ಗುವಾಹಟಿ: ಅಸ್ಸಾಂ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಭಾರತೀಯ ಜನತಾ ಪಕ್ಷ(ಬಿಜೆಪಿ) ಗೆ ಈಗ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ಬಿಕ್ಕಟ್ಟು ತಲೆದೂರಿದೆ.
ಸತತ ಎರಡನೇ ಬಾರಿ ಅಧಿಕಾರಕ್ಕೆ ಮರಳಿದ ಬಿಜೆಪಿ ಪಕ್ಷದ ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮತ್ತು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರವಾದ ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರೊಳಗೆ ಬಿಕ್ಕಟ್ಟು ತೀವ್ರವಾಗಿದ್ದೂ ಕೂಡಲೇ ಉಭಯ ನಾಯಕರಿಗೆ ದೆಹಲಿಗೆ ಬರುವಂತೆ ವರಿಷ್ಠರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇವರಿಬ್ಬರೂ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನು ಓದಿ: ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್‌ಡಿಎಫ್ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡಿನ ಎಂ ಕೆ ಸ್ಟಾಲಿನ್ ಮುಖ್ಯಮಂತ್ರಿ, ಪುದುಚೇರಿಯಲ್ಲಿ ರಂಗಸ್ವಾಮಿ ಅವರುಗಳು ಈಗಾಗಲೇ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಅಸ್ಸಾಂನಲ್ಲಿ ಬಿಜೆಪಿ ಪಕ್ಷಕ್ಕೆ ಶಾಸಕರ ಸಂಖ್ಯೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಜೆಪಿ ಪಕ್ಷದೊಳಗೆ ಅಸಮಧಾನವೆದ್ದಿದೆ.
ಅಸ್ಸಾಂ ರಾಜ್ಯದ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ ಅವರು 2016ರಲ್ಲಿ ಎನ್‌ಡಿಎ ಸಂಚಾಲಕರಾಗಿದ್ದ ಸಂದರ್ಭದಲ್ಲಿ ವಿಧಾನಸಭೆಗೆ ಎನ್‌ಡಿಎಗೆ ಬಹುಮತ ಬಂದ ಸಂದರ್ಭದಲ್ಲೂ ಅಂದಿನ ಮುಖ್ಯಮಂತ್ರಿ ತರುಣ್ ಗೋಗೊಯ್ ಅವರೊಂದಿಗೆ ಸಿಎಂ ಸ್ಥಾನಕ್ಕಾಗಿ ಜಗಳ ಮಾಡಿಕೊಂಡಿದ್ದರು. ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದರು ಮತ್ತು ಸಚಿವ ಸ್ಥಾನವನ್ನು ಅಲಂಕರಿಸಿ ಸತತ ಎರಡನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಇದನ್ನು ಓದಿ: ಸೂರ್ಯನ ಶಾಖಕ್ಕೆ ಎರಡೆಲೆ ಬಾಡಿದೆ, ಕಮಲ ಮುದುಡಿದೆ
ಸೊನೊವಾಲ್-ಕಾಚಾರಿ ಬುಡಕಟ್ಟು ಜನಾಂಗದವರಾದ ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರನ್ನು ಈ ಬಾರಿ ಚುನಾವಣೆಯಲ್ಲಿ ಅವರೇ ಮುಖ್ಯಮಂತ್ರಿ ಎಂದು ಬಿಂಬಿಸಿ ಬಿಜೆಪಿಯು ಚುನಾವಣಾ ಕಣಕ್ಕೆ ಇಳಿದಿತ್ತು.
ಬಿಜೆಪಿ ಹೈಕಮಾಂಡ್ ಈ ಎರ್ಪಟ್ಟಿರುವ ಬಿಕ್ಕಟ್ಟು ನಿವಾರಣೆಗಾಗಿ ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ನಡೆಯುವ ಸಭೆಯಲ್ಲಿ ಸೋನೊವಾಲ್ ಮತ್ತು ಹಿಮಾಂತ್ ಬಿಸ್ವಾ ಶರ್ಮಾ ಭಾಗವಹಿಸುತ್ತಿದ್ದು, ಈಶಾನ್ಯ ಭಾರತದ ಅಸ್ಸಾಂ ರಾಜ್ಯದ ಅಧಿಕಾರ ಯಾರ ಕೈ ಹಿಡಿಯಲಿದೆ ಎಂಬುದು ಕಾದು ನೋಡಬೇಕಾಗಿದೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ 60 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಎನ್‌ಡಿಎ ಮಿತ್ರಪಕ್ಷಗಳಾದ ಎಜಿಪಿ ಮತ್ತು ಯುಪಿಪಿಎಲ್ ಕ್ರಮವಾಗಿ ಒಂಬತ್ತು ಮತ್ತು ಆರು ಸ್ಥಾನಗಳನ್ನು ಗೆದ್ದಿವೆ.