ಚುನಾವಣಾ ಲಾಭಕ್ಕಾಗಿ ಬಿಜೆಪಿಯು ‘ಲಜ್ಜೆಗೆಟ್ಟ ರಾಜಕಾರಣ’ ಮಾಡುತ್ತಿದೆ – ಸೀತಾರಾಮ್ ಯೆಚೂರಿ ಆಕ್ರೋಶ

ನವದೆಹಲಿ: ರಾಮ ಮಂದಿರ ನಿರ್ಮಾಣದ  ವಿಚಾರದಲ್ಲಿ ಬಿಜೆಪಿ ‘ಲಜ್ಜೆಗೆಟ್ಟ ರಾಜಕೀಯ’ ಮಾಡುತ್ತಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವು ತೋರಿಸಿಕೊಳ್ಳಲು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಯೆಚೂರಿ ಅವರು, ಹಿನ್ನಲೆಯಲ್ಲಿ ಕೇಸರಿ ಧ್ವಜವನ್ನು ಹೊಂದಿರುವ ಪ್ರಧಾನಿ ಮೋದಿಯವರ ಫೋಟೋದೊಂದಿಗೆ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ವಿವಿಧ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಹಲವಾರು ಜನರು ಹಂಚಿಕೊಂಡಿದ್ದಾರೆ.

ವಿವಾದಾತ್ಮಕ ಚಿತ್ರದಲ್ಲಿ, “500 ಕಿಮೀ ಮೆಟ್ರೋ, 51 ಕೋಟಿ ಬ್ಯಾಂಕ್ ಖಾತೆಗಳು, 4 ಕೋಟಿ ಉಚಿತ ಮನೆಗಳು, 315 ವೈದ್ಯಕೀಯ ಕಾಲೇಜುಗಳು, 45 ಕೋಟಿ ಮುದ್ರಾ ಸಾಲಗಳು, 220 ಕೋಟಿ ಉಚಿತ ಲಸಿಕೆಗಳು, 11 ಕೋಟಿ ಕುಟುಂಬಗಳು ಕೊಳವೆ ನೀರು, 10,000 ಜನೌಷಧಿ ಕೇಂದ್ರ, 10 ಕೋಟಿ ಜನರು ಎಲ್‌ಪಿಜಿ ಸಂಪರ್ಕ, 70,000 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ಮಾಡಿದ ನಂತರ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ” ಎಂದು ಬರೆಯಲಾಗಿದೆ.

ಈ ಚಿತ್ರದ ಬಗ್ಗೆ ಪತ್ರಿಕ್ರಿಯಿಸಿರುವ ಯೆಚೂರಿ ಅವರು, “ಇದು ಚುನಾವಣಾ ಲಾಭಕ್ಕಾಗಿ ದೇವಾಲಯ ನಿರ್ಮಾಣದ ಲಜ್ಜೆಗೆಟ್ಟ ರಾಜಕೀಯವಲ್ಲದೆ ಮತ್ತೇನು! ಜನರ ನಂಬಿಕೆ ಮತ್ತು ಧಾರ್ಮಿಕ ಭಾವನೆಗಳ ದುರುಪಯೋಗ ಮತ್ತು ಕಿರುಕುಳವಾಗಿದೆ” ಎಂದು ಯೆಚೂರಿ ಹೇಳಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ಆಹ್ವಾನ ವಿಚಾರ | ಕೊನೆಗೂ ತೀರ್ಮಾನ ಕೈಗೊಂಡ ಕಾಂಗ್ರೆಸ್ ಹೇಳಿದ್ದೇನು?

“ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣವನ್ನು ತನ್ನ ಕೈಯಿಂದ ದಾನ ಮಾಡಿದ್ದೇನೆ ಎಂಬಂತೆ ಬಿಂಬಿಸಿ ತಾನೊಬ್ಬ ಜನರ ಹಿತೈಷಿ ಎಂದು ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ. ತಪ್ಪಾದ ಮಾಹಿತಿಗಳು ಮತ್ತು ಸುಳ್ಳು ಪ್ರತಿಪಾದನೆಗಳ ಪ್ರೊಪಗಾಂಡ ಮೂಲಕ ಜನರನ್ನು ತಲುಪುವುದೆ ಮೋದಿಯ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳಾಗಿವೆ. ಅಧಿಕಾರದ ವ್ಯಾಮೋಹದ ಗೀಳು (ಮೆಗಾಲೋಮೇನಿಯಾ) ಅತ್ಯಂತ ಕೆಟ್ಟದಾಗಿದೆ!” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಯೆಚೂರಿ ಹೇಳಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರರು ಪಾಲ್ಗೊಳ್ಳುವ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಮುನ್ನ ಅವರು ಈ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಆಹ್ವಾನವನ್ನು ಯೆಚೂರಿ ಈ ಹಿಂದೆ ತಿರಸ್ಕರಿಸಿದ್ದರು. ಧರ್ಮವು ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ರಾಜಕೀಯ ಲಾಭದ ಸಾಧನವಾಗಿ ಪರಿವರ್ತಿಸಬಾರದು ಎಂದು ಪ್ರಮುಖ ಎಡಪಕ್ಷವಾದ ಸಿಪಿಐ(ಎಂ) ಹೇಳಿದೆ.

ವಿಡಿಯೊ ನೋಡಿ: ಮನೆ ಮನೆಗೆ ಬರುತ್ತಿರುವುದು ಮಂತ್ರಾಕ್ಷತೆಯೇ? ಬಿಜೆಪಿ ಪ್ರಣಾಳಿಕೆಯೇ? ಆರೆಸ್ಸೆಸ್ ಸಿದ್ಧಾಂತವೇ? Janashakthi Media

Donate Janashakthi Media

Leave a Reply

Your email address will not be published. Required fields are marked *