇವರಿಲ್ಲ, ದೇವರು ಇಲ್ಲವೇ ಇಲ್ಲ. ದೇವರನ್ನು ಕಂಡುಹಿಡಿದವನು ಮೂರ್ಖ. ದೇವರನ್ನು ಪ್ರಚಾರ ಮಾಡುವವನು ನೀಚ. ದೇವರನ್ನು ಪೂಜಿಸುವವನು ಅನಾಗರಿಕ’ ಎಂಬ  ಪೆರಿಯಾರ್ ಅವರ ಬೋಧನೆಗಳ ವಾಕ್ಯಗಳು ಇವೆ.

ವಾಸ್ತವದಲ್ಲಿ ತಮಿಳುನಾಡಿನಲ್ಲಿ ಪೆರಿಯಾರ್ ಅವರ ದೇವಾಲಯಗಳು ಸೇರಿದಂತೆ ಹಲವಾರು ಕಡೆಗಳಲ್ಲಿ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಆದರೆ ಅಣ್ಣಾ ಮಲೈ ಅವರು ಹೇಳಿರುವಂತೆ ಪೆರಿಯಾರ್ ಪ್ರತಿಮೆಗಳನ್ನು ರಾಜ್ಯದ ಎಲ್ಲಾ ದೇವಾಲಯಗಳ ಹೊರಗೆ ಇರಿಸಲಾಗಿದೆ ಎಂಬುದು ಸುಳ್ಳಾಗಿದೆ.

ಇದನ್ನೂ ಓದಿ: ಹರಿಯಾಣ| ನಕಲಿ ಮದ್ಯ ಸೇವನೆ ಶಂಕೆ; 6 ಮಂದಿ ಸಾವು

ತಮಿಳಿನ ಪ್ರಸಿದ್ಧ ಕವಿ ತಿರುವಳ್ಳುವರ್‌ ಅವರಿಗೆ ಬಿಜೆಪಿ ಮತ್ತು ಬಲಪಂಥೀಯರು ಕೇಸರಿ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ತಮಿಳುನಾಡಿನಲ್ಲಿ ತ್ರಿವಳ್ಳುವರ್ ಅವರನ್ನು ಹೆಚ್ಚಾಗಿ ಜಾತ್ಯತೀತ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. 2019 ರಲ್ಲಿ ಹಿಂದೂ ಮಕ್ಕಳ್ ಕಚ್ಚಿ ಸಂಸ್ಥಾಪಕ ಅರ್ಜುನ್ ಸಂಪತ್ ಅವರು ತಿರುವಳ್ಳುವರ್ ಪ್ರತಿಮೆಯ ಸುತ್ತಲೂ ಕೇಸರಿ ನಿಲುವಂಗಿಯನ್ನು ಹೊದಿಸಿ ಅದರ ಕುತ್ತಿಗೆಗೆ ರುದ್ರಾಕ್ಷಿ ಮಣಿಗಳನ್ನು ಹಾಕಿದಾಗ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.

ಸನಾತನ ಧರ್ಮದ ವಿವಾದವನ್ನು ಉಲ್ಲೇಖಿಸಿದ ಅಣ್ಣಾಮಲೈ, “ಸನಾತನ ಧರ್ಮವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಡಿಎಂಕೆ ಹೇಳುತ್ತಾರೆ. ತಮಿಳುನಾಡಿನ ಡಿಎಂಕೆ ಎಂಬ ದುಷ್ಟ ಶಕ್ತಿಯು ತಮಿಳುನಾಡಿನ ಹಿಂದೂಗಳಿಗೆ ಸನಾತನ ಧರ್ಮವನ್ನು ಆಚರಿಸಲು ಬಿಡುವುದಿಲ್ಲ ಎಂದು ಹೇಳಿದೆ. ತಮಿಳುನಾಡಿನ ಎಲ್ಲಾ ಪಕ್ಷಗಳು ತಾವು ಹಿಂದೂಗಳ ಮಿತ್ರರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರಲ್ಲಿ ಒಂದು ಪಕ್ಷ ಕೂಡಾ ದೇವರಿಲ್ಲ ಎಂದು ಹೇಳುವ ಪ್ರತಿಮೆಗಳನ್ನು ತೆಗೆದುಹಾಕುವುದಾಗಿ ಹೇಳುವುದಿಲ್ಲ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಹಾಲಿ ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯಕೇಂದ್ರ ಸರ್ಕಾರದ ಉತ್ಸುಕತೆಗೆ ಕಾರಣವೇನು?

Donate Janashakthi Media

Leave a Reply

Your email address will not be published. Required fields are marked *