– ಕೊರೊನಾ ಲಾಕ್ ಡೌನ್ ನಿಯಮಗಳ ಉಲ್ಲಂಘನೆ ಆರೋಪ
ಕೊಯಮತ್ತೂರು: ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತಿದ್ದ ಖಡಕ್ ಐಪಿಎಸ್ ಅಧಿಕಾರಿ ಎಂದು ಕರೆಯಿಸಿಕೊಳ್ಳುತ್ತಿದ್ದ ರಿಯಲ್ ಸಿಂಗಂ ಅಣ್ಣಾಮಲೈ ಬಿಜೆಪಿ ಸೇರಿದ ಮರುದಿನವೇ ಕಾನೂನು ಉಲ್ಲಂಘನೆ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬಿಜೆಪಿಗೆ ಸೇರಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ತಮಿಳುನಾಡಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಯಮತ್ತೂರಿನಲ್ಲಿ ಕಾನೂನುಬಾಹಿರ ಸಭೆ ನಡೆಸಿದಕ್ಕಾಗಿ ಕೆ.ಅಣ್ಣಾಮಲೈ ಸೇರಿ ಪಕ್ಷದ ಕೆಲ ಕಾರ್ಯಕರ್ತರ ಮೇಲೆ ಕೊಯಮತ್ತೂರು ನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಕೊಯಮತ್ತೂರಿನ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಗುರುವಾರ ಅಣ್ಣಾಮಲೈ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ್ದರು. ಆದರೆ, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಪಕ್ಷದ ಕಚೇರಿಯಲ್ಲಿ ಬಹಳಷ್ಟು ಜನ ಕಾರ್ಯಕರ್ತರು ಸೇರಿರುವುದು ವರದಿಯಾಗಿದೆ.
ಅದಲ್ಲದೇ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಕೂಡ ಲಾಕ್‌ಡೌನ್ ಉಲ್ಲಂಘನೆಯಾಗಿದೆ. ನಂತರ, ಕೆ.ಅಣ್ಣಾಮಲೈ ತಮ್ಮ ವಾಹನದಿಂದಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಮೂಲಕ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಸಬ್ ಇನ್ಸ್‌ಪೆಕ್ಟರ್ ಸುಗನ್ಯಾ ಅವರು ನೀಡಿದ ದೂರಿನ ಆಧಾರದ ಮೇಲೆ, ಕತ್ತೂರು ಪೊಲೀಸರು ಕೆ.ಅಣ್ಣಾಮಲೈ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ನಂದಕುಮಾರ್, ಬಿಜೆಪಿ ರಾಜ್ಯ ಮಟ್ಟದ ನಾಯಕರಾದ ಜಿಕೆಎಸ್ ಸೆಲ್ವಕುಮಾರ್, ಎಸ್.ಆರ್.ಸೇಕರ್ ಮತ್ತು ಕನಗಸಬಪತಿ ಮತ್ತು ಇತರ ಕೆಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೆ.ಅಣ್ಣಾಮಲೈ ಹಾಗೂ ಇತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 269, 270, 285, 341 ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.