- ಅತೀ ಹೆಚ್ಚು ಹಣ ಖರ್ಚು ಮಾಡಿದ್ದು ಬಿಜೆಪಿ
- ತೃಣಮೂಲ ಎರಡನೇ ಸ್ಥಾನದಲ್ಲಿ.
- ಡಿಎಂಕೆಗೆ ಮೂರನೇ, ಕಾಂಗ್ರೆಸ್ ಗೆ ನಾಲ್ಕನೇ ಸ್ಥಾನ
- ಅತೀ ಕಡಿಮೆ ಖರ್ಚು ಮಾಡಿದ್ದು ಎಡಪಕ್ಷಗಳು
ದೆಹಲಿ : 2021ರಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ಪಕ್ಷ ಬರೋಬ್ಬರಿ ₹ 252 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಈ ಪೈಕಿ ಶೇ. 60ರಷ್ಟು ಹಣವನ್ನು ಕೇವಲ ಪಶ್ಚಿಮ ಬಂಗಾಳ ರಾಜ್ಯ ಒಂದಕ್ಕೇ ಖರ್ಚು ಮಾಡಿದೆ ಎಂಬ ಅಚ್ಚರಿಯ ವಿಚಾರ ಬಯಲಾಗಿದೆ.
ವೆಚ್ಚದ ವಿವರಗಳನ್ನು ಬಿಜೆಪಿಯು ಚುನಾವಣಾ ಆಯೋಗಕ್ಕೆ ನೀಡಿದೆ. ₹ 252,02,71,753 ಮೊತ್ತವನ್ನು ಬಿಜೆಪಿ ಚುನಾವಣೆಗಾಗಿ ಖರ್ಚು ಮಾಡಿದೆ. ಈ ಪೈಕಿ ₹ 43.81 ಕೋಟಿಯನ್ನು ಅಸ್ಸಾಂ ಮತ್ತು ₹ 4.79 ಕೋಟಿಯನ್ನು ಪುದುಚೇರಿ ವಿಧಾನಸಭಾ ಚುನಾವಣೆಗಾಗಿ ಖರ್ಚು ಮಾಡಿದೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆಯನ್ನು ಡಿಎಂಕೆ ಅಧಿಕಾರದಿಂದ ಕೆಳಗಿಳಿಸಿತು. ತಮಿಳುನಾಡಿನಲ್ಲಿ ಶೇ 2.6ರಷ್ಟು ಮತ ಪಡೆದಿದ್ದ ಬಿಜೆಪಿ ಅಲ್ಲಿ ₹ 22.97 ಕೋಟಿ ವ್ಯಯಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದ ಬಿಜೆಪಿಯು ₹ 151 ಕೋಟಿ ವ್ಯಯಿಸಿತ್ತು. ಆದರೆ ಬಿಜೆಪಿಯ ಪ್ರಯತ್ನ ಫಲ ನೀಡಿರಲಿಲ್ಲ. ಕೇರಳದಲ್ಲಿ ಈ ಬಾರಿ ಒಂದಿಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಬಿಜೆಪಿ ಎಲ್ಡಿಎಫ್ ವಿರುದ್ಧದ ಹೋರಾಟದಲ್ಲಿ ಅಂಥ ಯಶಸ್ಸು ಸಿಕ್ಕಿರಲಿಲ್ಲ. ಕೇರಳ ಚುನಾವಣೆಗಾಗಿ ಬಿಜೆಪಿ ₹ 29.24 ಕೋಟಿ ಖರ್ಚು ಮಾಡಿತ್ತು.
ಚುನಾವಣಾ ಆಯೋಗಕ್ಕೆ ಬಿಜೆಪಿಯು ಸಲ್ಲಿಸಿರುವ ಚುನಾವಣಾ ವೆಚ್ಚದ ವರದಿಯಲ್ಲಿ ಈ ಮಾಹಿತಿ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ₹ 161 ಕೋಟಿ ವೆಚ್ಚ ಮಾಡಿದೆ. ತಮಿಳುನಾಡಿನಲ್ಲಿ ₹ 22.97 ಕೋಟಿ ವೆಚ್ಚ ಮಾಡಿದೆ. ಕೇರಳದಲ್ಲಿ ₹ 29.24, ಅಸ್ಸಾಂನಲ್ಲಿ ₹ 43.81 ಕೋಟಿ ಮತ್ತು ಪುದುಚೇರಿಯಲ್ಲಿ ₹ 4.79 ಕೋಟಿ ವೆಚ್ಚ ಮಾಡಿದೆ.
ಇದನ್ನೂ ಓದಿ : ತಮಿಳಿನಾಡಿನಲ್ಲಿ ಧಾರಾಕಾರ ಮಳೆ – 500 ರಸ್ತೆಗಳು ಜಲಾವೃತ, 14 ಮಂದಿ ಸಾವು
ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಂಡ ಟಿಎಂಸಿಯು, ಈ ಚುನಾವಣೆಗೆ ₹ 154.28 ಕೋಟಿ ವೆಚ್ಚ ಮಾಡಿದ್ದಾಗಿ ಘೋಷಿಸಿಕೊಂಡಿದೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದಿಂದ ಅಧಿಕಾರ ಕಿತ್ತುಕೊಂಡು ಗದ್ದುಗೆಗೆ ಏರಿದ ಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ 114.14 ಕೋಟಿ ರೂ.ಗಳನ್ನು ವ್ಯಯಿಸಿದೆ. ಈ ಖರ್ಚು ತಮಿಳುನಾಡು ಮತ್ತು ಪುದುಚೆರಿ ಎರಡೂ ಪ್ರದೇಶಗಳನ್ನು ಒಳಗೊಂಡಿದೆ. ಎಐಎಡಿಎಂಕೆ ಪಕ್ಷ 57.33 ಕೋಟಿ ರೂ. ಖರ್ಚು ಮಾಡಿದೆ.
ಪಂಚರಾಜ್ಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ 84.93 ಕೋಟಿ ರೂ. ವ್ಯಯಿಸಿದೆ. ಪಂಚರಾಜ್ಯ ಚುನಾವಣಾ ಪ್ರಚಾರಕ್ಕೆ ಅತಿ ಕಡಿಮೆ ಖರ್ಚು ಮಾಡಿದ ಪಕ್ಷ ಎಂದರೆ ಸಿಪಿಐಎಂ ಮತ್ತು ಸಿಪಿಐ ಈ ಎರಡು ಪಕ್ಷಗಳು ಒಟ್ಟು 30 ಕೋಟಿ ರೂ. ಒಳಗೆ ಖರ್ಚು ಮಾಡಿದೆ ಎಂದು ಚುನಾವಣಾ ಆಯೋಗ ಮಾಹಿತಿಯನ್ನು ಹೊರಹಾಕಿದೆ.